ಬಿಜೆಪಿ ಸರ್ಕಾರದ ವಿರುದ್ಧ ಅಂಬಿಕಾಪತಿ ಮಾಡಿದ್ದ 40 ಪರ್ಸೆಂಟ್ ಆರೋಪ ಸುಳ್ಳೆಂದ ಲೋಕಾ ತನಿಖೆ!

| Updated By: ಗಣಪತಿ ಶರ್ಮ

Updated on: Nov 16, 2024 | 11:52 AM

ಬಿಜೆಪಿ ಸರ್ಕಾರದ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪವನ್ನು ಲೋಕಾಯುಕ್ತ ತನಿಖೆ ಅಲ್ಲಗಳೆದಿದೆ. ರಾಜ್ಯ ಗುತ್ತಿಗೆದಾರರ ಸಂಘದ ಮಾಜಿ ಉಪಾಧ್ಯಕ್ಷ ಅಂಬಿಕಾಪತಿ ಅವರ ಆರೋಪಗಳು ಆಧಾರರಹಿತ ಎಂದು ತನಿಖಾ ವರದಿ ತಿಳಿಸಿದೆ. ಬಿಬಿಎಂಪಿ ಪೂರ್ವ ವಿಭಾಗದಲ್ಲಿ ಅವರು ಯಾವುದೇ ಗುತ್ತಿಗೆ ಪಡೆದಿಲ್ಲ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.

ಬಿಜೆಪಿ ಸರ್ಕಾರದ ವಿರುದ್ಧ ಅಂಬಿಕಾಪತಿ ಮಾಡಿದ್ದ 40 ಪರ್ಸೆಂಟ್ ಆರೋಪ ಸುಳ್ಳೆಂದ ಲೋಕಾ ತನಿಖೆ!
ಬಸವರಾಜ ಬೊಮ್ಮಾಯಿ ಹಾಗೂ ಅಂಬಿಕಾಪತಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು, ನವೆಂಬರ್ 16: ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸೇರಿದಂತೆ ಹಲವು ಅವ್ಯವಹಾರಗಳ ಆರೋಪ ಎದುರಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಅವ್ಯವಹಾರಗಳ ತನಿಖೆಗೆ ಆದೇಶಿಸುವ ಮೂಲಕ ಕೌಂಟರ್ ಕೊಡಲು ಮುಂದಾಗಿದೆ. ಕೋವಿಡ್​ ಹಗರಣದ ತನಿಖೆಗೆ ಎಸ್​ಐಟಿ ರಚನೆ ಮಾಡಲು ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿತ್ತು. ಈ ಮಧ್ಯೆ, ಬಿಜೆಪಿ ಸರ್ಕಾರದ ವಿರುದ್ಧ ಈ ಹಿಂದೆ, ಅಂದಿನ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮಾಡಿದ್ದ 40 ಪರ್ಸೆಂಟ್ ಆರೋಪ ಸುಳ್ಳೆಂಬುದು ಲೋಕಾಯುಕ್ತ ತನಿಖೆಯಿಂದ ತಿಳಿದುಬಂದಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 40 ಪರ್ಸೆಂಟ್ ಕಮಿಷನ್ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಅಂಬಿಕಾಪತಿ ಅವರು ಆರೋಪ ಮಾಡಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಈ ಆರೋಪ ಮಾಡಲಾಗಿತ್ತು. 40 ಪರ್ಸೆಂಟ್ ಕಮಿಷನ್ ಆರೋಪವನ್ನು ರಾಜಕೀಯವಾಗಿ ಪ್ರಬಲ ಅಸ್ತ್ರ ಮಾಡಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದಿದ್ದರು. ಇದನ್ನೇ ಪ್ರಮುಖವಾಗಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಕಾಂಗ್ರೆಸ್ ಬಹುತೇಕ ಯಶಸ್ವಿಯಾಗಿತ್ತು.

ಅಚ್ಚರಿಯೆಂದರೆ, ಇದೀಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಲೋಕಾಯುಕ್ತ ಪೊಲೀಸರು ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಿದ್ದಾರೆ. ಅಂಬಿಕಾಪತಿ ಅಂದು ಮಾಡಿದ್ದ ಆರೋಪಗಳು ಆಧಾರರಹಿತ ಎಂಬುದು ಲೋಕಾಯುಕ್ತ ತನಿಖಾ ವರದಿಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ತನಿಖಾ ವರದಿಯಲ್ಲೇನಿದೆ?

ಆರೋಪ ಮಾಡಿರುವ ಅಂಬಿಕಾಪತಿ, ಬಿಬಿಎಂಪಿ ಪೂರ್ವ ವಿಭಾಗದಲ್ಲಿ ಕಳೆದ 6 ವರ್ಷಗಳಲ್ಲಿ ಆಟದ ಮೈದಾನಕ್ಕೆ ಸಂಬಂಧಿಸಿದ ಗುತ್ತಿಗೆ ಪಡೆಯದೇ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತ ದಾಖಲೆಗಳನ್ನೂ ಪರಿಶೀಲಿಸಲಾಗಿದ್ದು, ಗುತ್ತಿಗೆದಾರ ಎನ್​ಎಂ ಕೃಷ್ಣಮೂರ್ತಿ ಕಾಮಗಾರಿ ಪೂರ್ಣಗೊಳಿಸಿರುವುದು ತಿಳಿದುಬಂದಿದೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ.

ಅಂಬಿಕಾಪತಿ ಎಂಬ ಗುತ್ತಿಗೆದಾರರು ಸುದ್ದಿ ವಾಹಿನಿಯೊಂದಕ್ಕೆ ಕೊಟ್ಟಿರುವ ಸಂದರ್ಶನದಲ್ಲಿ, ಆಟದ ಮೈದಾನದ ಕಾಮಗಾರಿಯ ಗುತ್ತಿಗೆಗಾಗಿ ಅಧಿಕಾರಿಗಳಿಗೆ ಮತ್ತು ಮಧ್ಯವರ್ತಿಗಳಿಗೆ ಲಂಚ ನೀಡಿದ್ದೇನೆ ಎಂದು ಹೇಳಿರುವುದರಿಂದ, ಗೌರವಾನ್ವಿತರಿಗೆ ತನಿಖೆ ನಡೆಸಿ ವರದಿಯನ್ನು ಸಲ್ಲಿಸಬೇಕೆಂದು ಕೋರಿ ಸಲ್ಲಿಕೆಯಾದ ಮನವಿ ಅನ್ವಯ ಆದೇಶದನ್ವಯ ದೂರನ್ನು ದಾಖಲಿಸಿಕೊಳ್ಳಲಾಯಿತು. ತನಿಖೆಯನ್ನು ಪೋಲೀಸ್‌ರವರು ಮಾಡಿರುತ್ತಾರೆ. ಅಂಬಿಕಾಪತಿಯವರು. ಅಂಬಿಕಾಪತಿಯವರು ಯಾವ ದಿನಾಂದಂದು ಸಂದರ್ಶನ ಕೊಟ್ಟಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಿರುವುದಿಲ್ಲ. ಆದರೆ 5 ವರ್ಷಗಳ ಹಿಂದಿನ ಅವಧಿಯಲ್ಲಿಯೂ ಸಹ ಅಂಬಿಕಾಪತಿಯವರು ಬಿಬಿಎಂಪಿಯ ಪೂರ್ವವಲಯದಲ್ಲಾಗಲೀ, ಅಥವಾ ಇತರ ವಲಯಗಳಲ್ಲಿ ಯಾವುದೇ ಕಾಮಗಾರಿಯ ಗುತ್ತಿಗೆಯನ್ನು ಪಡೆದಿರುವುದಿಲ್ಲ. ಆದ್ದರಿಂದ ಅವರು ಮಾಡಿರುವ ಆರೋಪಗಳು ಸುಳ್ಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಮನೆಯಲ್ಲಿ ಪತ್ತೆಯಾದ ಹಣದ ಮೂಲ ತಿಳಿಸಿದ ಗುತ್ತಿಗೆದಾರ ಅಂಬಿಕಾಪತಿ ಪುತ್ರ ಪ್ರದೀಪ್: ಇಲ್ಲಿದೆ ವಿವರ

ಹೀಗಾಗಿ ಪೋಲೀಸ್ ತನಿಖಾ ವರದಿಯನ್ನು ಒಪ್ಪಿಕೊಂಡು ಈ ದೂರಿನಲ್ಲಿ ತನಿಖೆ ಕೈಗೊಳ್ಳಬೇಕಾದ ಅಂಶ ಯಾವುದೂ ಇರುವುದಿಲ್ಲ. ಈ ದೂರನ್ನು ಮುಕ್ತಾಯಗೊಳಿಸಬಹುದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ