ಅಪೆಕ್ಸ್ ಬ್ಯಾಂಕ್ ಜಟಾಪಟಿ: ರಾಜಣ್ಣ ಭೇಟಿ ಮಾಡಿದ್ದ ಡಿಕೆ ಶಿವಕುಮಾರ್ಗೆ ಚೆಕ್ಮೇಟ್ ಕೊಟ್ಟ ಸಿದ್ದರಾಮಯ್ಯ!
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ. ತಮ್ಮ ಹೆಚ್ಚುವರಿ ಕಾರ್ಯದರ್ಶಿ ಜಿಯಾವುಲ್ಲಾರನ್ನೇ ಅಪೆಕ್ಸ್ ಬ್ಯಾಂಕ್ ಆಡಳಿತಾಧಿಕಾರಿಯನ್ನಾಗಿ ಸಿದ್ದರಾಮಯ್ಯ ನೇಮಕ ಮಾಡಿದ್ದಾರೆ. ಮತ್ತೊಂದೆಡೆ, ಡಿಕೆ ಶಿವಕುಮಾರ್ ಸಂಬಂಧಿಯಾಗಿರುವ ಎಂಎಲ್ಸಿ ರವಿ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇದರಿದ ಆಯ್ಕೆ ಪ್ರಕ್ರಿಯೆ ಮತ್ತಷ್ಟು ಜಟಿಲವಾಗುವ ಸಾಧ್ಯತೆ ಇದೆ.

ಬೆಂಗಳೂರು, ಡಿಸೆಂಬರ್ 24: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹುದ್ದೆ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಕೆಎನ್ ರಾಜಣ್ಣ (KN Rajanna) ಹಲವು ಬಾರಿ ಚರ್ಚೆ ನಡೆಸಿದ್ದು, ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಇದೀಗ ಅಪೆಕ್ಸ್ ಬ್ಯಾಂಕ್ಗೆ ಆಡಳಿತಾಧಿಕಾರಿ (ಎಒ) ನೇಮಕ ಮಾಡಿದ್ದಾರೆ. ಆ ಮೂಲಕ ಡಿಕೆ ಶಿವಕುಮಾರ್ಗೆ ಕೌಂಟರ್ ಕೊಟ್ಟಿದ್ದಾರೆ. ಸಹಕಾರ ಇಲಾಖೆಯ ಜವಾಬ್ದಾರಿ ಸಿದ್ದರಾಮಯ್ಯ ಬಳಿಯೇ ಇದ್ದು, ಕಾರ್ಯಚಟುವಟಿಕೆಯನ್ನು ಸಿಎಂ ಹೆಚ್ಚುವರಿ ಕಾರ್ಯದರ್ಶಿ ಜಿಯಾವುಲ್ಲಾಗೆ ವಹಿಸಲಾಗಿದೆ.
ಮಂಗಳವಾರ ಸಂಜೆ ಅಪೆಕ್ಸ್ ಬ್ಯಾಂಕ್ ಆಡಳಿತಾಧಿಕಾರಿಯಾಗಿ ಜಿಯಾವುಲ್ಲ ಅಧಿಕಾರ ಸ್ವೀಕರಿಸಿದ್ದಾರೆ. ಇದರೊಂದಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹುದ್ದೆಯ ಆಯ್ಕೆ ಮತ್ತಷ್ಟು ಜಟಿಲವಾದಂತಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಸಂಬಂಧಿಯಾಗಿರುವ ಎಂಎಲ್ಸಿ ರವಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಡಿಕೆ ಶಿವಕುಮಾರ್ಗೆ ರಾಜಣ್ಣ ಟಾಂಗ್
ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದು ನಾನೇ ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಸಿಎಂ ನಿವಾಸ ಕಾವೇರಿಯಲ್ಲಿ ಪ್ರತಿಕ್ರಿಯಿಸಿದ ರಾಜಣ್ಣ, ಎಸ್ಎಂ ಕೃಷ್ಟ ಅವರ ಕಾಲದಲ್ಲಿ ನಾನು ಅಧ್ಯಕ್ಷ ಆಗಿದ್ದು. ಡಿಕೆ ಶಿವಕುಮಾರ್ ಅವರದ್ದು ಸಹಕಾರ ಇರಬಹುದು, ಇಲ್ಲ ಅಂತ ಏನಿಲ್ಲ. ಸಹಾಯ ಮಾಡಿದರೆ ನನಪಿಸಿಕೊಳ್ಳುವುದು ನನ್ನ ಗುಣ. ಅಂದು ಡಿಕೆಶಿ ಸಹಕಾರ ಸಚಿವರಾಗಿದ್ದರು, ಆಗ ಸಹಾಯ ಆಗಿದೆ. ಅಂದು ನಮಗೆ ಹೆಚ್ಚು ಸಹಾಯ ಮಾಡಿದ್ದು ಜಾಲಪ್ಪ, ಬಸವರಾಜು, ಪರಮ ಹಣದ. ಅವರು ಚುನಾವಣೆ ದಿನ ಎಸ್ಎಂ ಕೃಷ್ಣ ಮನವೊಲಿಸಿ ನನ್ನ ಅಧ್ಯಕ್ಷನನ್ನಾಗಿ ಮಾಡಿದರು ಎಂದು ಹೇಳಿದ್ದಾರೆ.
ಹಿಂದೆ ಸಿದ್ದರಾಮಯ್ಯ ಕೂಡ ನನ್ನನ್ನು ಅಧ್ಯಕ್ಷನಾಗಿ ಮಾಡಿದ್ದಾರೆ. ಅಲ್ಲಿ ಇರುವ ನಿರ್ದೇಶಕರು ಸೇರಿ ಆಯ್ಕೆ ಮಾಡಬೇಕಾಗಿರುವ ಹುದ್ದೆ ಅದು, ಸರ್ಕಾರ ಅಲ್ಲ. 21 ಜನ ನಮ್ಮನ್ನು ಆಯ್ಕೆ ಮಾಡಬೇಕು, ಸಲಹೆ ಮೇರೆಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ರಾಜಣ್ಣ ಟಾಂಗ್ ಕೊಟ್ಟರು.
ಇದನ್ನೂ ಓದಿ: ಸಿದ್ದರಾಮಯ್ಯ ಅತ್ಯಾಪ್ತನಿಗೆ ಡಿಕೆ ಶಿವಕುಮಾರ್ ಗಾಳ: ಮೇಲಿಂದ ಮೇಲೆ ಭೇಟಿಯ ರಹಸ್ಯ ಬಯಲು
ನಾಯಕತ್ವ ಬಿಕ್ಕಟ್ಟಿನ ಮಧ್ಯೆ ಹಳೇ ವಿಚಾರವನ್ನು ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಹಳೇ ವಿಚಾರ ದೇಶಕ್ಕೇ ಗೊತ್ತಿದೆ, ಯಾರೆಲ್ಲಾ ನೆರವಾಗಿದ್ದಾರೆ ಎಂಬುದನ್ನು ನಾನು ಮರೆಯಲ್ಲ ಎಂದರು.
ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ದೆಹಲಿಗೆ ಹೋದಾಗ ಹೈಕಮಾಂಡ್ ನಾಯಕರ ಭೇಟಿ ಸಹಜ. ನಾನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಬೇಕೆಂದು ಆಸೆ ಪಟ್ಟಿಲ್ಲ. ಅದರ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಜೊತೆ ಮಾತನಾಡಿಲ್ಲ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 am, Wed, 24 December 25




