ಲೋಕಸಭೆ ಚುನಾವಣೆ: ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್​ ದಾಖಲು

| Updated By: ವಿವೇಕ ಬಿರಾದಾರ

Updated on: Apr 21, 2024 | 10:27 AM

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಅಬ್ಬರ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಚಾರದ ಭಾಷಣದ ವೇಳೆ ನಾಲಿಗೆ ಹರಿಬಿಟ್ಟು ಪೇಚಿಗೆ ಸಿಲುಕಿಕೊಳ್ಳುತ್ತಾರೆ. ಇದೀಗ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಡಿಕೆ ಸುರೇಶ್​ ಅವರನ್ನು ಟೀಕಿಸಿ ಪೇಚಿಗೆ ಸಿಲುಕಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ: ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್​ ದಾಖಲು
ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
Follow us on

ತುಮಕೂರು, ಏಪ್ರಿಲ್​ 21: ಲೋಕಸಭೆ ಚುನಾವಣೆ (Lok Sabha Election) ಪ್ರಚಾರದ ವೇಳೆ ಮಾದರಿ ನೀತಿ ಸಂಹಿತೆ (MCC) ಉಲ್ಲಂಘನೆ ಆರೋಪದಡಿ ಮಾಜಿ ಮುಖ್ಯಮಂತ್ರಿ ಹೆಚ್​. ಡಿ.ಕುಮಾರಸ್ವಾಮಿ (HD Kumaraswamy) ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಅಡಿಯಲ್ಲಿ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಏ.13 ರಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪರ ಪ್ರಚಾರದ ವೇಳೆ “ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಕೊತ್ವಾಲ್ ರಾಮಚಂದ್ರನ ಗರಡಿಯಿಂದ ಬಂದವರು. ಡಿ.ಕೆ.ಸುರೇಶ್ ದೇಶ ಮತ್ತು ರಾಜ್ಯವನ್ನು ಉಳಿಸುತ್ತಾರಾ? ಹಣದ ದಾಹಕ್ಕೆ ಏನು ಬೇಕಾದರೂ ಮಾಡುತ್ತಾರೆ” ಎಂದು ಟೀಕಿಸಿದ್ದರು.

ಪ್ರಚಾರ ಸಭೆ ವೇಳೆ ಚುನಾವಣಾ ಕರ್ತವ್ಯದಲ್ಲಿದ್ದ ಎಸ್​ಎಫ್​ಟಿ ಮಹೇಶ್ ದೂರು ಗುಬ್ಬಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಬೆಂಗಳೂರಿನ ಘನ 42ನೇ ಅಡಿಷನಲ್ ಸಿಎಂಎಂ ನ್ಯಾಯಲಯ ಆದೇಶ ಆದೇಶದ ಮೇರೆಗೆ ಎಫ್​ಐಆರ್ ದಾಖಲಾಗಿದೆ.

ಮಹಿಳೆಯರ ಬಗ್ಗೆ ಅವಹೇಳಕಾರಿ ಮಾತಾಡಿ ಪೇಚಿಗೆ ಸಿಲುಕಿದ್ದ ಹೆಚ್​ಡಿಕೆ

ತುರುವೇಕೆರೆಯಲ್ಲಿ ಲೋಕಸಭೆ ಚುನಾವಣಾ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ, “ಕಾಂಗ್ರೆಸ್ ಸರಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದು, ಹಳ್ಳಿಯ ಹೆಣ್ಣು ಮಕ್ಕಳ ಬದುಕು ಏನಾಗಬೇಕು ಎಂಬುದರ ಕುರಿತು ಯೋಚನೆ ಮಾಡಬೇಕಾಗಿದೆ,” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದು ಭಾರೀ ವಿವಾದಕ್ಕೀಡಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಕಾಂಗ್ರೆಸ್​ ನಾಯಕರು ಕುಮಾರಸ್ವಾಮಿ ವಿರುದ್ಧ ಮುಗಿಬಿದ್ದಿದ್ದರು. ಅಲ್ಲದೇ ರಾಜ್ಯದೆಲ್ಲೆಡೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ ಪ್ರಚಾರದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ

ಇನ್ನು ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ರಾಜ್ಯ ಮಹಿಳಾ ಆಯೋಗ ಗಂಭೀರವಾಗಿ ಇದನ್ನು ಪರಿಗಣಿಸಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು. ಅಲ್ಲದೇ ಈ ಬಗ್ಗೆ ಒಂದು ವಾರದೊಳಗೆ ಸ್ಪಷ್ಟನೆ ನೀಡುವಂತೆ ನೋಟಿಸ್‌ ನೀಡಿತ್ತು. ಈ ನೋಟಿಸ್ ವಿರುದ್ಧ ಕುಮಾರಸ್ವಾಮಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ರಾಜ್ಯ ಮಹಿಳಾ ಆಯೋಗದ ನೋಟಿಸ್​ಗೆ ತಡೆ ನೀಡಿದೆ.

“ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿರಬೇಕಾದವರು ಈ ರೀತಿ ಬಹಿರಂಗವಾಗಿ ಹೆಣ್ಣುಮಕ್ಕಳನ್ನು ಅವಮಾನಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧಿನಿಯಮ- 1995 ಪರಿಚ್ಛೇದ 10 (ಎ)ರ ಮೇರೆಗೆ ತಾವು ನೋಟಿಸ್ ತಲುಪಿದ ಏಳು ದಿನಗಳೊಳಗೆ ಆಯೋಗಕ್ಕೆ ಖುದ್ದು ಹಾಜರಾಗಿ ಹೇಳಿಕೆ ಸಂಬಂಧ ಸೃಷ್ಟಿಕರಣ ನೀಡಬೇಕು”, ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:24 am, Sun, 21 April 24