ಬೆಂಗಳೂರಿನ ಕಲ್ಯಾಣ ಮಂಟಪಗಳಿಗೂ ತಟ್ಟಿದ ನೀರಿನ ಅಭಾವ: ಮದುವೆಗಳಿಗೆ ನೀರು ಹೊಂದಿಸಲು‌ ಮಾಲೀಕರ ಪರದಾಟ

ಉದ್ಯಾನಗರಿಯ ಯಾವ ಮೂಲೆಗೆ ಹೋದ್ರೂ ನೀರಿಲ್ಲ. ನಗರದ ಕೆರೆ-ಕಟ್ಟೆಗಳು ಬರಿದಾಗಿವೆ. ಹೀಗಾಗಿ ಈಗಾಗಲೇ ಬುಕ್ ಆಗಿರುವ ಮದುವೆಗಳಿಗೆ ನೀರು ಹೊಂದಿಸಲು‌ ಕಲ್ಯಾಣ ಮಂಟಪ ಮಾಲೀಕರು ಪರದಾಡುವಂತಾಗಿದೆ. ನೀರಿನ ಅಭಾವ ಹಿನ್ನಲೆ ಹೊಸದಾಗಿ ಬುಕ್ಕಿಂಗ್ ತಗೆದುಕೊಳ್ಳಲು ಹಿಂದೇಟು ಹಾಕಲಾಗುತ್ತಿದೆ. ಬುಕ್ಕಿಂಗ್ ಆದ ಮದುವೆಯನ್ನು ನಿಭಾಯಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಕಲ್ಯಾಣ ಮಂಟಪಗಳ ಮಾಲೀಕರಿದ್ದಾರೆ.

ಬೆಂಗಳೂರಿನ ಕಲ್ಯಾಣ ಮಂಟಪಗಳಿಗೂ ತಟ್ಟಿದ ನೀರಿನ ಅಭಾವ: ಮದುವೆಗಳಿಗೆ ನೀರು ಹೊಂದಿಸಲು‌ ಮಾಲೀಕರ ಪರದಾಟ
ಪ್ರಾತಿನಿಧಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Mar 13, 2024 | 7:00 PM

ಬೆಂಗಳೂರು, ಮಾರ್ಚ್​​​ 13: ರಾಜಧಾನಿ ಬೆಂಗಳೂರಿನಲ್ಲಿ ಕುಡಿಯೋ ನೀರಿಗೂ (water) ಹಾಹಾಕಾರ ಉಂಟಾಗಿದೆ. ಕಾವೇರಿ ನೀರು ಬರುತ್ತಿಲ್ಲ. ನಗರದ ಕೆರೆ-ಕಟ್ಟೆಗಳು ಬರಿದಾಗಿವೆ. ಬೋರ್​ವೆಲ್​ಗಳಲ್ಲಿ ನೀರು ಪಾತಾಳ ಸೇರಿದ್ದು, ನಗರಕ್ಕೆ ಜಲಕ್ಷಾಮ ತಟ್ಟುತ್ತಿದೆ. ನಗರದ ಕಲ್ಯಾಣ ಮಂಟಪಗಳಿಗೂ ನೀರಿನ ಅಭಾವ ಉಂಟಾಗಿದೆ.  ಈಗಾಗಲೇ ಬುಕ್ ಆಗಿರುವ ಮದುವೆಗಳಿಗೆ ನೀರು ಹೊಂದಿಸಲು‌ ಕಲ್ಯಾಣ ಮಂಟಪ ಮಾಲೀಕರು ಪರದಾಡುವಂತಾಗಿದೆ. ಬುಕ್ಕಿಂಗ್ ಆಗಿರುವ ಮದುವೆಗಳಿಗೆ 20% ನೀರಿಗಾಗಿ ಕೈಯಿಂದಲೇ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ. ನೀರಿನ ಅಭಾವ ಹಿನ್ನಲೆ ಹೊಸದಾಗಿ ಬುಕ್ಕಿಂಗ್ ತಗೆದುಕೊಳ್ಳಲು ಹಿಂದೇಟು ಹಾಕಲಾಗುತ್ತಿದೆ.

ಬುಕ್ಕಿಂಗ್ ಆದ ಮದುವೆಯನ್ನು ನಿಭಾಯಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಕಲ್ಯಾಣ ಮಂಟಪಗಳ ಮಾಲೀಕರಿದ್ದಾರೆ. ಪ್ರತಿ ಛತ್ರಗಳಲ್ಲಿಯೂ ಮದುವೆಗಾಗಿ ಬುಕಿಂಗ್ ಆಗಿವೆ. ವಿವಾಹ, ಉಪನಯನಕ್ಕೆ ಮುಂಗಡ ಕಾಯ್ದಿರಿಸಲಾಗಿದೆ. ಬಹುತೇಕ ಎಲ್ಲ ಛತ್ರಗಳ ಬೋರ್ ಹೊಂದಿವೆ. ಆದರೆ ಆ ಬೋರ್​​ಗಳಲ್ಲಿ ಅಂತರ್ಜಲ ಬತ್ತಿ ಹೋಗಿದೆ.

ಇದನ್ನೂ ಓದಿ: Bengaluru Water Crisis: ವಾರಕ್ಕೊಮ್ಮೆ ಸ್ನಾನ, ಆರ್ಡರ್ ಮಾಡಿ ಊಟ; ಬೆಂಗಳೂರು ನಿವಾಸಿಗಳ ಗೋಳು ಒಂದಾ ಎರಡಾ!

ಒಂದು ಮದುವೆಗೆ ಕನಿಷ್ಟ ಪಕ್ಷ 5 ಸಾವಿರ ಲೀಟರ್ ನೀರು ಬೇಕು. ಹೀಗಾಗಿ ಒಂದು ಮದುವೆಗೆ ನಾಲ್ಕೈದು ಟ್ಯಾಂಕರ್ ‌ನೀರು ಬೇಕೆ ಬೇಕು. ಬಿಬಿಎಂಪಿ ಟ್ಯಾಂಕರ್ ನೀರಿಗೆ ದರ ಫಿಕ್ಸ್ ಮಾಡಿದರೆ ಸಮಯಕ್ಕೆ ಟ್ಯಾಂಕರ್ ನೀರು ಬರಲ್ಲ. ಹೆಚ್ಚಿನ ಬೆಲೆಗೆ ಟ್ಯಾಂಕರ್ ನೀರು ಪಡೆಯಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಏಪ್ರಿಲ್, ಮೇನಲ್ಲಿ ಬ್ಯಾಕ್ ಟು ಬ್ಯಾಕ್ ಮದುವೆಗಳಿವೆ. ಈಗಲೇ ಹೀಗೆ ಆದರೆ ಮುಂದೆ ಹೇಗೆ ಎಂಬ ಆತಂಕ ಕಲ್ಯಾಣ ಮಂಟಪದವರಿಗೆ ಶುರುವಾಗಿದೆ.

ನೀರಿನ ಅಭಾವದಿಂದ ಹೋಟೆಲ್​ಗಳಲ್ಲಿ ಹೊಸ ರೂಲ್ಸ್

ನೀರಿನ ಅಭಾವದ ನಡುವೆ, ಜಲಸಂಕರಕ್ಷಣೆಗೆ ಬೆಂಗಳೂರು ಹೋಟಲ್ ಅಸೋಸಿಯೇಷನ್ ಮುಂದಾಗಿದೆ. ಅದೇನಂದರೆ, ಟೇಬಲ್​ಗಳ ಮೇಲೆ ಗ್ಲಾಸ್‌ನಲ್ಲಿ ನೀರು ಇಡುವುದರಿಂದ ಕೆಲವರು ಕುಡಿಯೋದೇ ಇಲ್ಲ. ಹೀಗಾಗಿ ಗ್ರಾಹಕರು ಬಂದೊಡನೆ ಖಾಲಿ ಗ್ಲಾಸ್‌ ಇಟ್ಟು, ಜಗ್‌ನಲ್ಲಿ ನೀರು ಇಡೋದೇ ಸೂಕ್ತ. ಇದ್ರಿಂದ ಪ್ರತಿ ಹೋಟೆಲ್​​ಗಳಲ್ಲಿ ದಿನಕ್ಕೆ 300 ರಿಂದ 400 ಲೀಟರ್ ನೀರು ಉಳಿಸಬಹುದು ಅಂತಿದ್ದಾರೆ. ಜೊತೆಗೆ ಬಳಸಿ ಬಿಸಾಡುವ ಲೋಟ, ತಟ್ಟೆಗಳನ್ನ ಬಳಸಲು ಸೂಚಿಸಲಾಗಿದೆ.

ಬೋರ್​​ವೆಲ್ ಮೋಟಾರ್​​ಗಳಿಗೆ ಕನ್ನ

ನೀರಿನ ಹಾಹಾಕಾರ ಒಂದು ಕಡೆಯಾದರೆ ಬೋರ್​​ವೆಲ್ ಮೋಟಾರ್​​ಗಳಿಗೆ ಕನ್ನ ಹಾಕಲಾಗುತ್ತಿದೆ. ದಾಸರಹಳ್ಳಿ ವಿಧಾನಸಭಾಕ್ಷೇತ್ರದ ರಾಜಗೋಪಾಲನಗರ ಜನರಿಗೆ ಜಲಸಂಕಷ್ಟ ಎದುರಾಗಿದೆ. ನಲ್ಲಿ ನೀರು ಬರದೇ ನಿವಾಸಿಗಳು ಹೈರಾಣಾಗಿದ್ದಾರೆ. ಅತ್ತ ನೀರು ಇರುವ ಬೋರ್​ವೆಲ್​​ಗಳ ಮೋಟಾರ್ ಕಳವು ಆರೋಪ ಮಾಡಲಾಗಿದೆ.

ಇದನ್ನೂ ಓದಿ: ಒಂದೆಡೆ ನಲ್ಲಿ ನೀರು ಬರ್ತಿಲ್ಲ, ಮತ್ತೊಂದೆಡೆ ನೀರು ಬರುವ ಬೋರ್ ವೆಲ್ ಮೋಟಾರ್​ ಕದಿಯುತ್ತಿರುವ ಖದೀಮರು; ಜನ ಹೈರಾಣ

ರಾತ್ರೋ ರಾತ್ರಿ ಬೋರ್ ವೆಲ್ ಮೋಟಾರ್​ಗಳನ್ನು ಕಳ್ಳರು ಮಾಡುತ್ತಿದ್ದಾರೆ. ಏರಿಯಾದಲ್ಲಿರುವ ಸಿಸಿಟಿವಿಗಳು ವರ್ಕ್ ಆಗದೇ ಇರುವುದೇ ಪ್ಲಸ್ ಪಾಯಿಂಟ್ ಆಗಿದೆ. ಬೋರ್ ವೆಲ್​ಗಳ ಮೋಟಾರ್ ಕಿತ್ತು, ಕಳ್ಳತನ ಮಾಡಿ ಪುಂಡರ ಆಟಾಟೋಪ ನಡೆಸಿದ್ದಾರೆ.

ಬೋರ್ ವೆಲ್​ನಲ್ಲಿ ನೀರು ಇದ್ದರೂ ಈ ಸಮಸ್ಯೆಯಿಂದ ಜನರು ಹೈರಾಣಾಗಿದ್ದಾರೆ. ಸರ್ಕಾರದಿಂದ ಇಟ್ಟಿರುವ ಟ್ಯಾಂಕ್ ನೀರು ಕೂಡ ಸಾಕಾಗದೇ ನಿವಾಸಿಗಳು ಕಂಗಾಲಾಗಿದ್ದಾರೆ. ನೀರಿನ ಸಮಸ್ಯೆಯಿಂದ ಮುಕ್ತಿ ಕೊಡಿ ಎಂದು ಜನರ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.