ಐಸಿಸಿ ಅಂದ್ರೆ ಇಂಡಿಯನ್ ಕ್ರಿಕೆಟ್ ಬೋರ್ಡ್ ಆಗಿಬಿಟ್ಟಿದೆ: ಮಾಜಿ ಕ್ರಿಕೆಟಿಗ ತರಾಟೆ
Team India: ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಆಂಡಿ ರಾಬರ್ಟ್ಸ್ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದು ಸಹ ಐಸಿಸಿ ಟೀಮ್ ಇಂಡಿಯಾಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಆರೋಪಿಸುವ ಮೂಲಕ ಎಂಬುದು ವಿಶೇಷ.

ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಿಟ್ಟ ಎಲ್ಲಾ ಬೇಡಿಕೆಗಳನ್ನು ಪೂರೈಸಿದ್ದಕ್ಕಾಗಿ ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಆಂಡಿ ರಾಬರ್ಟ್ಸ್, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಕೈಯಲ್ಲಿತ್ತು. ಆದರೆ ಭಾರತ ತಂಡ ಪಾಕ್ಗೆ ತೆರಳಲು ಹಿಂದೇಟು ಹಾಕಿದ್ದರಿಂದ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಯಿತು. ಅದರಂತೆ ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಫೈನಲ್ ಸೇರಿದಂತೆ ಟೀಮ್ ಇಂಡಿಯಾದ 5 ಪಂದ್ಯಗಳಿಗೆ ದುಬೈ ಆತಿಥ್ಯವಹಿಸಿತ್ತು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವನ್ನು ಒಂದೇ ಮೈದಾನದಲ್ಲಿ ಕಣಕ್ಕಿಳಿಸಿದ ಐಸಿಸಿ ನಿರ್ಧಾರವನ್ನು ಟೀಕಿಸಿರುವ ವೆಸ್ಟ್ ಇಂಡೀಸ್‌ನ ಮಾಜಿ ವೇಗಿ ಆಂಡಿ ರಾಬರ್ಟ್ಸ್, ಈ ಹಿಂದೆ ಟಿ20 ವಿಶ್ವಕಪ್ ವೇಳೆಯೂ ಐಸಿಸಿ ಭಾರತ ತಂಡಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲೂ ಅದನ್ನು ಮುಂದುವರೆಸಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಆಂಡಿ ರಾಬರ್ಟ್ಸ್, ಟಿ20 ವಿಶ್ವಕಪ್ ವೇಳೆ ಟೀಮ್ ಇಂಡಿಯಾ ಗಯಾನಾದಲ್ಲಿ ಸೆಮಿಫೈನಲ್ ಆಡುವುದು ಪೂರ್ವ ನಿರ್ಧಾರಿತವಾಗಿತ್ತು. ಈ ಮೂಲಕ ಟೂರ್ನಿ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ತನ್ನ ಸೆಮಿಫೈನಲ್ ಮೈದಾನ ಯಾವುದೆಂದು ತಿಳಿಸಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲೂ ಒಂದೇ ಮೈದಾನ ನೀಡಿದ್ದಾರೆ.
ಪ್ರತಿ ಬಾರಿಯ ಟೂರ್ನಿಗೂ ಐಸಿಸಿ ಭಾರತಕ್ಕೆ ಏನನ್ನಾದರೂ ಕೊಡಲೇಬೇಕು. ಐಸಿಸಿ ಕೆಲವೊಮ್ಮೆ ಭಾರತಕ್ಕೆ ‘ಇಲ್ಲ’ ಎಂದು ಹೇಳಲು ಕೂಡ ಕಲಿಯಬೇಕಿದೆ. ಹೀಗೆ ಪ್ರತಿ ಬಾರಿಯು ಭಾರತ ತಂಡಕ್ಕೆ ಅನುಕೂಲ ಮಾಡಿಕೊಡುವುದು ನೋಡಿದರೆ, ಐಸಿಸಿ ಅಂದರೆ ಇಂಡಿಯನ್ ಕ್ರಿಕೆಟ್ ಕೌನ್ಸಿಲ್ ಎಂದೆನಿಸುತ್ತದೆ ಎಂದು ಆಂಡಿ ರಾಬರ್ಟ್ಸ್ ವ್ಯಂಗ್ಯವಾಡಿದ್ದಾರೆ.
ನೀವೇ ನೋಡಿ, ಇಡೀ ಟೂರ್ನಿಯಲ್ಲಿ ಎಲ್ಲಾ ತಂಡಗಳು ಬೇರೆ ಬೇರೆ ಮೈದಾನದಲ್ಲಿ ಆಡಿದ್ದಾರೆ. ಆದರೆ ಭಾರತ ತಂಡ ಮಾತ್ರ ಎಲ್ಲೂ ಸಹ ಪ್ರಯಾಣ ಬೆಳೆಸಿಲ್ಲ. ಅಲ್ಲದೆ ಒಂದೇ ಮೈದಾನದಲ್ಲಿ ಆಡಿದ್ದಾರೆ. ಬಹು ತಂಡಗಳ ಟೂರ್ನಮೆಂಟ್ನಲ್ಲಿ ತಂಡವೊಂದು ಹೇಗೆ ಪ್ರಯಾಣಿಸದಿರಲು ಸಾಧ್ಯ? ಎಂದು ರಾಬರ್ಟ್ಸ್ ಪ್ರಶ್ನಿಸಿದ್ದಾರೆ.
ಇವೆಲ್ಲವನ್ನು ಗಮಿಸಿದರೆ, ಬಿಸಿಸಿಐನ ಎಲ್ಲಾ ಬೇಡಿಕೆಗಳನ್ನು ಐಸಿಸಿ ಪೂರೈಸುತ್ತಿದೆ ಎಂದೆನಿಸುವುದಿಲ್ಲವೇ? ನನ್ನ ಪ್ರಕಾರ, ಐಸಿಸಿ ಪ್ರತಿ ಬಾರಿಯು ಬಿಸಿಸಿಐನ ಪರ ನಿಲ್ಲುತ್ತಿದೆ. ಬಿಸಿಸಿಐ ಎಲ್ಲವನ್ನೂ ನಿಯಂತ್ರಿಸುತ್ತಿದೆ.
ನಾಳೆ ಭಾರತ ನೋ-ಬಾಲ್‌ಗಳು ಮತ್ತು ವೈಡ್‌ಗಳು ಇರಬಾರದು ಎಂದು ಹೇಳಿದರೆ, ಐಸಿಸಿ ಬಿಸಿಸಿಐಯನ್ನು ತೃಪ್ತಿಪಡಿಸಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ. ಹೀಗಾಗಿಯೇ ನಾನು ಐಸಿಸಿ ಈಗ ಇಂಡಿಯನ್ ಕ್ರಿಕೆಟ್ ಬೋರ್ಡ್ ಆಗಿ ಮಾರ್ಪಟ್ಟಿದೆ ಎಂದಿರುವುದು ಎಂದು ಆಂಡಿ ರಾಬರ್ಟ್ಸ್ ಹೇಳಿದ್ದಾರೆ.
ಇದಕ್ಕೂ ಮುನ್ನ, ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ಅಥರ್ಟನ್ ಕೂಡ, ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿದ್ದರಿಂದ ಗಮನಾರ್ಹ ಪ್ರಯೋಜನವನ್ನು ಪಡೆದುಕೊಂಡಿದೆ ಎಂದಿದ್ದರು. ಹಾಗೆಯೇ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕೂಡ ಭಾರತ ತಂಡವು ಒಂದೇ ಮೈದಾನದಲ್ಲಿ ಆಡುತ್ತಿರುವುದು ಅನುಕೂಲಕರವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಮುಂದಿನ ವಿಶ್ವಕಪ್ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲ..!
ಇದೀಗ 1975, 1979 ಮತ್ತು 1983 ರ ವಿಶ್ವಕಪ್ ತಂಡದ ಭಾಗವಾಗಿದ್ದ ವೆಸ್ಟ್ ಇಂಡೀಸ್‌ನ ಮಾಜಿ ವೇಗಿ ಆಂಡಿ ರಾಬರ್ಟ್ಸ್ ಕೂಡ ಐಸಿಸಿ ನೇರವಾಗಿ ಟೀಮ್ ಇಂಡಿಯಾದ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಿದೆ ಎಂದು ಆರೋಪಿಸಿದ್ದಾರೆ.