ಕೆಂಪಣ್ಣ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದು ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ; ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಕಿಡಿ
HD Kumaraswamy vs Siddaramaiah; ಭ್ರಷ್ಟಾಚಾರದ ಆರೋಪವನ್ನೇ ಅನುಕಂಪವನ್ನಾಗಿ ಪರಿವರ್ತಿಸಿಕೊಳ್ಳುವ ‘ಸಿದ್ದಕಲೆ' ನನಗಂತೂ ಗೊತ್ತಿಲ್ಲ. ಒಂದೇ ಹುದ್ದೆಗೆ ಕರ್ನಾಟಕ ಮುಖ್ಯಮಂತ್ರಿ ಕಚೇರಿಯ ಐದಾರು ಟಿಪ್ಪಣಿಗಳು ‘ನಡೆದಂತೆ ಎಲ್ಲವನ್ನೂ ನುಡಿಯುತ್ತಿವೆ' ಹಾಗೂ ಆಯ್ದ ಕಿಸೆಗಳನ್ನು ಭರ್ತಿ ತುಂಬುತ್ತಿವೆ ಎಂದು ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದಾರೆ.
ಬೆಂಗಳೂರು, ಆಗಸ್ಟ್ 9: ಸೋಲಿನ ಆಘಾತದಿಂದ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಜೆಡಿಎಸ್ ನಾಯಕ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣನವರನ್ನು ಕಾಂಗ್ರೆಸ್ ಸರ್ಕಾರವು ಬೆಂಕಿಗೆ ಹಾಕಲು ಹೊರಟಿದೆ ಎಂದು ಆರೋಪಿಸಿದ್ದಾರೆ. ಗುತ್ತಿಗೆದಾರರಿಗೆ ಬಿಲ್ ಬಾಕಿ ಇರಿಸಿಕೊಂಡಿರುವ ಮತ್ತು ಹಣ ಬಿಡುಗಡೆಗೆ ಲಂಚ ಕೇಳಲಾಗಿದೆ ಎಂಬ ಆರೋಪಗಳ ಬಗ್ಗೆ ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ.
‘ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ’, ಇದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಹೊಸ ಹೇಳಿಕೆ. ಇದೇ ಕೆಂಪಣ್ಣನವರ 40 ಪರ್ಸೆಂಟ್ ಆರೋಪವನ್ನೇ ಅಸ್ತ್ರ ಮಾಡಿಕೊಂಡು, ಕೆಂಪಣ್ಣನವರ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ. ಇದು ಎಂಥಾ ಮನಸ್ಥಿತಿ? ಇದಕ್ಕೆ ಚಿಕಿತ್ಸೆ ಬೇಡವೇ ಎಂದು ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರದ ಆರೋಪವನ್ನೇ ಅನುಕಂಪವನ್ನಾಗಿ ಪರಿವರ್ತಿಸಿಕೊಳ್ಳುವ ‘ಸಿದ್ದಕಲೆ’ ನನಗಂತೂ ಗೊತ್ತಿಲ್ಲ. ಒಂದೇ ಹುದ್ದೆಗೆ @CMofKarnataka ಕಚೇರಿಯ ಐದಾರು ಟಿಪ್ಪಣಿಗಳು ‘ನಡೆದಂತೆ ಎಲ್ಲವನ್ನೂ ನುಡಿಯುತ್ತಿವೆ’ ಹಾಗೂ ಆಯ್ದ ಕಿಸೆಗಳನ್ನು ಭರ್ತಿ ತುಂಬುತ್ತಿವೆ! 4/5
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 9, 2023
ಭ್ರಷ್ಟಾಚಾರದ ಆರೋಪವನ್ನೇ ಅನುಕಂಪವನ್ನಾಗಿ ಪರಿವರ್ತಿಸಿಕೊಳ್ಳುವ ‘ಸಿದ್ದಕಲೆ’ ನನಗಂತೂ ಗೊತ್ತಿಲ್ಲ. ಒಂದೇ ಹುದ್ದೆಗೆ ಕರ್ನಾಟಕ ಮುಖ್ಯಮಂತ್ರಿ ಕಚೇರಿಯ ಐದಾರು ಟಿಪ್ಪಣಿಗಳು ‘ನಡೆದಂತೆ ಎಲ್ಲವನ್ನೂ ನುಡಿಯುತ್ತಿವೆ’ ಹಾಗೂ ಆಯ್ದ ಕಿಸೆಗಳನ್ನು ಭರ್ತಿ ತುಂಬುತ್ತಿವೆ ಎಂದು ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದಾರೆ.
ಹಣದುಬ್ಬರದಂತೆ ‘ಅತಿ ಉಬ್ಬರ’ವೂ ದೇಶಕ್ಕೆ ಒಳ್ಳೆಯದಲ್ಲ; ಕುಮಾರಸ್ವಾಮಿ ವ್ಯಂಗ್ಯ
ನಮ್ಮ ಸೋಲಿನ ಆಘಾತ ಇರಲಿ, ನಿಮ್ಮ ಶಾಸಕರ ವರಾತ ಕಥೆ ಏನು? 136 ಸೀಟು ಎಂದು ಬೀಗುತ್ತಿದ್ದೀರಿ, ಹಣದುಬ್ಬರದಂತೆ ‘ಅತಿ ಉಬ್ಬರ’ವೂ ದೇಶಕ್ಕೆ ಒಳ್ಳೆಯದಲ್ಲ. ಸಭ್ಯ ಭಾಷೆಯಲ್ಲೇ ತಮಗೆ ಹೇಳುತ್ತಿದ್ದೇನೆ. ಅರ್ಥವಾಗಿದೆ ಎಂದು ಭಾವಿಸುತ್ತೇನೆ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಕುಮಾರಸ್ವಾಮಿ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಸೋಲಿನ ಆಘಾತದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದೆ: ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು
ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿದ್ದ ಸಿದ್ದರಾಮಯ್ಯ, ನೀವು ನನ್ನ ವಿರುದ್ಧ ಮಾಡುತ್ತಿರುವ ವೈಯಕ್ತಿಕ ಮಟ್ಟದ ಆರೋಪಗಳು, ಭಾಷೆ ಗಮನಿಸಿದರೆ ಸೋಲಿನ ಆಘಾತದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತಿದೆ. ಶೀಘ್ರವಾಗಿ ಗುಣಮುಖರಾಗಿ ಎಂದಷ್ಟೇ ನಾನು ಹಾರೈಸಬಲ್ಲೆ ಎಂದು ತಿರುಗೇಟು ನೀಡಿದ್ದರು. ಇದಕ್ಕೆ ಮತ್ತೆ ಕುಮಾರಸ್ವಾಮಿ ಎದುರೇಟು ನೀಡಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:36 pm, Wed, 9 August 23