ವಿಜಯಲಕ್ಷ್ಮೀ ಮನೆ ತುಂಬೆಲ್ಲಾ ಲಕ್ಷ್ಮೀ ಕೃಪಾಕಟಾಕ್ಷ! 53 ಆಸ್ತಿ, 2 ಕೋಟಿ ರೂ. ಮೌಲ್ಯದ ಲೇಔಟ್, ಇನ್ನೂ ಏನೇನು ಸಿಕ್ತು ಗೊತ್ತಾ?

ಒಳ್ಳೆ ಉದ್ಯೋಗವಿದ್ದು, ಕೈ ತುಂಬಾ ಸಂಬಳವಿದ್​ದರೂ ಭ್ರಷ್ಟತನಕ್ಕೆ ಕೈಜೋಡಿಸಿದ ಭ್ರಷ್ಟ ಕುಳಗಳಿಗೆ ಚುಮುಚುಮು ಚಳಿಯಲ್ಲೂ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಮಂಗಳವಾರ ಕರ್ನಾಟಕದ ವಿವಿಧ ಕಡೆ ನಡೆದ ಲೋಕಾಯುಕ್ತ ದಾಳಿ ವೇಳೆ ಅನೇಕ ಅಧಿಕಾರಿಗಳ ಮನೆಯಲ್ಲಿ ಸಂಪತ್ತಿನ ಖಜಾನೆಗಳೇ ಪತ್ತೆಯಾಗಿವೆ! ಇನ್ನು ಕೆಲವು ಭ್ರಷ್ಟರು ಕುಬೇರನನ್ನೂ ಮೀರಿಸುವ ಆಸ್ತಿ ಮಾಡಿಕೊಂಡಿರುವುದು ಪತ್ತೆಯಾಗಿದೆ.

ವಿಜಯಲಕ್ಷ್ಮೀ ಮನೆ ತುಂಬೆಲ್ಲಾ ಲಕ್ಷ್ಮೀ ಕೃಪಾಕಟಾಕ್ಷ! 53 ಆಸ್ತಿ, 2 ಕೋಟಿ ರೂ. ಮೌಲ್ಯದ ಲೇಔಟ್, ಇನ್ನೂ ಏನೇನು ಸಿಕ್ತು ಗೊತ್ತಾ?
ವಿಜಯಪುರ ಕೃಷಿ ಇಲಾಖೆ ಅಧಿಕಾರಿ ಮಲ್ಲಪ್ಪ ಯರಝರಿ ನಿವಾಸದಲ್ಲಿ ಸಿಕ್ಕ ಸಂಪತ್ತು
Edited By:

Updated on: Dec 24, 2025 | 8:08 AM

ಬೆಂಗಳೂರು, ಡಿಸೆಂಬರ್ 24: ಕಣ್ಣು ಕುಕ್ಕುವಂಥ ಬಂಗಲೆ, ಎಕರೆಗಟ್ಟಲೆ ಫಾರ್ಮ್​ ಹೌಸ್, ಮನೆ ಮನೆಯಲ್ಲೂ ಶೋಧ, ಬೈಕ್​, ಕಾರಲ್ಲೂ ತಲಾಶ್, ಕಚೇರಿಗಳಲ್ಲೂ ಪರಿಶೀಲನೆ. ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು (Lokayukta Raid) ಮಂಗಳವಾರ ಬೆಳ್ಳಂಬೆಳಗ್ಗೆಯಿಂದಲೇ ಶಾಕ್ ನೀಡಿದ್ದಾರೆ. ನಸುಕಿನಲ್ಲಿ ದಾಳಿ ನಡೆಸಿ ಶುರುವಾದ ಪರಿಶೀಲನೆ ತಡರಾತ್ರಿ ವರೆಗೂ ನಡೆದಿದೆ. ಈ ವೇಳೆ, ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಹಲವು ಅಧಿಕಾರಿಗಳ ಬಳಿ ಸಂಪತ್ತಿನ ಖಜಾನೆಗಳೇ ಪತ್ತೆಯಾಗಿವೆ.

ರಾಯಚೂರು ಜಿಲ್ಲೆ ಸಿಂಧನೂರು ಸಬ್ ಡಿವಿಷನ್ ಎಇಇ ವಿಜಯಲಕ್ಷ್ಮೀ ಬಳಿ ಒಂದಲ್ಲ, ಎರಡಲ್ಲ ಸುಮಾರು 53 ಕಡೆ ಆಸ್ತಿ ಇರುವುದು ಪತ್ತೆಯಾಗಿದೆ. ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ರಾಯಚೂರಿನ 5 ಕಡೆ ದಾಳಿ ನಡೆಸಿದ್ದಾರೆ. ವಿಜಯಲಕ್ಷ್ಮೀ ಸಂಬಂಧಿಕರ ಮನೆ, ತಂಗಿ ಮನೆ, ಯಾದಗಿರಿಯಲ್ಲಿ ಖಾಸಗಿ ಲೇಔಟ್, ಫಾರ್ಮ್​ ಹೌಸ್​ಗಳ ದಾಖಲೆ ಪರಿಶೀಲಿಸಿದ್ದಾರೆ. ದಾಳಿ ವೇಳೆ ವಿಜಯಲಕ್ಷ್ಮೀ ಮನೆಯಲ್ಲಿರಲಿಲ್ಲ. ಸೊಸೆಗೆ ಡೆಲಿವರಿ ಅಂತಾ ಬೇರಡೆ ತೆರಳಿದ್ದರು. ಫೋನ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಕೂಡಲೇ ಬರುವಂತೆ ಸೂಚಿಸಿದ್ದರು. ಯಾದಗಿರಿಯಲ್ಲಿ 2 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಲೇಔಟ್, 290 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳು ಪತ್ತೆಯಾಗಿವೆ.

ಬಾಗಲಕೋಟೆ ಜಿ.ಪಂ. ಯೋಜನಾ ನಿರ್ದೇಶಕ ಎಸ್.ಎಂ.ಕಾಂಬಳೆ‌ ಮನೆ ಮತ್ತು ಗದಗ ಜಿಲ್ಲೆ ನರಗುಂದದ ಮನೆ ಮೇಲೂ ದಾಳಿ ಮಾಡಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದ್ದಾರೆ. ದಾಳಿ ವೇಳೆ ಅಂದಾಜು 1 ಕೋಟಿ ರೂಪಾಯಿಗೂ ಹೆಚ್ಚಿನ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ. 278 ಗ್ರಾಂ ಬಂಗಾರದ ಆಭರಣ, 494 ಗ್ರಾಂ ಬೆಳ್ಳಿಯ ಆಭರಣ, 1 ದ್ವಿಚಕ್ರ ವಾಹನ, 15 ಖಾಲಿ ನಿವೇಶನಗಳು ಹಾಗೂ 3 ಮನೆಗಳು ಇರುವುದು ಪತ್ತೆಯಾಗಿದೆ.

ವಿಜಯಪುರ ಕೃಷಿ ಇಲಾಖೆ ಅಧಿಕಾರಿ ಮಲ್ಲಪ್ಪ ಯರಝರಿ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನವರಸಪೂರ ಬಡಾವಣೆ, ತೋಟದ ಮನೆ, ಮಾವನ ಮನೆ, ಕಚೇರಿ, ಕಾರು, ಬೈಕ್​ಗಳ ದಾಖಲಾತಿ ಪರಿಶೀಲಿಸಿದ್ದಾರೆ. ಈ ವೇಳೆ ಆದಾಯಕ್ಕಿಂತ ಹೆಚ್ಚಿನ 2.50 ಕೋಟಿ ರೂ. ಆಸ್ತಿ ಗಳಿಕೆ ಮಾಡಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ, ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಕೋಲ್ ಸಿರ್ಸಿ ಗ್ರೂಪ್ ಗ್ರಾಮ ಸೇವಾ ಸಹಕಾರಿ ಸಂಘ ನಿಯಮಿತದ ಸಿಇಒ ಮಾರುತಿ ಯಶವಂತ್ ಮಾಲ್ವಿ ಕಚೇರಿ ಮತ್ತು ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಉಡುಪಿ, ಮಂಗಳೂರು, ಕಾರವಾರ ಲೋಕಾಯುಕ್ತ ಅಧಿಕಾರಿಗಳು ಏಕ ಕಾಲದಲ್ಲಿ ರೇಡ್ ಮಾಡಿ ಪರಿಶೀಲಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:31 am, Wed, 24 December 25