AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೆ ಬ್ರೆಡ್​ನಲ್ಲಿ ಬರುತ್ತಿತ್ತು ಡ್ರಗ್ಸ್! ನೈಜಿರಿಯಾ ಮಹಿಳೆಯ ಬಂಧನ

ಬೆಂಗಳೂರಿನಲ್ಲಿ ಡ್ರಗ್ ಮಾರಾಟ ಮಾಡುವವರು ದಿನಕ್ಕೊಂದು ದಾರಿ ಹುಡುಕುತ್ತಿದ್ದಾರೆ. ಟೀ ಪೌಡರ್ ಪಾಕೆಟ್, ಚಾಕೊಲೇಟ್​ಗಳನ್ನು ಡ್ರಗ್ಸ್ ಪೂರೈಕೆ ಮಾಡುತ್ತಿದ್ದುದು ಈ ಹಿಂದೆ ಬಯಲಾಗಿತ್ತು. ಇದೀಗ ಬ್ರೆಡ್​ನಲ್ಲೂ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಖತರ್ನಾಕ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಇಬ್ಬರು ಕಿಲಾಡಿ ಕಳ್ಳರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬೆಂಗಳೂರಿಗೆ ಬ್ರೆಡ್​ನಲ್ಲಿ ಬರುತ್ತಿತ್ತು ಡ್ರಗ್ಸ್! ನೈಜಿರಿಯಾ ಮಹಿಳೆಯ ಬಂಧನ
ಬ್ರೆಡ್​ನಲ್ಲಿ ಡ್ರಗ್ಸ್, ಒಳಚಿತ್ರದಲ್ಲಿ ಆರೋಪಿ ಒಲಾಜಿಡೆ ಎಸ್ತಾರ್
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Dec 24, 2025 | 7:57 AM

Share

ಬೆಂಗಳೂರು, ಡಿಸೆಂಬರ್ 24: ಬೆಂಗಳೂರು (Bangalore) ನಗರದಲ್ಲಿ ಮಾದಕ ವಸ್ತು ಸಾಗಣೆ ಹಾಗೂ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಒಂದೇ ದಿನ ಮೂರು ವಿಭಿನ್ನ ಪ್ರಕರಣಗಳನ್ನು ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿ ಅಪಾರ ಪ್ರಮಾಣದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಪ್ರಕರಣವೊಂದರಲ್ಲಿ, ತಿನ್ನುವ ಬ್ರೆಡ್‌ನೊಳಗೆ ಕೊಕೇನ್ ಮರೆಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ನೈಜೀರಿಯನ್ ಮೂಲದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಒಲಾಜಿಡೆ ಎಸ್ತಾರ್, ಬ್ರೆಡ್ ಪೀಸ್‌ಗಳನ್ನು ಕಟ್ ಮಾಡಿ ಅದರೊಳಗೆ ಕೊಕೇನ್ ಇಟ್ಟು ಮುಂಬೈಯಿಂದ ಬೆಂಗಳೂರಿಗೆ ಖಾಸಗಿ ಬಸ್ ಮೂಲಕ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದಳು. ಆ ಸಂದರ್ಭದಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಕಾರ್ಯಾಚರಣೆ ವೇಳೆ ಸುಮಾರು 65 ಲಕ್ಷ ರೂ. ಮೌಲ್ಯದ 120 ಗ್ರಾಂ ಕೊಕೇನ್ ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣದಲ್ಲಿ, ಮಾದಕ ವಸ್ತುಗಳನ್ನು ಆಹಾರ ಪದಾರ್ಥಗಳ ಮೂಲಕ ಸಾಗಿಸುವ ಹೊಸ ತಂತ್ರ ಬಳಕೆಯಾಗಿರುವುದು ಪೊಲೀಸರಿಗೂ ಅಚ್ಚರಿ ಮೂಡಿಸಿದೆ.

ವಾರದ ದಿನಗಳಲ್ಲಿ ಪ್ರೊಫೆಸರ್, ವಾರಾಂತ್ಯದಲ್ಲಿ ಕಳ್ಳಿ!

ಇನ್ನೊಂದು ಪ್ರಕರಣದಲ್ಲಿ, ವಾರದ ದಿನಗಳಲ್ಲಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ರೇವತಿ ಎಂಬ ಮಹಿಳೆಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ರೇವತಿ ವಾರಾಂತ್ಯದಲ್ಲಿ ಮದುವೆ ನಡೆಯುವ ಕಲ್ಯಾಣಮಂಟಪಗಳಿಗೆ ಸಂಬಂಧಿಕಳಂತೆ ಪ್ರವೇಶಿಸಿ, ಅನುಮಾನ ಬಾರದಂತೆ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದಳು. ಕಳೆದ ನವೆಂಬರ್ 25ರಂದು ಬಸವನಗುಡಿಯ ದ್ವಾರಕನಾಥ್ ಕಲ್ಯಾಣಮಂಟಪದಲ್ಲಿ ನಡೆದ ಕಳ್ಳತನದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಕೆ.ಆರ್.ಪುರಂನಲ್ಲಿ ವಾಸವಾಗಿದ್ದ ರೇವತಿಯನ್ನು ಬಂಧಿಸಿ, 32 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಇರುಳುಗಣ್ಣೆಂದು ಹಗಲಲ್ಲೇ ಕಳ್ಳತನ ಮಾಡುತ್ತಿದ್ದವ ಅರೆಸ್ಟ್

ಇನ್ನೊಂದೆಡೆ, ‘ಇರುಳು ಕುರುಡು’ ಸಮಸ್ಯೆ ಎಂದು ಹೇಳಿಕೊಂಡು ಹಗಲಲ್ಲೇ ಮನೆ ಕಳ್ಳತನ ಮಾಡುತ್ತಿದ್ದ ಮೊಹಮ್ಮದ್ ಖಾನ್ ಎಂಬಾತನನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಖಾನ್, ಇತ್ತೀಚೆಗೆ ಕಿರುತೆರೆ ನಟ ಪ್ರವೀಣ್ ಅವರ ಮನೆಯಲ್ಲಿ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ. ತನಿಖೆ ವೇಳೆ ಖಾನ್ ವಿರುದ್ಧ ಏಳು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಬಂಧಿತನಿಂದ 65.28 ಲಕ್ಷ ರೂ. ಮೌಲ್ಯದ 470 ಗ್ರಾಂ ಚಿನ್ನಾಭರಣ, 1.5 ಕೆಜಿ ಬೆಳ್ಳಿ ಹಾಗೂ 4.60 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಇರುಳು ಕುರುಡು ಸಮಸ್ಯೆ ಎಂದು ಹಗಲಿನಲ್ಲೇ ಕಿರುತೆರೆ ನಟನ ಮನೆಗೆ ಕನ್ನ ಹಾಕಿದ ಅಂತಾರಾಜ್ಯ ಕಳ್ಳ!

ಈ ಅಪರಾಧ ಪ್ರಕರಣಗಳ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದು, ನಗರದಲ್ಲಿ ಅಪರಾಧ ನಿಯಂತ್ರಣಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ