ಬಳ್ಳಾರಿ, ಮಾ.20: ಲೋಕಸಭಾ ಚುನಾವಣೆ(Lok sabha election) ನೀತಿ ಸಂಹಿತೆ ಜಾರಿ ಹಿನ್ನಲೆ ಚುನಾವಣಾ ಅಕ್ರಮ ನಡೆಯದಂತೆ ಚೆಕ್ಪೋಸ್ಟ್ ನಿರ್ಮಿಸಿ ಬೀಗಿ ಬಂದೋಬಸ್ತ್ ಮಾಡಲಾಗಿದೆ. ಈ ಹಿನ್ನಲೆ ರಾಜ್ಯದ ಹಲವು ಕಡೆಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಜೊತೆಗೆ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. ಅದರಂತೆ ಬಳ್ಳಾರಿ ತಾಲೂಕಿನ ಸಿಂದವಾಳ ಗ್ರಾಮದ ಬಳಿಯ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 26 ಕೆಜಿ ಬೆಳ್ಳಿ ಮತ್ತು 3.55 ಲಕ್ಷ ರೂ. ಹಣವನ್ನು ಬಳ್ಳಾರಿಯಿಂದ ಆಂಧ್ರದ ಆದೋನಿ ಕಡೆ ಸಾಗಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ: ಚಿತ್ರದುರ್ಗ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ 108 ಸೀರೆಗಳ ಜಪ್ತಿ ಮಾಡಲಾಗಿದೆ. ನಗರದ JMIT ಬಳಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಪತ್ತೆಯಾಗಿದ್ದು, ಬ್ಯಾಗ್ಗಳಲ್ಲಿ ತುಂಬಿಸಿ ಕಾರಿನಲ್ಲಿ ಸಾಗಿಸಲಾಗುತ್ತಿತ್ತು. ಸೀರೆ ಸಮೇತ ಕಾರ್ನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಚಿತ್ರದುರ್ಗ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಚೌಡಿಪಾಳ್ಯ ಬಳಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಓಮ್ನಿ ವ್ಯಾನ್ನಲ್ಲಿ ಸಾಗಿಸುತ್ತಿದ್ದ 20 ಲಕ್ಷ ಹಣವನ್ನ ವಶಕ್ಕೆ ಪಡೆಯಲಾಗಿದೆ. ಇವರು ಕಡೂರು ತಾಲೂಕಿನಿಂದ ಅರಸೀಕೆರೆಗೆ ಸಾಗಿಸುತ್ತಿದ್ದರು.ಈ ವೇಳೆ ಎಸ್.ಎಸ್.ಟಿ ಟೀಮ್ ತಪಾಸಣೆ ವೇಳೆ ಹಣ ಸಿಕ್ಕಿದೆ.
ದಾವಣಗೆರೆ: ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 3.98 ಲಕ್ಷ ಹಣ ಜೊತೆಗೆ 21 ಮೊಬೈಲ್ನ್ನು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಹೊಳೆಹರಹಳ್ಳಿ ಬಳಿ ಚುನಾವಣಾ ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಕುರಿತು ದಾವಣಗೆರೆ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಕೋಲಾರ: ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಹಕ್ಕಿಪಿಕ್ಕಿ ಕಾಲೋನಿ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1 ಲಕ್ಷ ರೂಪಾಯಿ ಹಣ ಹಾಗೂ ದ್ವಿಚಕ್ರ ವಾಹನವನ್ನ ವಶಕ್ಕೆ ಪಡೆಯಲಾಗಿದೆ. ಶಿಡ್ಲಘಟ್ಟ ಮೂಲದ ಗೋಪಾಲ ಎಂಬುವರಿಗೆ ಸೇರಿದ ಹಣ ಹಾಗೂ ದ್ವಿಚಕ್ರ ವಾಹನ ಇದಾಗಿದ್ದು, ಮದನಪಲ್ಲಿಯಿಂದ ಶಿಡ್ಲಘಟ್ಟ ತಾಲ್ಲೂಕಿನ ಬುಡಗವಾರಪಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಇನ್ಸ್ಪೆಕ್ಟರ್ ಜಯಾನಂದ್ ನೇತೃತ್ವದಲ್ಲಿ ತಪಾಸಣೆ ನಡೆಸಿ, ಜಪ್ತಿ ಮಾಡಲಾಗಿದೆ. ಈ ಕುರಿತು ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ