ಲೋಕಸಭಾ ಟಿಕೆಟ್; ಬಿಎಸ್ ಯಡಿಯೂರಪ್ಪ ಭೇಟಿ ಬಳಿಕ ಡಾ.ಮಂಜುನಾಥ್ ಹೇಳಿದ್ದಿಷ್ಟು
ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ,ಸಿ.ಎನ್ ಮಂಜುನಾಥ್ ಅವರಿಗೆ ಟಿಕೆಟ್ ನೀಡಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸದ ಅವರು, ‘ಚುನಾವಣೆಗೆ ನಿಂತ ಮೇಲೆ ಎಲ್ಲವೂ ಬಂದೇ ಬರುತ್ತದೆ. ಎಲ್ಲ ರೀತಿಯಲ್ಲಿ ಚುನಾವಣೆ ಎದುರಿಸಲು ನಾನು ಸಿದ್ಧನಾಗಿದ್ದೇನೆ ಎಂದು ಹೇಳಿದರು.

ಬೆಂಗಳೂರು, ಮಾ.13: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು(ಮಾ.13) ಬಿಡುಗಡೆಯಾಗಿದೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಸಿ.ಎನ್ ಮಂಜುನಾಥ್ (C. N. Manjunath) ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಈ ಕುರಿತು ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(B. S. Yediyurappa) ಭೇಟಿ ಬಳಿಕ ಮಾತನಾಡಿದ ಅವರು, ‘ಅಧಿಕೃತವಾಗಿ ಇನ್ನೆರಡು ದಿನಗಳಲ್ಲಿ ಬಿಜೆಪಿ ಸೇರುತ್ತೇನೆ. ಯಡಿಯೂರಪ್ಪನವರ ಜೊತೆಗೆ ಚರ್ಚೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ಅಂದರೇನೇ ರಾಜಕೀಯ. ಆದರೆ, ನಾನು ರಾಜಕೀಯ ಮಾಡಲ್ಲ ಎಂದರು.
ಎಲ್ಲ ರೀತಿಯಲ್ಲಿ ಚುನಾವಣೆ ಎದುರಿಸಲು ನಾನು ಸಿದ್ಧ
ಚುನಾವಣೆಗೆ ನಿಂತ ಮೇಲೆ ಎಲ್ಲವೂ ಬಂದೇ ಬರುತ್ತದೆ. ಪ್ರಧಾನಿ ಮೋದಿಯವರ ಜನಪ್ರಿಯತೆ ಹಾಗೂ ಬಿಎಸ್ ಯಡಿಯೂರಪ್ಪ ಅವರ ನಾಯಕತ್ವ, ಹೆಚ್ ಡಿ ದೇವೇಗೌಡ ಮತ್ತು HD ಕುಮಾರಸ್ವಾಮಿ ಅವರ ಸಲಹೆಯಂತೆ ಕೆಲಸ ಮಾಡುತ್ತೇನೆ. ಎಲ್ಲ ರೀತಿಯಲ್ಲಿ ಚುನಾವಣೆ ಎದುರಿಸಲು ನಾನು ಸಿದ್ಧನಾಗಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿಗಾಗಿ ದೆಹಲಿಯಲ್ಲಿ ತಡ ರಾತ್ರಿವರೆಗೂ ಸಭೆ: 5 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಕೊಕ್ ಸಾಧ್ಯತೆ
ಇನ್ನು ನಾನು ಸುಧೀರ್ಘವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದೇನೆ. ನನ್ನ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಗುವ ಕೆಲಸ ಆಗುತ್ತಿದೆ. ಮೋದಿ ಸರ್ಕಾರ ಹೆಚ್ಚು ಸಾಧಕರಿಗೆ, ಪರಿಣಿತರಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಇದರಿಂದಲೇ ಇವತ್ತು ನಾನು ಲೋಕಸಭಾ ಚುನಾವಣಾ ಎದುರಿಸುತ್ತಿದ್ದೇನೆ ಎಂದರು.
ಮಂಜುನಾಥ್ ನಮ್ಮ ಜತೆ ಬರ್ತಿರುವುದು ದೊಡ್ಡ ಶಕ್ತಿ-ಯಡಿಯೂರಪ್ಪ
ಇನ್ನು ಈ ಕುರಿತು ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ‘ ಇಡೀ ನಾಡಿಗೆ ಗೊತ್ತಿರುವಂತೆ ಡಾ. ಮಂಜುನಾಥ್ ಅವರು ಲಕ್ಷಾಂತರ ಜನರ ಪ್ರಾಣ ಉಳಿಸಿದ್ಧಾರೆ. ಅವರು ಬಿಜೆಪಿಗೆ ಸೇರಿ ಚುನಾವಣೆಗೆ ಸ್ಪರ್ಧಿಸ್ತಾರೆ. ಜೊತೆಗೆ ಪಕ್ಷಕ್ಕೆ ಸೇರ್ಪಡೆ ಆಗುವ ಬಗ್ಗೆ ಮೋದಿ ಅವರಿಗೂ ತಿಳಿಸಿದ್ದೇವೆ. ಪ್ರಧಾನಿ ಮೋದಿ ಕೂಡ ಬಹಳ ಸಂತೋಷ ಪಟ್ಟಿದ್ದಾರೆ. ಮಂಜುನಾಥ್ ನಮ್ಮ ಜತೆ ಬರ್ತಿರುವುದು ನಮಗೆ ದೊಡ್ಡ ಶಕ್ತಿ ಬಂದಿದೆ. ಅಂಥವರನ್ನ ಅವಿರೋಧವಾಗಿ ಆಯ್ಕೆ ಮಾಡಿ ಕಳಿಸಬೇಕು ಎಂದರು.
ರಾಜ್ಯದ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:37 pm, Wed, 13 March 24



