ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ ಮನೆ ಮಾಡಿದೆ. ಝಗಮಗಿಸೋ ಲೈಟಿಂಗ್ಸ್. ಮದುವಣಗಿತ್ತಿಯಂತೆ ಸಿಂಗಾರಗೊಂಡಿರೋ ಸನ್ನಿಧಿ. ರಥದಲ್ಲಿ ರಾಜನಂತೆ ಕಂಗೊಳಿಸ್ತಿರೋ ಚಿನ್ನದ ಉತ್ಸವ ಮೂರ್ತಿ. ಕಣ್ಮನ ತಣಿಸೋ ಲಕ್ಷ ಲಕ್ಷ ದೀಪಗಳ ಸಾಲು. ಕಿವಿಗೆ ಇಂಪು ನೀಡೋ ನಾದಸ್ವರ. ಎಲ್ಲೆಲ್ಲೂ ಜನವೋ ಜನ. ಹಬ್ಬದ ವಾತಾವರಣ.
ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರ ಅಂದ್ರೆ ಸಂಕಷ್ಟಗಳ ನಿವಾರಿಸೋ, ಸತ್ಯಕ್ಕೆ ಹೆಸರಾಗಿರೋ ಪುಣ್ಯಕ್ಷೇತ್ರ. ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದಲ್ಲಿರೋ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಕಳೆದ 5 ದಿನಗಳಿಂದ ನಡೆದ ಲಕ್ಷ ದೀಪೋತ್ಸವ ಸಂಪನ್ನಗೊಂಡಿದೆ. ನಿನ್ನೆ ಕೊನೆ ದಿನವಾಗಿದ್ರಿಂದ ಶ್ರೀ ಮಂಜುನಾಥ ಸ್ವಾಮಿಗೆ ಗೌರಿ ಮಾರುಕಟ್ಟೆ ಉತ್ಸವ ನಡೀತು. ಹೂ ಹಣ್ಣುಗಳಿಂದ ಸಿಂಗರಿಸದ್ದ ಬೆಳ್ಳಿ ರಥ ದಿವ್ಯಸನ್ನಿಧಿ ಮುಂಭಾಗದಿಂದ ಹೊರಟು, ಗೌರಿಮಾರುಕಟ್ಟೆಗೆ ಸಾಗ್ತು.
ಅದ್ಧೂರಿ ಉತ್ಸವಕ್ಕೆ ನಾದ ಸ್ವರಗಳು, ವಾಲಗ, ಡೊಳ್ಳು ಕುಣಿತ, ಶಂಖದಾಸರು ಮತ್ತು ಕಹಳೆ, ವೀರಗಾಸೆ ಸಾಥ್ ನೀಡಿದ್ವು. ಗೌರಿಮಾರುಕಟ್ಟೆಗೆ ತಲುಪಿದ ಶ್ರೀಸ್ವಾಮಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಇಡೀ ಧರ್ಮಸ್ಥಳದಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತರು ದೇವರ ಕಣ್ತುಂಬಿಕೊಳ್ಳೋದ್ರ ಜೊತೆಗೆ ಭಕ್ತಿ ಭಾವದಲ್ಲಿ ಮಿಂದೆದ್ರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರ ಮಾರ್ಗದರ್ಶನದಲ್ಲಿ ನಡೆದ ಅಂತಿಮ ದಿನದ ಪೂಜೆ ವಿಶೇಷವಾಗಿತ್ತು. ಮಧ್ಯರಾತ್ರಿ 2 ಗಂಟೆಗೆ ಆರಂಭವಾದ ರಥೋತ್ಸವ ಮುಂಜಾನೆ 6.30 ಕ್ಕೆ ಸ್ವಸ್ಥಾನ ಸೇರಿತ್ತು. ಮತ್ತೊಂದೆಡೆ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ರಸದೌತಣ ನೆರೆದಿದ್ದವರನ್ನ ರಂಜಿಸಿತು.