ಬೆಂಗಳೂರು, ಮಾರ್ಚ್ 13: ಲೋಕಸಭಾ ಚುನಾವಣೆಗೆ ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾಗಿದೆ. ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ಗೆ ಹಾವೇರಿ ಟಿಕೆಟ್ ಕೈತಪ್ಪಿದೆ. ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ಗೆ ಹಾವೇರಿ ಟಿಕೆಟ್ ಕೊಡಿಸುವ ಭರವಸೆಯಲ್ಲಿದ್ದರು. ಆದರೆ ಹಾಲಿ ಶಾಸಕರಾಗಿರುವ ಬಸವರಾಜ್ ಬೊಮ್ಮಾಯಿ (Basavaraj Bommai) ಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಸದ್ಯ ಈ ವಿಚಾರವಾಗಿ ಮಾತನಾಡಿರುವ ಬಸವರಾಜ ಬೊಮ್ಮಾಯಿ, ಈಶ್ವರಪ್ಪ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅವರಿಗೆ ನನ್ನ ಮೇಲೆ ಬೇಸರ ಇಲ್ಲ ಅಂತ ಭಾವಿಸಿದ್ದೇನೆ ಎಂದಿದ್ದಾರೆ.
ಈಶ್ವರಪ್ಪ ಆರು ತಿಂಗಳಿಂದ ಹಾವೇರಿಯಲ್ಲಿ ಓಡಾಡಿದ್ದರು. ಪಕ್ಷ ಕಟ್ಟಿದವರು ಈಶ್ವರಪ್ಪ. ನನ್ನ ಬಳಿ ಸಹ ಬಂದಿದ್ದರು. ನಾನು ಅವರ ಮಗನಿಗೆ ಟಿಕೆಟ್ ನೀಡಲು ಹೇಳಿದ್ದೆ. ಆದರೆ ಸರ್ವೆ ವರದಿ ಎಲ್ಲಾ ಆಧರಿಸಿ ನೀಡಿದ್ದಾರೆ. ಈಶ್ವರಪ್ಪರು ವಿಧಾನಸಭೆಯಲ್ಲಿ ತ್ಯಾಗ ಮಾಡಿದರು. ಅವರ ಮಗನ ಹೆಸರನ್ನು ಪಾರ್ಲಿಮೆಂಟರಿ ಬೋರ್ಡ್ನಲ್ಲಿ ಕೂಡ ಹೇಳಿದ್ದೆ. ಅವರಿಗೆ ಹಿರಿತನಕ್ಕೆ ಪಕ್ಷ ಗೌರವ ನೀಡುತ್ತದೆ ಎಂದರು.
ಇದನ್ನೂ ಓದಿ: ಲೋಕಸಭಾ ಟಿಕೆಟ್ ಕೈತಪ್ಪಿದ್ದಕ್ಕೆ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಹೇಳಿದ್ದೇನು?
ಅವರು ಸಂಘದ ಹಿನ್ನಲೆಯ ವ್ಯಕ್ತಿ. ವರಿಷ್ಠರು ಅವರ ಜೊತೆ ಮಾತಾಡುತ್ತಾರೆ. ಎಲ್ಲಾ ಸರಿ ಹೋಗುತ್ತದೆ. ಮೂವತ್ತು ವರ್ಷಗಳಿಂದ ನನಗೆ ಕುರುಬ ಸಮುದಾಯದ ಜೊತೆ ಸಂಬಂಧ ಇದೆ. ಈಶ್ವರಪ್ಪ, ಸದಾನಂದ ಗೌಡರಿಗೆ ಬೇರೆ ಜವಾಬ್ದಾರಿ ನೀಡುವ ಯೋಚನೆ ಪಕ್ಷಕ್ಕೆ ಇದೆ. ಮೋದಿ ಅವರಿಗೂ ಸದಾನಂದ ಗೌಡ, ಈಶ್ವರಪ್ಪ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಸದಾನಂದ ಗೌಡ ತಮ್ಮ ಜೊತೆ ಕೆಲಸ ಮಾಡಿದವರು ಎಂದು ಮೋದಿ ಹೇಳಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಲೋಕಸಭಾ ಟಿಕೆಟ್; ಬಿಎಸ್ ಯಡಿಯೂರಪ್ಪ ಭೇಟಿ ಬಳಿಕ ಡಾ.ಮಂಜುನಾಥ್ ಹೇಳಿದ್ದಿಷ್ಟು
ನನಗೆ ಹಾವೇರಿ ಲೋಕಸಭಾ ಕ್ಷೇತ್ರ ಹೊಸದಲ್ಲ. 2 ಸಲ ಪರಿಷತ್‌ಗೆ ಸ್ಪರ್ಧಿಸಿದ್ದೆ, ಕ್ಷೇತ್ರದ ಜೊತೆ ಸುದೀರ್ಘ ಸಂಬಂಧವಿದೆ. ಟಿಕೆಟ್ ಕೇಳಿರಲಿಲ್ಲ, ಕೋರ್ ಕಮಿಟಿ ಸದಸ್ಯರು ನನ್ನ ಹೆಸರು ಸೇರಿಸಿದ್ದರು. ನನ್ನ ಸ್ಪರ್ಧೆಗೆ ಕೇಂದ್ರ ಸಚಿವ ಅಮಿತ್ ಶಾರವರು ಒಲವು ಹೊಂದಿದ್ದರು. ಸಂಸದೀಯ ಮಂಡಳಿ ಸಭೆಯಲ್ಲಿ ನನ್ನ ಹೆಸರು ಅಂತಿಮಗೊಳಿಸಿದ್ದಾರೆ ಎಂದು ತಿಳಿಸಿದರು.
ಕಳೆದ 3 ಸಲ ಹಾವೇರಿ-ಗದಗ ಭಾಗದವರು ಬಿಜೆಪಿ ಬೆಂಬಲಿಸಿದ್ದಾರೆ. ದೇಶ ಇನ್ನಷ್ಟು ಸದೃಢ ಆಗಬೇಕು, ಇದಕ್ಕೆ ಮೋದಿ ಮತ್ತೆ ಪ್ರಧಾನಿ ಆಗಬೇಕು. ಹಾವೇರಿ ಹಾಗೂ ಗದಗ ಭಾಗದ ಮತದಾರರು ಇದಕ್ಕೆ ಬೆಂಬಲ ನೀಡುತ್ತಾರೆ. ಪ್ರತಿಯೊಬ್ಬರ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ. ನನ್ನ ಆಯ್ಕೆ ಅನಿವಾರ್ಯತೆಯಲ್ಲ, ಅವಶ್ಯಕತೆ.
ಆಯ್ಕೆ ಮಾಡುವ ವೇಳೆ ಪಕ್ಷ ಹಲವು ವಿಧಿವಿಧಾನಗಳನ್ನು ಪಾಲಿಸುತ್ತದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.