ಬೆಂಗಳೂರು: ಭ್ರಷ್ಟಾಚಾರದ ಬಗ್ಗೆ ಚರ್ಚೆಯಾಗಬೇಕು ಎಂದು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಒಪ್ಪಿಕೊಂಡರು. ಸಿದ್ದರಾಮಯ್ಯ ಪ್ರಸ್ತಾಪದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಸಹಮತ ಸೂಚಿಸಿದರು. ಆದರೆ ಸ್ಪೀಕರ್ ಕಾಗೇರಿ ಹಾಗೂ ಸಚಿವ ಮಾಧುಸ್ವಾಮಿ ಅವರು ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ‘ಇಂದು ಈ ವಿಷಯದ ಮೇಲೆ ಚರ್ಚೆ ಸಾಧ್ಯವಿಲ್ಲ’ ಎಂದರು. ವಿಧಾನಸಭೆಯಲ್ಲಿ ಬುಧವಾರ ಭ್ರಷ್ಟಾಚಾರದ ಬಗ್ಗೆ ಚರ್ಚಿಸಬೇಕು ಎಂದು ಸಿದ್ದರಾಮಯ್ಯ ಮಂಡಿಸಿದ ನಿಲುವಳಿಗೆ ಕಾನೂನು ಹಾಗೂ ಸಂಸದೀಯ ಸಚಿವ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ನಮ್ಮ ಬೇಡಿಕೆಯನ್ನು ತಿರಸ್ಕರಿಸಲು ನಿಮಗೆ ಬೇಕಾದಂತೆ ವಾದ ಮಾಡುತ್ತಿರಿ ಎಂದು ಮಾಧುಸ್ವಾಮಿ ಬಗ್ಗೆ ಸಿದ್ದರಾಮಯ್ಯ ಮುನಿಸು ತೋರಿದರು. ಈ ವೇಳೆ ಇಬ್ಬರದ್ದು ಒಂದೇ ಗರಡಿ ಅಲ್ವಾ ಸರ್ ಎಂದ ಸಿಎಂ ಬೊಮ್ಮಾಯಿ ಪರಿಸ್ಥಿತಿ ತಿಳಿಗೊಳಿಸಿದರು. ನೀವೇನು ಮಾಡುತ್ತೀರಿ ಎಂದು ಅವರಿಗೆ ಗೊತ್ತು ಅವರೇನು ಮಾಡುತ್ತಾರೆ ಎಂದು ನಿಮಗೆ ಗೊತ್ತು ಎಂದು ಹೇಳಿದರು.
ವಿಧಾನಸಭೆಯಲ್ಲಿ 40 ಪರ್ಸೆಂಟ್ ಕಮಿಷನ್ ವಿಚಾರವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದಾಗ, ಈ ಬಗ್ಗೆ ಚರ್ಚೆ ಮಾಡಲು ನಾವು ಸಿದ್ಧ ಎಂದು ಬೊಮ್ಮಾಯಿ ನುಡಿದರು. ಸಭಾಧ್ಯಕ್ಷರೇ ನಿಗದಿತ ಸಮಯ ನಿಗದಿ ಮಾಡಿ. ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರ ನಿಗ್ರಹದ ವಿಚಾರ ಚರ್ಚೆ ಮಾಡೋಣ ಎಂದರು. ಆದರೆ ಸೂಕ್ತ ರೀತಿಯಲ್ಲಿ ನಿಲುವಳಿ ಮಂಡನೆಯಾಗದ ಕಾರಣ ಚರ್ಚೆಗೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಇದಕ್ಕೂ ಮೊದಲು 40 ಪರ್ಸೆಂಟ್ ಕಮಿಷನ್ ವಿಚಾರದ ಬಗ್ಗೆ ಸಿದ್ದರಾಮಯ್ಯ ಮಂಡಿಸಿರುವ ನಿಲುವಳಿಯ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ‘ಭ್ರಷ್ಟಾಚಾರವು ಗಂಭೀರ ವಿಚಾರ. ಪ್ರಧಾನ ಮಂತ್ರಿ ಕೂಡ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಚರ್ಚೆಗೆ ಅವಕಾಶ ಕೊಡಿ’ ಎಂದು ಸಿದ್ದರಾಮಯ್ಯ ಸ್ಪೀಕರ್ಗೆ ಮನವಿ ಮಾಡಿದರು. ‘ಚರ್ಚೆಗೆ ಸರ್ಕಾರ ಸಿದ್ಧ, ಟೈಮ್ ನಿಗದಿ ಮಾಡಿ’ ಎಂದು ಸಿಎಂ ಮತ್ತೊಮ್ಮೆ ಹೇಳಿದರು. ‘ಸೂಕ್ತ ರೀತಿಯಲ್ಲಿ ನಿಲುವಳಿ ಮಂಡನೆ ಮಾಡದ ಕಾರಣ ಚರ್ಚೆಗೆ ಅವಕಾಶ ಕೊಡಲು ಸಾಧ್ಯವಿಲ್ಲ’ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.
‘ಭ್ರಷ್ಟಾಚಾರದಿಂದ ಜನರ ತೆರಿಗೆ ಹಣ ಲೂಟಿಯಾಗುತ್ತಿದೆ. ಚರ್ಚೆ ನಡೆಸಬೇಕೆಂದು ನಿಲುವಳಿ ಮಂಡಿಸಿದ್ದೇನೆ. ನಿಯಮ 60ರಲ್ಲಿ ಚರ್ಚೆಗೆ ಅವಕಾಶ ಕೊಡಿ’ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ‘ಹಾಗೆ ಕೊಡಲು ಆಗುವುದಿಲ್ಲ’ ಎಂದು ಸ್ಪೀಕರ್ ಕಾಗೇರಿ ಸ್ಪಷ್ಟಪಡಿಸಿದರು. ‘ಸಿದ್ದರಾಮಯ್ಯನವರೇ, ನೀವು ಸಿಎಂ ಆಗಿದ್ದವರು. ಯಾವೆಲ್ಲಾ ವಿಚಾರ ಚರ್ಚೆಗೆ ಕೊಡಬಹುದೆಂದು ನಿಮಗೆ ಗೊತ್ತಿದೆ. ಇದು ಕೊಡಲು ಆಗುವುದಿಲ್ಲ’ ಎಂದು ಸ್ಪೀಕರ್ ಹೇಳಿದರು. ಮಧ್ಯಪ್ರವೇಶ ಮಾಡಿದ ಕಾನೂನು ಸಚಿವ ಮಾಧುಸ್ವಾಮಿ, ಸಿದ್ದರಾಮಯ್ಯ ಅವರು ದೊಡ್ಡವರು. ಅವರು ಸ್ಪೀಕರ್ ಕಚೇರಿಗೆ ಪತ್ರ ಬರೆದು, ಅದನ್ನು ಸರ್ಕಾರದ ಗಮನಕ್ಕೆ ತರಬೇಕು. ಬಳಿಕ ಅವರಿಗೆ ಅವಕಾಶ ಕೊಡಬೇಕೋ, ಬೇಡವೋ ಎನ್ನುವುದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಅವರು ನಿಯಮ 60ರಲ್ಲೇ ಚರ್ಚೆ ಮಾಡಲಿ ನಮ್ಮದೇನು ಅಭ್ಯಂತರ ಇಲ್ಲ ಎಂದರು.
ಸಿಎಂ ಬೊಮ್ಮಾಯಿ ಸಹ ಸಿದ್ದರಾಮಯ್ಯ ಪ್ರಸ್ತಾಪದ ಪರವಾಗಿಯೇ ಮಾತನಾಡಿದರು. ‘ಲೀಗಲ್ ಪಾಯಿಂಟ್ ಎತ್ತಿದ್ದಾರೆ. ಸದನದಲ್ಲಿ ನಾವು ಚರ್ಚೆಗೆ ಅವಕಾಶ ಕೊಡುತ್ತೇವೆ. ಭ್ರಷ್ಟಾಚಾರ ನಿಲ್ಲುವ ಬಗ್ಗೆ ಚರ್ಚೆಯಾಗಲಿ. ಭ್ರಷ್ಟಾಚಾರ ನಿಗ್ರಹ ಮಾಡುವ ಸಲುವಾಗಿ ಚರ್ಚೆ ನಡೆಯೋದು ಒಳಿತು. ಇದರಿಂದ ಎಲ್ಲರೂ ಚರ್ಚೆ ಮಾಡಲು ಅವಕಾಶ ಸಿಗಲಿದೆ’ ಎಂದು ಹೇಳಿದರು.
ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರೇ ಪ್ರಧಾನಿ ನರೇಂದ್ರ ಮೋದಿಗೆಗೆ ಪತ್ರ ಬರೆದಿದ್ದಾರೆ. ಆದರೂ ಯಾವುದೇ ರೀತಿಯ ಕ್ರಮ ವಹಿಸಿಲ್ಲ. ರಸ್ತೆಗೆ ಡಾಂಬರ್ ಹಾಕಿದರೆ ಅದರಲ್ಲಿಯೂ ಕಮಿಷನ್ ಕೊಡಬೇಕಿದೆ. ಹೀಗಾಗಿಯೇ ರಾಜ್ಯದಲ್ಲಿ ‘ಪೇ ಸಿಎಂ’ ಎಂದು ಜನರೇ ಅಭಿಯಾನ ಆರಂಭಿಸಿದ್ದಾರೆ. ನಿಮ್ಮ ಲೂಟಿ ನೋಡುತ್ತಿರುವ ಮಕ್ಕಳು ಇದನ್ನು 40 ಪರ್ಸೆಂಟ್ ಸರ್ಕಾರ ಎಮದು ಹೇಳುತ್ತಿದ್ದಾರೆ. ಕಾಂಗ್ರೆಸ್ ಜನಸಾಮಾನ್ಯರ ಪರ ಇದೆ ಅಷ್ಟೇ ಎಂದರು.