ಹಣ ಕಳ್ಳತನವಾಗಿದೆ ಎಂದು ಸಮವಸ್ತ್ರ ಬಿಚ್ಚಿಸಿ ಪರಿಶೀಲನೆ ನಡೆಸಿದ್ದ ಶಿಕ್ಷಕಿಯರು, ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ತನ್ನ ಬ್ಯಾಗ್ನಲ್ಲಿ ಇಟ್ಟಿದ್ದ ಎರಡು ಸಾವಿರ ರೂ ಕಳ್ಳತನವಾಗಿದೆ ಎಂದು ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳ ಬಳಿ ಕೇಳಿದ್ದು ಅನುಮಾನ ಬಂದ ನಾಲ್ಕೈದು ಮಕ್ಕಳನ್ನು ಕರೆಸಿ ಅವರ ಬಟ್ಟೆ ಬಿಚ್ಚಿಸಿ ಪರಿಶೀಲನೆ ನಡೆಸಿದ್ದರು. ಈ ಪೈಕಿ ದಿವ್ಯಾಳ ಸಮವಸ್ತ್ರ ಬಿಚ್ಚಿಸಿ ಪರಿಶೀಲನೆ ನಡೆಸಿದ್ದು ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ.
ಬಾಗಲಕೋಟೆ, ಮಾರ್ಚ್.17: 2 ಸಾವಿರ ರೂ. ಕಳ್ಳತನವಾಗಿದೆ ಎಂದು ಶಿಕ್ಷಕಿಯರು ಸಮವಸ್ತ್ರ ಬಿಚ್ಚಿಸಿ ವಿದ್ಯಾರ್ಥಿನಿಯನ್ನು ಪರಿಶೀಲನೆ ನಡೆಸಿದ್ದು ಇದರಿಂದ ಮನನೊಂದ ವಿದ್ಯಾರ್ಥಿನಿ (Student) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ (Bagalkot) ನಡೆದಿದೆ. 8ನೇ ತರಗತಿ ಓದುತ್ತಿದ್ದ ದಿವ್ಯಾ ಬಾರಕೇರ(14) ಆತ್ನಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಾರ್ಚ್ 16 ರಂದು ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಬಂದು ನೇಣಿಗೆ ಶರಣಾಗಿದ್ದಾಳೆ.
ಆ ಶಿಕ್ಷಕಿಯ 2 ಸಾವಿರ ರೂ ಶಾಲೆಯಲ್ಲಿ ಕಳೆದು ಹೋಗಿತ್ತು. ಆದರೆ ಶಿಕ್ಷಕಿಗೆ ವಿದ್ಯಾರ್ಥಿನಿಯರ ಮೇಲೆ ಸಂಶಯ. ಇದರಿಂದ ಐದು ಜನ ವಿದ್ಯಾರ್ಥಿನಿಯರ ಸಮವಸ್ತ್ರ ಬಿಚ್ಚಿ ಚೆಕ್ ಮಾಡಿದ್ದಾರಂತೆ. ಜೊತೆಗೆ ದೇವರ ಮೇಲೆ ಆಣೆ ಮಾಡಿಸಿದ್ದಾರಂತೆ. ಅವಮಾನದಿಂದ ಇದರಲ್ಲಿ ಎಂಟನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಮೇಲೆ ಬಂದ ಸುಳ್ಳು ಆರೋಪಕ್ಕೆ ಬಾಲಕಿ ತನ್ನ ಜೀವವನ್ನು ತಾನೆ ಅಂತ್ಯ ಮಾಡಿಕೊಂಡಿದ್ದಾಳೆ. ಇದರಿಂದ ಬಾಲಕಿಯ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಮಗಳ ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಈ ವಿದ್ಯಾರ್ಥಿನಿ ಹೆಸರು ದಿವ್ಯಾ ಬಾರಕೇರ, 14 ವರ್ಷ ವಯಸ್ಸು. ವಿದ್ಯಾರ್ಥಿನಿ ಆತ್ಮಹತ್ಯೆಗೆ ಆಕೆಯ ಶಿಕ್ಷಕಿಯೇ ಕಾರಣರಾಗಿದ್ದಾರೆ. ಈ ಘಟನೆ ನಡೆದಿದ್ದು ಬಾಗಲಕೋಟೆ ತಾಲ್ಲೂಕಿನ ಕದಂಪುರ ಗ್ರಾಮದಲ್ಲಿ.
ಗ್ರಾಮದ ಕದಂಪುರ ಪ್ರೌಢಶಾಲೆಯ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ ಇವರ 2 ಸಾವಿರ ಹಣ ಮಾರ್ಚ್ 14 ರಂದು ಕಳೆದಿತ್ತು. ಆಗ ಕನ್ನಡ ಶಿಕ್ಷಕಿ ಜಯಶ್ರೀ ಹಾಗೂ ಮುಖ್ಯಶಿಕ್ಷಕ ಇತರೆ ಶಿಕ್ಷಕರು ವಿದ್ಯಾರ್ಥಿನಿಯರ ಮೇಲೆ ಸಂಶಯ ಪಟ್ಟಿದ್ದರು. 10ನೇ ತರಗತಿಯ ನಾಲ್ವರು ಎಂಟನೇ ತರಗತಿಯ ದಿವ್ಯಾ ಮೇಲೆ ಸಂಶಯ ಪಟ್ಟಿದ್ದರು. ಹಣ ಯಾರು ಕಳ್ಳತನ ಮಾಡಿದ್ದೀರಿ ಕೊಡಿ ಎಂದು ಗದರಿಸಿದ್ದರು. ಸಾಲದು ಎಂಬಂತೆ ಸಮವಸ್ತ್ರ ಬಿಚ್ಚಿಸಿ ಚೆಕ್ ಮಾಡಿದ್ದಾರೆ. ಮೇಲಾಗಿ ಹಣ ಕೊಡದಿದ್ದರೆ ಟಿ.ಸಿ. ಕಿತ್ತು ಕೊಡೋದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಅವಮಾನ ತಾಳದೆ ಎಂಟನೇ ತರಗತಿ ವಿದ್ಯಾರ್ಥಿನಿ ದಿವ್ಯಾ ನಿನ್ನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಳಿ ಬೆಳಕಾಗಬೇಕಿದ್ದ ಮಗಳ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ದಿವ್ಯಾ ಸಾವಿಗೆ ಶಿಕ್ಷಕಿ ಜಯಶ್ರಿಯೇ ಕಾರಣ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಬಾಲಕಿ ಚಿಕ್ಕಪ್ಪ ಪ್ರಕಾಶ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Uttar Pradesh: ನಿರಂತರ ಕಿರುಕುಳದಿಂದ ಬೇಸತ್ತು ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಇಲ್ಲಿ ಜಯಶ್ರೀ ಆರೋಪ ಕೇಳಿ ಮುಖ್ಯ ಶಿಕ್ಷಕ ಕೆ ಹೆಚ್ ಮುಜಾವರ, ವಿಜ್ಞಾನ ಶಿಕ್ಷಕಿ ರಾಜೇಶ್ವರಿ, ಶಿಕ್ಷಕಿ ಅಕ್ಕ ನಾಗಮ್ಮ, ಅಂಜಲಿ ಗೌಡರ ಎಲ್ಲರೂ ಸೇರಿ ಸಮವಸ್ತ್ರ ಬಿಚ್ಚಿಸಿ ಚೆಕ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇಷ್ಟೇ ಅಲ್ಲದೆ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ ಹಾಗೂ ಮುಖ್ಯಶಿಕ್ಷಕ ಕೆ ಹೆಚ್ ಮುಜಾವರ ಹಣ ಕದ್ದಿಲ್ಲ ಎಂದು ದುರ್ಗಾದೇವಿ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಿಸಿದ್ದಾರಂತೆ. ವಿದ್ಯಾರ್ಥಿನಿಯರು ಹಣ ಕದ್ದಿಲ್ಲ ಎಂದು ಆಣೆ ಮಾಡಿದ್ದಾರೆ. ಪಾಠ ಹೇಳಿ ಸರಿ ದಾರಿಗೆ ತರಬೇಕಾದ ಶಿಕ್ಷಕರೇ ಇಷ್ಟೊಂದು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಶಿಕ್ಷಕರೇ ಆಣೆ ಪ್ರಮಾಣ ಮಾಡಿಸಿ ಮೌಢ್ಯತೆ ಮೆರೆದಿದ್ದಾರೆ. ಇದರಿಂದ ಊರಲ್ಲಿ ವಿದ್ಯಾರ್ಥಿನಿಯರಿಗೆ ಅವಮಾನವಾಗಿದೆ. ಇದನ್ನು ತೀರಾ ಮನಸ್ಸಿಗೆ ಹಚ್ಚಿಕೊಂಡ ದಿವ್ಯಾ ಬಾರಕೇರ ನಿನ್ನೆ ಮಧ್ಯಾಹ್ನ 1.30ಕ್ಕೆ ಮನೆಯಲ್ಲಿ ಯಾರು ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಶಿಕ್ಷಕಿ ಜಯಶ್ರೀ ಹಾಗೂ ಮುಖ್ಯ ಶಿಕ್ಷಕ ಕೆ ಹೆಚ್ ಮುಜಾವರ ವಿರುದ್ಧ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆದರೆ ಹಣ ಮಾರನೇ ದಿನ ಶಾಲೆಯ ಲ್ಯಾಬ್ ನಲ್ಲಿತ್ತು ಎಂದು ತಿಳಿದು ಬಂದಿದೆ. ವಿನಾಕಾರಣ ಸಂಶಯಪಟ್ಟು ಒಂದು ಜೀವ ಹೋಗಲು ಶಿಕ್ಷಕಿ ಕಾರಣರಾಗಿದ್ದಾರೆ. ಇನ್ನು ಈ ಬಗ್ಗೆ ಮಾತಾಡಿದ ಡಿಡಿಪಿಐ ಬಿಕೆ ನಂದನೂರು ನನಗೆ ನಿನ್ನೆ ಸಂಜೆ ಈ ಬಗ್ಗೆ ಮಾಹಿತಿ ಬಂದಿದೆ. ಶಿಕ್ಷಕಿಯರು ವಿದ್ಯಾರ್ಥಿನಿಯರ ಈ ರೀತಿ ಅವಮಾನ ಮಾಡಿದ್ದೇ ಆದರೆ ಖಂಡಿತ ಸಹಿಸೋದಕ್ಕೆ ಸಾಧ್ಯವಿಲ್ಲ. ನಾಳೆ ಅಧಿಕಾರಿಗಳನ್ನು ಶಾಲೆಗೆ ಕಳಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದರು. ಕೇವಲ 2 ಸಾವಿರ ಹಣಕ್ಕಾಗಿ ಸಂಶಯ, ಸಮವಸ್ತ್ರ ಬಿಚ್ಚಿಸಿ ಅವಮಾನ ಮಾಡಿದ್ದು ವಿಪರ್ಯಾಸ. ಬದುಕು ರೂಪಿಸಬೇಕಾದ ಗುರುವೃಂದವೇ ಇಂತ ಕೃತ್ಯ ಎಸಗಿ ಒಂದು ಜೀವ ಹೋಗಲು ಕಾರಣರಾಗಿದ್ದು ಬೇಸರದ ಸಂಗತಿಯಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:01 am, Sun, 17 March 24