ಧಾರವಾಡ: ಧಾರವಾಡದಿಂದ (Dharawad) ಬೆಳಗಾವಿಗೆ ರೈಲಿನ ಮೂಲಕ ಹೋದರೆ ಬರೋಬ್ಬರಿ ಮೂರು ಗಂಟೆ ಬೇಕು. ಏಕೆಂದರೆ ಧಾರವಾಡದಿಂದ ಹೊರಡೋ ರೈಲು ಅಳ್ನಾವರ್, ಲೋಂಡಾ, ಖಾನಾಪುರ ಮೂಲಕ ಬೆಳಗಾವಿ ಮುಟ್ಟಬೇಕಿದೆ. ಆದರೆ ಈ ಮಾರ್ಗದ ಬದಲಿಗೆ ನೇರವಾಗಿ ಧಾರವಾಡ-ಬೆಳಗಾವಿಗೆ ರೈಲು ಮಾರ್ಗ ನಿರ್ಮಾಣ (Dharwad Belagavi New Railway Project) ಮಾಡಲು ಅನೇಕ ವರ್ಷಗಳಿಂದ ಒತ್ತಾಯ ಕೇಳಿ ಬಂದಿತ್ತು. ಬೆಳಗಾವಿ ಸಂಸದ ಸುರೇಶ ಅಂಗಡಿ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಬಳಿಕ ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿತು. ಒಂದು ವೇಳೆ ಈ ಯೋಜನೆ ಪೂರ್ಣಗೊಂಡರೆ, ಧಾರವಾಡದಿಂದ ಬೆಳಗಾವಿಗೆ ಮುಕ್ಕಾಲು ಗಂಟೆಯಲ್ಲಿಯೇ ತಲುಪಬಹುದಾಗಿದೆ. ಒಟ್ಟು 73 ಕಿ.ಮೀ. ಉದ್ದದ ಈ ಯೋಜನೆಗೆ ಧಾರವಾಡ ಜಿಲ್ಲೆಯಲ್ಲಿ 25 ಕಿ.ಮೀ. ಸರ್ವೆ ಕಾರ್ಯ ಮುಕ್ತಾಯವಾಗಿದೆ. ಇನ್ನುಳಿದ ಭೂಮಿ ಬೆಳಗಾವಿ ಜಿಲ್ಲೆಯಲ್ಲಿ ಬರುತ್ತದೆ. ಅಲ್ಲಿನ 48 ಕಿ.ಮೀ. ಭೂಮಿಯ ಸರ್ವೆ ಕಾರ್ಯ ನಡೆಯಬೇಕಿದೆ. ಈಗಾಗಲೇ ಸರ್ವೆ ಮಾಡಿದ ಖಾಸಗಿ ಕಂಪನಿಗೆ ಸುಮಾರು 12 ಲಕ್ಷ ರೂಪಾಯಿಯನ್ನು ರಾಜ್ಯ ಸರಕಾರ ನೀಡಬೇಕು. ಬಳಿಕವಷ್ಟೇ ಆ ಕಂಪನಿಯವರು ಬೆಳಗಾವಿಯಲ್ಲಿ ಸರ್ವೆ ಕಾರ್ಯ ಆರಂಭಿಸುತ್ತಾರೆ. ಇದಾದ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗುತ್ತದೆ.
ಈ ಮಾರ್ಗದ ನಿರ್ಮಾಣಕ್ಕೆ ಬೇಕಾಗಿರೋ ಭೂಮಿಯನ್ನು ಸ್ವಾಧೀನಪಡಿಸಿಕೊಡಬೇಕಾಗಿದ್ದು ರಾಜ್ಯ ಸರಕಾರದ ಜವಾಬ್ದಾರಿ. ಹಿಂದಿನ ಸರಕಾರ ವೇಳೆ ಈ ಕೆಲಸ ತುಂಬಾನೇ ವೇಗವಾಗಿ ನಡೆದಿತ್ತು. ಆದರೆ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಕೆಲಸಕ್ಕೆ ಹಿನ್ನೆಡೆಯಾಗಿದೆ.
ಧಾರವಾಡ, ಬೆಳಗಾವಿ ಜನರ ಹಲವಾರು ವರ್ಷಗಳ ಬೇಡಿಕೆಯ ಯೋಜನೆ ಇದು. ಆ ಯೋಜನೆ ಜಾರಿಯಾದರೆ ಜನರಿಗೆ ಪ್ರಯಾಣದ ವೇಳೆ ಉಳಿಯುತ್ತದೆ. ಇದೇ ಕಾರಣಕ್ಕೆ ಸುರೇಶ ಅಂಗಡಿಯವರು ರೈಲ್ವೆ ರಾಜ್ಯ ಸಚಿವರಾದ ಕೂಡಲೇ ಈ ಯೋಜನೆಗೆ ಒತ್ತು ನೀಡಿ, ಕೆಲಸ ಆರಂಭವಾಗುವಂತೆ ಮಾಡಿದ್ದರು. ಅವರ ನಿಧನದ ನಂತರ ಕೆಲಸದ ಗತಿ ಕಡಿಮೆಯಾಯಿತು. ಬಳಿಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಉತ್ಸುಕತೆ ತೋರಿದ್ದರಿಂದ ಸರ್ವೆ ಕಾರ್ಯ ಭರದಿಂದ ಸಾಗಿತು. ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸರಕಾರ ಈ ಯೋಜನೆಗೆ ಹತ್ತು ಕೋಟಿ ರೂಪಾಯಿ ಕೂಡ ನೀಡಲು ನಿರ್ಧರಿಸಿತ್ತು. ಆದರೆ ಇದೀಗ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕಾಗಿರೋ ರಾಜ್ಯ ಸರಕಾರದ ನಿರ್ಲಕ್ಷದಿಂದ ಈ ಯೋಜನೆ ನೆನೆಗುದಿಗೆ ಬಿದ್ದಂತಾಗಿದೆ.
ಈ ರೈಲು ಮಾರ್ಗ ನಿರ್ಮಾಣಕ್ಕೆ 827.78 ಎಕರೆ ಭೂಮಿ ಅವಶ್ಯಕತೆಯಿದೆ. ಪ್ರಾರಂಭಿಕ ಹಂತದಲ್ಲಿ 4 ಕಿಮೀ ನಷ್ಟು ಭೂಮಿ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೇ ಇಲಾಖೆಗೆ ಹಸ್ತಾಂತರ ಮಾಡಿದ ಬಳಿಕ ಮಾರ್ಗ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬಹುದಾಗಿತ್ತು. ಧಾರವಾಡ ವ್ಯಾಪ್ತಿಯಲ್ಲಿ ಒಟ್ಟು 10 ಹಳ್ಳಿಗಳ ಮೂಲಕ ಈ ಮಾರ್ಗ ಹೋಗಲಿದೆ. ಕೆಲಗೇರಿಯ ಮೂರು ಭಾಗಗಳಲ್ಲಿ 3.5 ಕಿ.ಮೀ., ಚಿಕ್ಕಮಲ್ಲಿಗೆವಾಡ ಭಾಗದಲ್ಲಿ 2.5 ಕಿ.ಮೀ. ಸೇರಿದಂತೆ ಅನೇಕ ಹಳ್ಳಿಗಳ ಕೊಂಚ ಪ್ರಮಾಣದ ಭೂಸ್ವಾಧೀನವಾಗಲಿದೆ. ಈ ಯೋಜನೆಯ ನೀಲ ನಕ್ಷೆ ಸಿದ್ಧಗೊಂಡಿದ್ದು, ಧಾರವಾಡ ತಾಲೂಕಿನ ಕ್ಯಾರಕೊಪ್ಪದಿಂದ ಆರಂಭವಾಗಿ ಐಐಟಿ, ಹೈಕೋರ್ಟ್, ಕಿತ್ತೂರು, ಹಿರೇಬಾಗೆವಾಡಿ ಮೂಲಕ ಸಾಗಲಿದೆ. ಆದರೆ ಇಲ್ಲಿಯವರೆಗೆ ಇಷ್ಟೆಲ್ಲಾ ಬೆಳವಣಿಗೆ ನಡೆದ ಮೇಲೆ ಅಂತಿಮ ಹಂತದ ಕೆಲಸವನ್ನು ರಾಜ್ಯ ಸರಕಾರವೇ ಮಾಡಬೇಕಿದೆ. ಆದರೆ ರಾಜ್ಯ ಸರಕಾರ ಮಾತ್ರ ಈ ಕಡೆ ಗಮನ ಹರಿಸದೇ ಇರೋದು ಬಿಜೆಪಿಯವರನ್ನು ಕೆರಳಿಸಿದೆ. ಡಬಲ್ ಇಂಜಿನ್ ಸರಕಾರವಿದ್ದಾಗ ಈ ಯೋಜನೆಗೆ ಎಲ್ಲ ಸಹಕಾರ ಸಿಕ್ಕಿತ್ತು. ಆದರೆ ಇದೀಗ ರಾಜ್ಯ ಸರಕಾರದಿಂದ ಯಾವುದೇ ಕೆಲಸವೇ ಆಗುತ್ತಿಲ್ಲ ಅನ್ನೋದು ಬಿಜೆಪಿಯವರ ಆರೋಪ.
ಇದನ್ನೂ ಓದಿ: ಧಾರವಾಡ: ಯುವತಿಯರನ್ನು ಛೇಡಿಸುತ್ತಿದ್ದ ಮೂವರನ್ನು ಬಂಧಿಸಿ ಬಿಫೋರ್-ಆಫ್ಟರ್ ವಿಡಿಯೋ ಟ್ವೀಟ್ ಮಾಡಿದ ಪೊಲೀಸರು
ಈ ಯೋಜನೆಗೆ ಒಟ್ಟು 927.47 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ರಾಜ್ಯ ಸರ್ಕಾರ ಉಚಿತ ಭೂಮಿ ಒದಗಿಸುವುದರ ಜೊತೆಗೆ ಕಾಮಗಾರಿಯ ವೆಚ್ಚದ ಅರ್ಧದಷ್ಟು ಹಣವನ್ನು ಒದಗಿಸಬೇಕಾಗುತ್ತದೆ. ಇನ್ನರ್ಧ ವೆಚ್ಚವನ್ನು ನೈರುತ್ಯ ರೈಲ್ವೆ ಭರಿಸಲಿದೆ. ರಾಜ್ಯ ಸರ್ಕಾರ ಭೂಮಿ ಹಸ್ತಾಂತರ ಮಾಡಿದ ದಿನದಿಂದ ಮೂರು ವರ್ಷದೊಳಗೆ ಮಾರ್ಗಪೂರ್ಣಗೊಳಿಸುವ ಹೊಣೆ ರೈಲ್ವೇ ಇಲಾಖೆಯದ್ದಾಗಿದೆ. ಒಟ್ಟಿನಲ್ಲಿ ಆರಂಭದಿಂದಲೂ ಸಾಕಷ್ಟು ವಿಘ್ನಗಳನ್ನು ಎದುರಿಸಿದ್ದ ಈ ಯೋಜನೆಗೆ ಇದೀಗ ಮತ್ತೊಂದು ವಿಘ್ನ ಎದುರಾಗಿದ್ದು, ಜನರ ಕನಸು ಕನಸಾಗಿಯೇ ಉಳಿಯೋ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಯೋಜನೆಗೆ ಭೂಸ್ವಾಧೀನ ಮಾಡಿಕೊಂಡು ರೈಲ್ವೆ ಇಲಾಖೆಗೆ ಹಸ್ತಾರಂತರಿಸಬೇಕಾಗಿದ್ದು ರಾಜ್ಯ ಸರಕಾರ. ಆದರೆ ಇದೀಗ ಆ ಕೆಲಸವನ್ನು ಸಿದ್ದರಾಮಯ್ಯ ಸರಕಾರ ಮಾಡುತ್ತಿಲ್ಲ. ಇತ್ತೀಚಿಗೆ ಯಾರೋ ಓರ್ವ ಸಚಿವರು ಕೂಡ ಎಲ್ಲಿಂದ ಹಣ ತರೋದು ಅಂತಾ ಕೇಳಿದ್ದಾರೆ. ಅವರೇ ಹೀಗೆ ಹೇಳಿದರೆ ಗತಿ ಏನು? ಮೂರು ತಿಂಗಳಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಲೇ ಇಲ್ಲ. ಎಲ್ಲವೂ ಸಂಪೂರ್ಣವಾಗಿ ನಿಂತು ಹೋಗಿವೆ. ಈ ಯೋಜನೆ ವಿಳಂಬವಾಗುತ್ತಿರೋದಕ್ಕೆ ರಾಜ್ಯ ಸರಕಾರವೇ ಕಾರಣ. ಭೂಸ್ವಾಧೀನ ಮಾಡಿಕೊಳ್ಳಲು ಇವರ ಬಳಿ ಹಣವೇ ಇಲ್ಲ. ಈ ಸರಕಾರಕ್ಕೆ ಆರ್ಥಿಕ ಶಿಸ್ತು ಕೂಡ ಇಲ್ಲ. ರಾಜ್ಯವನ್ನು ಹೇಗೆ ಅಭಿವೃದ್ಧಿಪಡಿಸಬೇಕೆನ್ನೋ ಕಲ್ಪನೆಯೇ ಇವರಿಗೆ ಇಲ್ಲದಿರೋದೇ ಇಂಥ ಸಮಸ್ಯೆಗಳಿಗೆ ಕಾರಣವಾಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: ಹುಬ್ಬಳ್ಳಿ ಧಾರವಾಡದ ಮೊದಲ ಮಹಿಳಾ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ರೇಣುಕಾ ಕೆ ಸುಕುಮಾರ್ ನೇಮಕ
ಇನ್ನು ಬಿಜೆಪಿ ಮುಖಂಡ ಪ್ರಮೋದ ಕಾರ್ಕೂನ್, ಡಬಲ್ ಇಂಜಿನ್ ಸರಕಾರವಿದ್ದಾಗ ಈ ಯೋಜನೆಗೆ ಎಲ್ಲ ಸಹಕಾರ ಸಿಕ್ಕಿತ್ತು. ಈ ಯೋಜನೆಗೆ ಬೇಕಾಗಿದ್ದ ಎಲ್ಲ ಕೆಲಸವೂ ಬೇಗನೇ ಆಗುತ್ತಿದ್ದವು. ಆದರೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಕೂಡಲೇ ಅಭಿವೃದ್ಧಿ ಕಾಮಗಾರಿಗೆ ಬ್ರೇಕ್ ಹಾಕಲಾಗಿದೆ. ಈ ಮಾರ್ಗದ ನಿರ್ಮಾಣ ಕಾರ್ಯದಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದರೆ ಗ್ಯಾರಂಟಿ ಯೋಜನೆಗಳ ಹಿಂದೆ ಬಿದ್ದಿರೋ ರಾಜ್ಯ ಸರಕಾರಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ಹಣವೇ ಇಲ್ಲ ಅನ್ನೋದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಅನ್ನುತ್ತಾರೆ.
ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿಯ ಅಧಿಕಾರಿ ನವೀನ್ ಹುಲ್ಲೂರು, ಈಗಾಗಲೇ ಧಾರವಾಡ ಜಿಲ್ಲೆಯಲ್ಲಿನ 25 ಕಿ.ಮೀ. ನಷ್ಟು ಸರ್ವೆ ಕಾರ್ಯ ಸಂಪೂರ್ಣಗೊಂಡಿದೆ. ಸರ್ವೆ ಮಾಡಿದ ಕಂಪನಿಗೆ ರಾಜ್ಯ ಸರಕಾರದಿಂದ ಹಣ ಬರಬೇಕು. ಆ ಹಣ ಬಂದ ಕೂಡಲೇ ಬೆಳಗಾವಿ ಜಿಲ್ಲೆಯಲ್ಲಿ ಸರ್ವೆ ಕಾರ್ಯ ಆರಂಭವಾಗುತ್ತದೆ. ಈ ಸರ್ವೆ ಕಾರ್ಯದ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗುತ್ತದೆ. ಭೂಸ್ವಾಧೀನದ ಬಳಿಕವಷ್ಟೇ ಈ ಕಾಮಗಾರಿಯನ್ನು ಆರಂಭಿಸಬಹುದಾಗಿದೆ ಅನ್ನುತ್ತಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ