ಬೆಂಗಳೂರಿನಲ್ಲಿ ಲಾಕ್ಡೌನ್ ಉಲ್ಲಂಘಿಸಿ ಓಡಾಟ; 26 ಸಾವಿರ ವಾಹನ ಜಪ್ತಿ, 17 ಕೋಟಿ ರೂಪಾಯಿ ದಂಡ
ನಗರದಲ್ಲಿ ಪೊಲೀಸರು ಈವರೆಗೆ 36 ಸಾವಿರಕ್ಕೂ ಹೆಚ್ಚು ವಾಹನ ಜಪ್ತಿ ಮಾಡಿದ್ದಾರೆ.₹ 17 ಕೋಟಿಗೂ ಹೆಚ್ಚು ಮೊತ್ತದ ದಂಡ ವಸೂಲಿಯಾಗಿದೆ. ಮಾಸ್ಕ್ ಧರಿಸದವರಿಂದ ಈವರೆಗೆ ಒಟ್ಟು ₹ 3.91 ಕೋಟಿ ದಂಡ ವಸೂಲಿ ಮಾಡಲಾಗಿದೆ.
ಬೆಂಗಳೂರು: ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರನ್ನು ತಡೆದು, ನಗರದಲ್ಲಿ ಪೊಲೀಸರು ಈವರೆಗೆ 36 ಸಾವಿರಕ್ಕೂ ಹೆಚ್ಚು ವಾಹನ ಜಪ್ತಿ ಮಾಡಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ₹ 17 ಕೋಟಿಗೂ ಹೆಚ್ಚು ಮೊತ್ತದ ದಂಡ ವಸೂಲಿಯಾಗಿದೆ. ಮಾಸ್ಕ್ ಧರಿಸದವರಿಂದ ಈವರೆಗೆ ಒಟ್ಟು ₹ 3.91 ಕೋಟಿ ದಂಡ ವಸೂಲಿ ಮಾಡಲಾಗಿದೆ.
ನಗರದಲ್ಲಿ ಈವರೆಗೆ ಒಟ್ಟು 35,905 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಅದರಲ್ಲಿ 32 ಸಾವಿರ ದ್ವಿಚಕ್ರ ವಾಹನಗಳು, 1678 ಆಟೊಗಳು, 2024 ಕಾರುಗಳು ಸೇರಿವೆ. ಈ ವಾಹನಗಳನ್ನು ಮಾಲೀಕರು ವಾಪಸ್ ಪಡೆಯಲು ಮಾಲೀಕರು ದಂಡ ಕಟ್ಟಬೇಕಿದೆ. ಮಾಸ್ಕ್ ಧರಿಸದವರಿಗೆ ಮತ್ತು ಸಾಮಾಜಿಕ ಅಂತರ ಕಾಪಾಡದವರಿಗೂ ಪೊಲೀಸರು ದಂಡ ವಿಧಿಸಿದ್ದಾರೆ. ಇಂಥವರಿಂದ ಈವರೆಗೆ ₹ 3.91 ಕೋಟಿ ದಂಡ ವಸೂಲಿ ಮಾಡಲಾಗಿದೆ.
ನಿಗದಿತ ಅವಧಿ ಮೀರಿ ತೆರೆದ ಅಂಗಡಿಗಳಿಗೂ ದಂಡ ಲಾಕ್ಡೌನ್ ಹಿನ್ನೆಲೆ ಬೆಂಗಳೂರಿನಾದ್ಯಂತ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಶಿವಾಜಿನಗರ ಸೇರಿದಂತೆ ಹಲವೆಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಈಚೆಗೆ ಶಿವಾಜಿನಗರದಲ್ಲಿ ಎಂದಿನಂತೆ ಜನ ಸಂಚಾರ, ಬೈಕ್ ಹಾಗೂ ಆಟೊಗಳ ಸಂಚಾರ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿಕ್ರಮಕ್ಕೆ ಮುಂದಾದರು.
ಬೆಳ್ ಬೆಳಗ್ಗೆ ಮಾರ್ಕೆಟ್ಗೆ ಬೈಕ್ನಲ್ಲಿ ಹೆಲ್ಮೆಟ್ ಹಾಕದೆ ತೆರಳಿದ ಜನರಿಗೂ ಪೊಲೀಸರು ದಂಡ ವಿಧಿಸಿದರು. ಕಡೆ ಅಂಗಡಿ ಮುಂಗಟ್ಟುಗಳನ್ನು ಅವಧಿ ಮೀರಿ ತೆರೆದಿದ್ದವರಿಗೂ ದಂಡ ಹಾಕಲಾಯಿತು. ಅಂಗಡಿಗಳನ್ನು ನಂತರ ಪೊಲೀಸರು ಬಂದ್ ಮಾಡಿಸಿದರು.
ಲಾಕ್ಡೌನ್ ಭವಿಷ್ಯ ಸಾರ್ವಜನಿಕ ಸಹಕಾರ ಅವಲಂಬಿಸಿದೆ: ಯಡಿಯೂರಪ್ಪ ಕರ್ನಾಟಕ ರಾಜ್ಯದಲ್ಲಿ ಜೂನ್ 7ರ ನಂತರವೂ ಲಾಕ್ಡೌನ್ ವಿಸ್ತರಿಸುವ ಸಾಧ್ಯತೆ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನರ ಸಹಕಾರವನ್ನು ಪ್ರಸ್ತಾಪಿಸಿದ್ದಾರೆ. ‘ಜನರು ಸಹಕಾರ ನೀಡಿದರೆ ಜೂನ್ 7ರ ನಂತರ ಲಾಕ್ಡೌನ್ ವಿಸ್ತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೊರೊನಾ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ ಹೇಗೆ ಕಡಿಮೆಯಾಗುತ್ತಿದೆ ಎಂಬುದನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಅವರು ಹೇಳಿದರು.
‘ಜೂನ್ 7ರ ನಂತರವೂ ಲಾಕ್ಡೌನ್ ವಿಸ್ತರಿಸಲಾಗುವುದು’ ಎಂಬ ಗಾಳಿಸುದ್ದಿಗಳನ್ನು ಯಡಿಯೂರಪ್ಪ ತಳ್ಳಿಹಾಕಿದ್ದಾರೆ. ಲಾಕ್ಡೌನ್ ಭವಿಷ್ಯದ ಬಗ್ಗೆ ಜೂನ್ 5ರಂದು ಪರಿಶೀಲಿಸಿ, ನಂತರ ನಿರ್ಧರಿಸಲಾಗುವುದು ಎಂದು ತಿಳಿಸಿದರು.
(Lockdown Rules Violation in Bengaluru 26 Vehicles Seized 17 Crore Fine)
ಇದನ್ನೂ ಓದಿ: ಧಾರವಾಡದ ಲಾಕ್ಡೌನ್ ಸಡಿಲಿಕೆ ವಿರುದ್ಧ ಜನರ ಅಸಮಾಧಾನ; ಕೊರೊನಾ ಸೋಂಕು ಮತ್ತೆ ಹೆಚ್ಚಾಗುವ ಆತಂಕ
ಇದನ್ನೂ ಓದಿ: ಕರ್ನಾಟಕ ಲಾಕ್ಡೌನ್ ಹಿನ್ನೆಲೆ; ಮೇ ತಿಂಗಳ ಮೋಟಾರು ವಾಹನ ತೆರಿಗೆಗೆ ರಾಜ್ಯದಲ್ಲಿ ವಿನಾಯಿತಿ ಘೋಷಣೆ