ರಾಜ್ಯದಲ್ಲಿ ಕಾವೇರಿ ಕಿಚ್ಚು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ವಿವಿಧ ಸಂಘಟನೆಗಳು ಶನಿವಾರ ಮಂಡ್ಯ ನಗರ ಮತ್ತು ಮದ್ದೂರು ಬಂದ್‌ಗೆ ಕರೆ ನೀಡಿದವು. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆದವು. ಇನ್ನು ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ-ಬೆಂಗಳೂರು ಸಂಘದ ನೇತೃತ್ವದಲ್ಲಿ ರೈತ ಸಂಘಟನೆಗಳ ಒಕ್ಕೂಟ ಕನ್ನಡಪರ ಸಂಘಟನೆಗಳ ಒಕ್ಕೂಟ ಹಾಗೂ ಬೆಂಗಳೂರಿನ ನಾಗರಿಕ ಸಂಘಗಳ ಒಕ್ಕೂಟದ ವಿವಿಧ ಸಂಘಗಳು ಸೆ.26ರ ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಇನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಮತ್ತೊಂದಡೆ ರಾಜ್ಯದಲ್ಲಿ ಉತ್ತಮ ಮಳೆಯಾಗದೆ ಬರಗಾಲ ಆವರಿಸಿದೆ. ಇದರಿಂದ ರೈತ ಕಂಗಾಲ ಆಗಿದ್ದು, ಬೆಳೆಗೆ ನೀರಿಲ್ಲದೆ ಪರದಾಡುತ್ತಿದ್ದಾನೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ
ಕೃಷಿ, ಕುಡಿಯುವ ನೀರಿನ ವಲಯದಲ್ಲಿ ವ್ಯತ್ಯಾಸವಿದೆ. ಬೇಸಾಯ ಹಾಗೂ ಕೈಗಾರಿಕೆಗೆ ನೀರಿನ ಬಳಕೆಯಲ್ಲಿ ಸಂಘರ್ಷವಿದೆ. ಬೆಂಗಳೂರು ನಗರಕ್ಕೆ ಇಂದು 25 ಟಿಎಂಸಿ ನೀರಿನ ಅಗತ್ಯವಿದೆ. ರಿವರ್ ಬೇಸಿಕ್ ಡೆವಲಪ್‌ಮೆಂಟ್ ಕಾನೂನು ಜಾರಿಗೆ ತರಬೇಕು. ಕಾವೇರಿ, ಕೃಷ್ಣ, ಮಹದಾಯಿ ಯೋಜನೆಗೆ ಶಾಶ್ವತ ಮುಕ್ತಿ ಸಿಗಬೇಕು. ಈ ವಿಚಾರವಾಗಿ ತರಳುಬಾಳು ಶ್ರೀಗಳ ಜೊತೆ ನಾನು ಚರ್ಚಿಸಿದ್ದೇನೆ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಅಂತಾರಾಜ್ಯ ನದಿ ವಿವಾದಗಳ ಕಾನೂನಿನಿಂದ ಯಾವುದೇ ಇತ್ಯರ್ಥ ಆಗಿಲ್ಲ. ವಿವಾದ ಬಗೆಹರಿಸುವುದಕ್ಕಿಂತ ಇನ್ನೂ ವಿವಾದ ಹುಟ್ಟುಹಾಕುತ್ತಿದೆ. 55 ವರ್ಷ ಕಳೆದರೂ ಒಂದು ವಿವಾದ ಕೂಡ ಬಗೆಹರೆದಿಲ್ಲ ಎಂದು ಚಿತ್ರದುರ್ಗ ತಾಲೂಕಿನ ಸಿರಿಗೆರೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಅಕ್ಟೋಬರ್ನಿಂದ ಹೆಚ್ಚುವರಿ ಹಣ ಬದಲು 10 ಕೆಜಿ ಅಕ್ಕಿ ಕೊಡುತ್ತೇವೆ. 1 ಕೋಟಿ 10 ಲಕ್ಷ ಖಾತೆಗಳಿಗೆ ಈಗಾಗಲೇ ಹಣವನ್ನು ಹಾಕಿದ್ದೇವೆ. ಕಾವೇರಿ ವಿಚಾರದಲ್ಲಿ ‘ಸುಪ್ರೀಂ’ ತೀರ್ಪಿಗೆ ಬದ್ಧವಾಗಿರಬೇಕಾಗುತ್ತದೆ. ನ್ಯಾಯಯುತವಾಗಿ, ಶಾಂತಿಯುತವಾಗಿ ಹೋರಾಟ ನಡೆಯಲಿ ಎಂದು ತುಮಕೂರಿನಲ್ಲಿ ಆಹಾರ ಇಲಾಖೆ ಸಚಿವ K.H.ಮುನಿಯಪ್ಪ ಹೇಳಿದ್ದಾರೆ.
ಈಗಾಗಲೇ 100 ದಿನಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದು ತುಮಕೂರಿನಲ್ಲಿ ಆಹಾರ ಇಲಾಖೆ ಸಚಿವ K.H.ಮುನಿಯಪ್ಪ ಹೇಳಿದ್ದಾರೆ. ಡಿಸೆಂಬರ್ ಬಳಿಕ 5ನೇ ಗ್ಯಾರಂಟಿ ಕೂಡ ನಾವು ಜಾರಿಗೆ ತರುತ್ತೇವೆ. ಅಕ್ಟೋಬರ್ನಿಂದ ಹೆಚ್ಚುವರಿ ಹಣ ಬದಲು 10 ಕೆಜಿ ಅಕ್ಕಿ ಕೊಡ್ತೀವಿ. 1 ಕೋಟಿ 10 ಲಕ್ಷ ಖಾತೆಗಳಿಗೆ ಈಗಾಗಲೇ ಹಣವನ್ನು ಹಾಕಿದ್ದೇವೆ ಎಂದರು.
ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳ ಸ್ಥಿತಿ ಹೇಳ ಹೆಸರಿಲ್ಲದಂತಾಗುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ. ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ಯಾವುದೇ ನಷ್ಟವಿಲ್ಲ. ಹೊಟ್ಟೆಕಿಚ್ಚಿನಿಂದ ಒಬ್ಬರಿಗೊಬ್ಬರು ಕೈಕೈ ಹಿಸುಕಿಕೊಳ್ತಿದ್ದಾರೆ ಎಂದಿದ್ದಾರೆ.
ಬಂದ್ನಿಂದ ನಾವು ಬೆಂಗಳೂರಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಿಲ್ಲ. ಡಿಸಿಎಂ ಡಿಕೆ ಹೋರಾಟಗಾರರ ವಿರುದ್ಧ ಲಘುವಾಗಿ ಮಾತನಾಡ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಖಂಡಿಸುತ್ತೇವೆ. ಬೆಂಗಳೂರು ಬಂದ್ ಬಗ್ಗೆ ನೀರಾವರಿ ಸಚಿವರು ಲಘುವಾಗಿ ಮಾತಾಡ್ತಾರೆ. ಸರ್ಕಾರ ನಮ್ಮ ಧ್ವನಿಯಾಗಿರಬೇಕು ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಸೆಪ್ಟೆಂಬರ್ 26ರಂದು ಮಂಗಳವಾರ ಬೆಂಗಳೂರು ಬಂದ್ ವಿಚಾರವಾಗಿ ಶಾಲಾ ಮಕ್ಕಳ ಪೋಷಕರ ಸಂಘಟನೆಯ ಬೆಂಬಲ ಇದೆ. ಶಾಲಾ ಮಕ್ಕಳ ಪೋಷಕರ ಸಂಘಟನೆ ಅಧ್ಯಕ್ಷ ಯೋಗಾನಂದ ಹೇಳಿಕೆ ನೀಡಿದ್ದು, ಬೆಂಗಳೂರು ಬಂದ್ ದಿನ ನಾವು ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದದ್ದಾರೆ.
ಬೆಂಗಳೂರು ಬಂದ್‌ಗೆ ನಮ್ಮ ಸಂಘಟನೆಯ ನೈತಿಕ ಬೆಂಬಲ ಇದೆ ಎಂದು ಬೆಂಗಳೂರಲ್ಲಿ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ.
ಸೆಪ್ಟೆಂಬರ್ 26 ಮಂಗಳವಾರದಂದು ಬೆಂಗಳೂರು ಬಂದ್ ಫಿಕ್ಸ್. ನಿನ್ನೆ ಎಲ್ಲಾ ಸಂಘ ಸಂಸ್ಥೆಗಳು ಸೇರಿ ಬೆಂಗಳೂರು ಬಂದ್‌ಗೆ ಕರೆ ನೀಡಿದ್ವಿ. ಮಂಗಳವಾರ ಬಂದ್‌ಗೆ ಸಾಕಷ್ಟು ಸಂಘ ಸಂಸ್ಥೆಗಳು ಬೆಂಬಲ ಕೊಟ್ಟಿವೆ ಎಂದು ಹೋರಾಟಗಾರರ ಸಭೆಯಲ್ಲಿ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಸಮಸ್ಯೆ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಕೆಲಸ ಯಾರೂ ಮಾಡಿಲ್ಲ. ಯಾವ ರೀತಿ ನೀರು ಕೊಡಲಾಗುವುದು ಅಂತ ಸರ್ಕಾರ ಹೇಳಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಸುವ ಬಗ್ಗೆಯೂ ಸ್ಪಷ್ಟಪಡಿಸಿಲ್ಲ. ಬೆಂಗಳೂರಲ್ಲಿದ್ದ IT, BT ಕಂಪನಿಗಳು ಹೈದರಾಬಾದ್ಗೆ ಹೋಗುತ್ತಿವೆ. ಇಲ್ಲಿನ ಟ್ರಾಫಿಕ್ ಸಮಸ್ಯೆಯಿಂದ ಟೆಕ್ಪಾರ್ಕ್ ವಲಸೆ ಹೋಗ್ತಿವೆ. 1 ದಿನ ಕೆಲಸಕ್ಕೆ ಕಚೇರಿಗೆ ಹೋಗಲು 4 ಗಂಟೆ ಬೇಕು ಅಂತಿದ್ದಾರೆ. ಬೆಂಗಳೂರಿನಲ್ಲಿರುವ ವಿದ್ಯಾವಂತರು ಹೈದರಾಬಾದ್ಗೆ ಹೋಗ್ತಿದ್ದಾರೆ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಒಳ್ಳೆಯ ಬೆಳವಣಿಗೆ. ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಆಗಿದ್ದರೆ ಹೆಚ್ಚು ಸ್ಥಾನ ಬರುತ್ತಿತ್ತು. ರಾಜ್ಯದಲ್ಲಿ ಎರಡೂ ಪಕ್ಷಗಳಿಂದ 135 ಸ್ಥಾನ ಗೆಲ್ಲುತ್ತಿದ್ದೆವು. ಕಾರಣಾಂತರದಿಂದ ಆಗಿರಲಿಲ್ಲ, ಈಗ ಸಮಯ ಬಂದಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರ ಗೆಲ್ಲಲು ಅನುಕೂಲ ಆಗಲಿದೆ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
ನಾನು ಹೇಳಿದಿನಿ, ಅದು ಮುಗಿದ ಹೋದ ಅಧ್ಯಾಯ. ಹೈಕಮಾಂಡ್ಗೆ ದೂರು ಕೊಟ್ಟಿರುವುದು ನನಗೆ ಗೊತ್ತಿಲ್ಲ. ನಾನು ನನ್ನ ಭಾವನೆಯನ್ನ ಹೇಳಿದ್ದೇನೆ. ಹೈಕಮಾಂಡ್ ಏನು ತಿರ್ಮಾನ ತಗೊಳುತ್ತೆ ತಗೊಳ್ಳಲಿ.
ಪದೇ ಪದೇ ಈ ವಿಚಾರವನ್ನ ನಾನು ಮಾತಾಡಲ್ಲ ಎಂದು ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಸರ್ಕಾರ ಸಮಪರ್ಕವಾಗಿ ಕಾನೂನಾತ್ಮಕ ಹೋರಾಟ ಮಾಡಿದೆ. ಅದರಲ್ಲಿ ಎಳ್ಳಷ್ಟು ಏನು ಇಲ್ಲ. ಆದರೆ ದುರಾದೃಷ್ಟವಶಾತ್ ಸುಪ್ರೀಂಕೋರ್ಟ್ ಅದೇಶ ಕೊಟ್ಟಿದೆ. ನಮ್ಮ ಫೆಡರಲ್ ವ್ಯವಸ್ಥೆಯಲ್ಲಿ ಸುಪ್ರೀಂಕೋರ್ಟ್ ತಿರ್ಪು ಅಂತಿಮ. ಆದರು ನಾವು ಇನ್ನೊಮ್ಮೆ ರೀವ್ಯು ಪಿಟಿಶಿನ್ ಹಾಕುವ ಬಗ್ಗೆ ಚಿಂತನೆ ನಡೆದಿದೆ ಎಂದು ತುಮಕೂರಿನಲ್ಲಿ ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ.
ಬೆಂಗಳೂರು ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತೆ. ಸಾರಿಗೆ ಬಸ್ ರೋಡ್ಗೆ ಇಳಿಯುವುದಿಲ್ಲ ಎಂದು ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಅನಂತ್ ಸುಬ್ಬರಾವ್ ಹೇಳಿದ್ದಾರೆ.
ಬೆಂಗಳೂರು: ಮಂಗಳವಾರ ಬೆಂಗಳೂರು ಬಂದ್‌ಗೆ ಖಾಸಗಿ ಸಾರಿಗೆ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ. ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದರು.
ಶಿವಮೊಗ್ಗ: ಜಿಲ್ಲೆಯ ಭದ್ರಾ ಡ್ಯಾಂನಿಂದ ಕಾಲುವೆಗೆ ನೀರು ಸ್ಥಗಿತವಾದ ಹಿನ್ನೆಲೆಯಲ್ಲಿ ಸೆ.25 ರಂದು ಭಾರತೀಯ ರೈತ ಒಕ್ಕೂಟದಿಂದ ದಾವಣಗೆರೆ ಬಂದ್‌ಗೆ ಕರೆ ನೀಡಿವೆ. ಭದ್ರಾ ಕಾಲುವೆಗೆ ನೀರು ಹರಿಸುವುದಾಗಿ ಲಿಖಿತ ಆದೇಶ ಹೊರಡಿಸಲು ಆಗ್ರಹಿಸಿವೆ.
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಸೌಹಾರ್ದಯುತವಾಗಿ ಭೇಟಿ ಮಾಡಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಅವರೂ ಕರೆ ಮಾಡಿದ್ದರು. ಮನೆಗೆ ಬಂದು ಹೋಗಿ ಅಂದರು. ಸದ್ಯದರಲ್ಲೇ ಹೋಗುತ್ತೇನೆ. ಹೇಗೊ ನಮ್ಮ ಜತೆ ಅವರು ಹೊಂದಾಣಿಕೆ ಆಗಿದ್ದಾರೆ. ನಾವೆಲ್ಲರೂ ಒಟ್ಟಾಗಿ ಹೋಗಬೇಕಿದೆ. ಬೆಂಗಳೂರು ಬಂದ್‌ಗೆ ಬಿಜೆಪಿ ಬೆಂಬಲವೂ ಇದೆ. ಇದಕ್ಕೆ ನಮ್ಮದೇನೂ ವಿರೋಧ ಇರಲ್ಲ. ನಮ್ಮ ಸಂಪೂರ್ಣ ಬೆಂಬಲ ಇರುತ್ತೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಮಂಡ್ಯ: ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಸೆಪ್ಟೆಂಬರ್ 26 ರಂದು ಮಂಡ್ಯ ಜಿಲ್ಲೆಯ ಆರ್ಪೇಟೆ ಬಂದ್‌ಗೆ ಕಾವೇರಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಸಂಸ್ಥೆಗಳು ಕರೆ ನೀಡಿವೆ. ಬೆಳಗ್ಗೆ 8 ರಿಂದ ಸಂಜೆ 6ರ ವರೆಗೆ ಬಂದ್ ಇರಲಿದೆ. ಅಗತ್ಯ ಸೇವೆ ಹೊರತು ಪಡಿಸಿ ಉಳಿದಂತೆ ಎಲ್ಲವೂ ಬಂದ್ ಆಗಲಿವೆ.
ಬೆಂಗಳೂರು: ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮುಸ್ಲಿಂ ಜೆಡಿಎಸ್ ನಾಯಕರಲ್ಲಿ ಅಸಮಾಧಾನ ಸ್ಪೋಟವಾಗಿದೆ. ಮುಸ್ಲಿಂ ಮುಖಂಡರು ಸಾಮೂಹಿಕವಾಗಿ ಜೆಡಿಎಸ್ ತೊರೆಯಲು ನಿರ್ಧರಿಸಿದ್ದಾರೆ. ಅಸಮಾಧಾನ ಹಿನ್ನೆಲೆಯಲ್ಲಿ ಜೆಡಿಎಸ್ ಮುಸ್ಲಿಂ ಮುಖಂಡರು ಇಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ 20 ಕ್ಕೂಹೆಚ್ಚು ಮುಖಂಡರು ಭಾಗಿಯಾಗಲಿದ್ದಾರೆ. ಸಭೆ ಮಾಡಿ ಜೆಡಿಎಸ್ ತೊರೆಯುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಬೇಸರದಿಂದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸೈಯದ್ ಶಫಿಉಲ್ಲ ಜೆಡಿಎಸ್ಗೆ ರಾಜೀನಾಮೆ ನೀಡಿದ್ದಾರೆ.
ಚಾಮರಾಜನಗರ: ಗಡಿ ನಾಡು ಚಾಮರಾಜನಗರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಬರ ಆವರಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾಡಳಿತ ತಯಾರಿ ನಡೆಸಿದೆ. ಕೊಳ್ಳೆಗಾಲ, ಯಳಂದೂರು, ಗುಂಡ್ಲುಪೇಟೆ, ಹನೂರು ತಾಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರಿಸಲು ಜಿಲ್ಲಾಡಳಿತ ಮುಂದಾಗಿದೆ.
ಬಾಗಲಕೋಟೆ: ಜಿಲ್ಲೆಯಲ್ಲಿ ಬರ ಆವರಿಸಿದ್ದು, ಜಿಲ್ಲೆಯ ಒಂಬತ್ತು ತಾಲ್ಲೂಕುಗಳನ್ನು ಬರ ಎಂದು ಘೋಷಣೆ ಮಾಡಲಾಗಿದೆ. ಮಳೆಯಿಲ್ಲದೆ ಬೆಳೆಗಳು ಒಣ ಹೋಗಿವೆ. ಮೂರು ಅಡಿ ಬೆಳೆದರೂ ಗಿಡಗಳು ಹೂ ಬಿಟ್ಟಿಲ್ಲ.
ಬಾಗಲಕೋಟೆ ತಾಲ್ಲೂಕಿನ ನೀರಲಕೇರಿ ಗ್ರಾಮ ವ್ಯಾಪ್ತಿಯಲ್ಲಿ 200 ಎಕರೆಗೂ ಅಧಿಕ ಭೂಮಿಯಲ್ಲಿ ರೈತರು ಮೆಣಸಿನಗಿಡ ಬೆಳೆದಿದ್ದಾರೆ. ಆದೆರೆ ಮಳೆಯಿಲ್ಲದೆ ಶೇ90ರಷ್ಟು ಬೆಳೆ ಒಣಗಿದೆ.
ಹಾಸನ: ಹೇಮಾವತಿ ಜಲಾಶಯದಲ್ಲಿ ಇಂದು 2896.90 ಅಡಿ ನೀರಿನ ಮಟ್ಟ ಇದೆ. ಜಲಾಶಯದ ಗರಿಷ್ಠ ಮಟ್ಟ 2922 ಅಡಿ ಆಗಿದೆ. ಒಟ್ಟು ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ ಇದೆ. ಇಂದು 17.904 ಟಿಎಂಸಿ ನೀರಿದೆ. ಬಳಕೆಗೆ ಲಭ್ಯವಿರುವ ನೀರು – 13.565 ಟಿಎಂಸಿ, ಒಳಹರಿವು – 2704 ಕ್ಯೂಸೆಕ್ ಇದ್ದು, ಹೊರಹರಿವು – 1300 ಕ್ಯೂಸೆಕ್ ಇದೆ.
ಗದಗ: ಬರ ಪೀಡಿತ ತಾಲೂಕು ಪಟ್ಟಿಯಿಂದ ಮುಂಡರಗಿ ತಾಲೂಕ ಕೈಬಿಟ್ಟಿಕ್ಕೆ ಹಿನ್ನೆಲೆಯಲ್ಲಿಸೆ.25 ರಂದು ಮುಂಡರಗಿ ತಾಲೂಕು ಬಂದ್‌ಗೆ ರೈತರು ಕರೆ ನೀಡಿದ್ದಾರೆ. ಏಳು ತಾಲೂಕು ಪೈಕಿ, ಆರು ತಾಲೂಕು ಬರ ಪೀಡಿತ ತಾಲೂಕು ಅಂತ ಘೋಷಣೆ ಮಾಡಲಾಗಿದೆ. ಆದರೆ ಮುಂಡರಗಿ ತಾಲೂಕನ್ನು ಕೈ ಬಿಟ್ಟಿದ್ದಕ್ಕೆ ಅನ್ನದಾತರಿಂದ ಮುಂಡರಗಿ ಬಂದ್ ಕರೆ ನೀಡಲಾಗಿದೆ. ವಿವಿಧ ರೈತ ಸಂಘಟನೆಗಳು, ಕನ್ನಡಪರ ಸಂಘಟನೆ ಸೇರಿದಂತೆ 10 ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ.
ಮೈಸೂರು: ಕಬಿನಿ ಜಲಾಶಯದಿಂದ ನೀರಿನ ಹೊರ ಹರಿವು ಮುಂದುವರೆದಿದ್ದು, ಡ್ಯಾಂನ ಗರಿಷ್ಠ 19.52 ಟಿಎಂಸಿ ಇದೆ. ಸದ್ಯ ಜಲಾಶಯದಲ್ಲಿ 14.11 ಟಿಎಂಸಿ ನೀರು ಇದೆ. ಕಳೆದ ವರ್ಷ ಇದೇ ದಿನ 18.86 ಟಿಎಂಸಿ ನೀರು ಸಂಗ್ರಹವಿತ್ತು.
ಬೆಂಗಳೂರು: ಲೋಕಸಭೆ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ಮುನ್ನುಡಿ ಬರೆದಿದೆ. 3o ಮಂದಿ ಸಚಿವರನ್ನು ಲೋಕಸಭಾ ಕ್ಷೇತ್ರಗಳ ವೀಕ್ಷಕರಾಗಿ ನೇಮಕ ಮಾಡಿದೆ. ಕ್ಷೇತ್ರಗಳಲ್ಲಿ ಸಭೆ ನಡೆಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲು ಸೂಚನೆ ನೀಡಿದೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಚಿವರಿಗೆ ಉಸ್ತುವಾರಿ ಜಿಲ್ಲೆಗಳನ್ನು ಬಿಟ್ಟು ಬೇರೆ ಕ್ಷೇತ್ರಗಳ ಜವಾಬ್ದಾರಿ ನೀಡಿದ್ದಾರೆ.
ಮಂಡ್ಯ: ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10.30 ಕ್ಕೆ ಮಂಡ್ಯದ ಸಂಜಯ್ ಸರ್ಕಲ್ನಲ್ಲಿ ಕಾವೇರಿ ನದಿ ನೀರಿನ ರಕ್ಷಣಾ ಹೋರಾಟ ಸಮಿತಿ ಪ್ರತಿಭಟನೆ ನಡೆಸಲಿದೆ. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಧರಣಿ ನಡೆಯಲಿದೆ. ಮಧ್ಯಾಹ್ನ 3 ಕ್ಕೆ ಭೂಮಿತಾಯಿ ಹೋರಾಟ ಸಮಿತಿ ಪ್ರತಿಭಟನೆ ಮಾಡಲಿದೆ. ಶ್ರೀರಂಗಪಟ್ಟಣದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಲಿದೆ.
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಇಂದು (ಸೆ.24) ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಕನ್ನಡ ಒಕ್ಕೂಟ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಿದೆ. ಮಧ್ಯಾಹ್ನ 12 ಗಂಟೆಗೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಡೆಯುವ ಧರಣಿಯಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕರವೇ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ವಿವಿಧ ಕನ್ನಡಪರ ಸಂಘಟನೆಗಳು ಭಾಗಿಯಾಗಲಿವೆ.
Published On - 8:01 am, Sun, 24 September 23