ತುಮಕೂರು: ಹೆಚ್ಎಎಲ್ನ ಬೃಹತ್ ಹೆಲಿಕಾಪ್ಟರ್ ತಯಾರಕಾ ಘಟಕವೊಂದನ್ನು (HAL Helicopter Factory) ಪ್ರಧಾನಿ ನರೇಂದ್ರ ಮೋದಿ ನಾಳೆ ಸೋಮವಾರ (ಫೆ. 6) ಉದ್ಘಾಟನೆ ಮಾಡಲಿದ್ದಾರೆ. ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಎಂಬಲ್ಲಿ 615 ಎಕರೆ ಜಾಗದಲ್ಲಿ ಈ ಹೆಲಿಕಾಪ್ಟರ್ ಘಟಕ ನಿರ್ಮಾಣವಾಗಿದೆ. ಹೆಲಿಪ್ಯಾಡ್, ಫ್ಲೈಟ್ ಹ್ಯಾಂಗಾರ್, ಅಡ್ಮಿನ್ ಕಟ್ಟಡ ಸೇರಿ ಕೆಲವಾರು ಸೌಲಭ್ಯಗಳನ್ನು ಈಗ ನಿರ್ಮಿಸಲಾಗಿದೆ. ಸದ್ಯ ನಾಳೆಯಿಂದ ಮೊದಲ ಹಂತದ ಕಾರ್ಯಾಚರಣೆಗಳು ನಡೆಯುತ್ತವೆ ಎನ್ನಲಾಗಿದೆ.
2016ರಲ್ಲಿ ಪ್ರಧಾನಿಯವರೇ (PM Narendra Modi) ಈ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಹೆಚ್ಎಎಲ್ ಬಳಿ ಭಾರತೀಯ ಮಿಲಟರಿಗೆ ಯುದ್ಧ ಹೆಲಿಕಾಪ್ಟರ್ ನಿರ್ಮಿಸುವ ಬಹಳಷ್ಟು ಯೋಜನೆಗಳಿವೆ. ಬೆಂಗಳೂರಿನಲ್ಲಿರುವ ಹೆಚ್ಎಲ್ನ ಮುಖ್ಯ ತಯಾರಕಾ ಸಂಕೀರ್ಣ ಸಾಕಾಗದೇ ಇರುವುದರಿಂದ ತುಮಕೂರಿನಲ್ಲಿ ಹೊಸದಾದ ಬೃಹತ್ ಘಟಕ ನಿರ್ಮಿಸಲಾಗಿದೆ.
ತುಮಕೂರಿನ ಈ ಹೆಲಿಕಾಪ್ಟರ್ ಫ್ಯಾಕ್ಟರಿಯಲ್ಲಿ ಮೊದಲಿಗೆ ಲೈಟ್ ಯುಟಿಲಿಟಿ ಹೆಲಿಕಾಪ್ಟರುಗಳನ್ನು (LUH Copters) ತಯಾರಿಸಲಾಗುತ್ತದೆ. ನಂತರ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರುಗಳು (LCH) ಮತ್ತು ಮಲ್ಟಿರೋಲ್ ಹೆಲಿಕಾಪ್ಟರುಗಳನ್ನು (IMRH) ತಯಾರಿಸುವ ಯೋಜನೆ ಇದೆ.
ಇದನ್ನೂ ಓದಿ: Pakistan: ಕೈಯಲ್ಲಿ ಕುರಾನ್, ಅಣುಬಾಂಬ್; ಬಡತನ ನಿರ್ಮೂಲನೆಗೆ ಸೂತ್ರ ಕೊಟ್ಟ ಪಾಕ್ ಇಸ್ಲಾಮಿಕ್ ಮುಖಂಡ
ಮುಂದಿನ 20 ವರ್ಷದ ಕಾಲಾವಧಿಯಲ್ಲಿ 3-15 ಟನ್ ಶ್ರೇಣಿಯ ಒಂದು ಸಾವಿರಕ್ಕೂ ಹೆಚ್ಚು ಹೆಲಿಕಾಪ್ಟರುಗಳನ್ನು ಎಚ್ಎಎಲ್ ತಯಾರಿಸಲಿದೆ. ಇದರ ಒಟ್ಟು ಮೌಲ್ಯ 4 ಲಕ್ಷ ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ. ಈಗಾಗಲೇ ಒಂದು ಎಲ್ಯುಎಚ್ ಹೆಲಿಕಾಪ್ಟರ್ ತಯಾರಿಸಲಾಗಿದ್ದು ಅದರ ಪರೀಕ್ಷೆಯೂ ಯಶಸ್ವಿಯಾಗಿ ಉದ್ಘಾಟನೆಗೆ ಅಣಿಯಾಗಿದೆ.
ತುಮಕೂರಿನ ಈ ಹೊಸ ಫ್ಯಾಕ್ಟರಿಯಲ್ಲಿ ಆರಂಭದಲ್ಲಿ ವರ್ಷಕ್ಕೆ 30 ಹೆಲಿಕಾಪ್ಟರ್ಗಳನ್ನು ತಯಾರಿಸುವ ಉದ್ದೇಶ ಇದೆ. ನಂತರ ಹಂತ ಹಂತವಾಗಿ ಈ ಸಂಖ್ಯೆಯನ್ನು 90ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.
ಇದನ್ನೂ ಓದಿ: Adani Row: ಮಾರುಕಟ್ಟೆ ನಿಯಂತ್ರಕಗಳು ತಮ್ಮ ಕೆಲಸ ಮಾಡಲಿವೆ; ಅದಾನಿ ಪ್ರಕರಣದ ಬಗ್ಗೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ
ಎಲ್ಯುಎಚ್ ಅಗತ್ಯತೆ ಹೆಚ್ಚು
ಭಾರತೀಯ ವಾಯಪಡೆ ಬಳಿ ಈಗ ಚೀತಾ ಮತ್ತು ಚೇತಕ್ ಎಂಬೆರಡು ಮಾದರಿಯ ಹೆಲಿಕಾಪ್ಟರುಗಳಿವೆ. ಆದರೆ, ಇವುಗಳು ಹಳೆಯದಾಗಿದ್ದು, ಹೊಸ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿರುವ ಲೈಟ್ ಯುಟಿಲಿಟಿ ಹೆಲಿಕಾಪ್ಟರುಗಳು ಈ ಚೀತಾ ಮತ್ತು ಚೇತಕ್ ಸ್ಥಾನಗಳನ್ನು ತುಂಬಲಿವೆ. ಒಮ್ಮೆ ಎಲ್ಯುಎಚ್ ಕಾಪ್ಟರುಗಳು ತಕ್ಕ ಪ್ರಮಾಣದಲ್ಲಿ ನಿರ್ಮಾಣಗೊಂಡು ನಿಯೋಜನೆಗೊಂಡ ಬಳಿಕ ಚೀತಾ ಮತ್ತು ಚೇತಕ್ ಹೆಲಿಕಾಪ್ಟರುಗಳು ಕಾರ್ಯಾಚರಣೆ ನಿಲ್ಲಿಸಲಿವೆ. ಈ ಹಳೆಯ ಹೆಲಿಕಾಪ್ಟರುಗಳನ್ನು ಹೆಚ್ಎಎಲ್ ಸಂಸ್ಥೆಯೇ ನಿರ್ಮಿಸಿದ್ದು.
Published On - 8:29 am, Sun, 5 February 23