ಕೊನೆಗೂ ಕನ್ನಡ ನಾಮಫಲಕ ಅಳವಡಿಕೆಗೆ ಸೈ ಎಂದ ಬೆಂಗಳೂರಿನ ಅಂಗಡಿ, ವಾಣಿಜ್ಯ ಮಳಿಗೆಗಳು
ಬೆಂಗಳೂರಿನ ಬಹುತೇಕ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಮಾಲ್ಗಳು ಕೊನೆಗೂ ಕನ್ನಡ ನಾಮಫಲಕ ಕಾನೂನಿಗೆ ತಲೆಬಾಗಿವೆ. ನಿಯಮ ಅನುಸರಿಸದ ಕಾರಣಕ್ಕಾಗಿ ನೋಟಿಸ್ ಪಡೆದಿದ್ದ ಒಟ್ಟು ಸಂಸ್ಥೆಗಳ ಪೈಕಿ ಈವರೆಗೆ ಎಷ್ಟು ಮಂದಿ ಕನ್ನಡ ನಾಮಫಲಕ ಅಳವಡಿಸಿದ್ದಾರೆ ಎಂಬ ಮಾಹಿತಿಯನ್ನು ಬಿಬಿಎಂಪಿ ಬಹಿರಂಗಪಡಿಸಿದೆ. ಆ ವಿವರ ಇಲ್ಲಿದೆ.
ಬೆಂಗಳೂರು, ಮಾರ್ಚ್ 14: ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ (Kannada) ಒಳಗೊಳ್ಳುವಂತೆ ನೋಡಿಕೊಳ್ಳದ ಕಾರಣಕ್ಕೆ ನೋಟಿಸ್ ಪಡೆದಿರುವ ಬೆಂಗಳೂರಿನ (Bengaluru) 49,732 ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಹೊಸ ನಿಯಮ ಪಾಲಿಸಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಬುಧವಾರ ತಿಳಿಸಿದೆ. ಆದರೆ, 625 ಅಂಗಡಿಗಳು ಇನ್ನೂ ನಿಯಮವನ್ನು ಪಾಲಿಸಿಲ್ಲ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಇರುವಂತೆ ನೋಡಿಕೊಳ್ಳಲು ಬಿಬಿಎಂಪಿ ಫೆಬ್ರವರಿ 28 ಕೊನೆಯ ಗಡುವು ವಿಧಿಸಿತ್ತು ಆದರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗಡುವನ್ನು ಎರಡು ವಾರಗಳ ಕಾಲ ವಿಸ್ತರಿಸಿದ್ದರು.
ಹೆಚ್ಚಿನ ಸಂಖ್ಯೆಯ ಅಂಗಡಿ ಮಾಲೀಕರು ನಿಯಮವನ್ನು ಪಾಲಿಸಿದ್ದಾರೆಂದು ತೋರುತ್ತದೆ. ಆದರೆ, ಇನ್ನು ಕೆಲವರು ನಾಮ ಫಲಕಗಳಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಿರುತ್ತಾರೆ ಎಂದು ಬಿಬಿಎಂಪಿ ಹೇಳಿದೆ.
ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯಗೊಳಿಸುವ ಸಂಬಂಧ ಮಸೂದೆಯನ್ನು ಕರ್ನಾಟಕ ಸರ್ಕಾರ ಇತ್ತೀಚೆಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದಲ್ಲಿ ಮಂಡನೆ ಮಾಡಿ ಅನುಮೋದನೆ ಪಡೆದಿತ್ತು. ಅದಕ್ಕೂ ಮುನ್ನ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಆದರೆ, ಇನ್ನೇನು ಕೆಲವೇ ದಿನಗಳಲ್ಲಿ ಬಜೆಟ್ ಅಧಿವೇಶನ ನಡೆಯಲಿದೆ ಎಂಬ ಕಾರಣಕ್ಕೆ ಅದಕ್ಕೆ ಸಹಿ ಹಾಕಲು ರಾಜ್ಯಪಾಲರು ನಿರಾಕರಿಸಿದ್ದರು. ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯುವಂತೆ ಸೂಚಿಸಿದ್ದರು. ನಂತರ ಅದೇ ರೀತಿ ಸರ್ಕಾರ ಅನುಮೋದನೆ ಪಡೆದಿತ್ತು.
ಎರಡು ವಾರಗಳ ಹಿಂದಷ್ಟೇ ಕನ್ನಡ ನಾಮಫಲಕ ವಿಚಾರದಲ್ಲಿ ರಾಜ್ಯ ಸರ್ಕಾರ ಮಾತು ತಪ್ಪಿದರೆ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಬೆಳಗಾವಿಯಲ್ಲಿ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಬೆಂಗಳೂರಿನ ಕಲ್ಯಾಣ ಮಂಟಪಗಳಿಗೂ ತಟ್ಟಿದ ನೀರಿನ ಅಭಾವ: ಮದುವೆಗಳಿಗೆ ನೀರು ಹೊಂದಿಸಲು ಮಾಲೀಕರ ಪರದಾಟ
ಈ ಮಧ್ಯೆ, ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದರು. ‘ಕನ್ನಡ ಕಣ್ಗಾವಲು’ ಹೆಸರಿನ ಮೊಬೈಲ್ ಆ್ಯಪ್ ಕನ್ನಡ ಬೋರ್ಡ್ ಅಳವಡಿಸದವರ ಮೇಲೆ ಕಣ್ಗಾವಲಿಡಲಿದೆ. ಇಷ್ಟೇ ಅಲ್ಲದೆ, ಕಾನೂನು ಜಾರಿಗೆ ಕಾರ್ಯಪಡೆಯೊಂದನ್ನೂ ರಚಿಸಲಾಗುವುದು ಎಂದು ಅವರು ಹೇಳಿದ್ದರು.
ರಾಜ್ಯದ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ