ಎಮಿಷನ್ ಸರ್ಟಿಫಿಕೇಟ್ ಇಲ್ಲ, ಪರ್ಮಿಟ್ ಇಲ್ಲ! ಪರಿವಾಹನ್ ದೋಷದಿಂದ ವಾಹನ ಮಾಲೀಕರ ಪರದಾಟ
ಕೇಂದ್ರದ ವಾಹನ್-4 ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಕಳೆದ ಒಂದು ತಿಂಗಳಿಂದ ಕರ್ನಾಟಕದಲ್ಲಿ ವಾಹನಗಳ ಎಮಿಷನ್ ಸರ್ಟಿಫಿಕೇಟ್‌ಗಳು ಅಪ್ಡೇಟ್ ಆಗುತ್ತಿಲ್ಲ. ಇದರಿಂದ ಖಾಸಗಿ ಮತ್ತು ವಾಣಿಜ್ಯ ವಾಹನ ಮಾಲೀಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬಾಡಿಗೆ ವಾಹನಗಳು ನಿಂತಲ್ಲೇ ನಿಂತಿದ್ದು, ಎಮಿಷನ್ ಸರ್ಟಿಫಿಕೇಟ್ ಇಲ್ಲದೆ ಸ್ಪೆಷಲ್ ಪರ್ಮಿಟ್‌ಗಳು ಸಿಗುತ್ತಿಲ್ಲ ಹಾಗೂ ಇನ್ಶುರೆನ್ಸ್ ಕ್ಲೈಮ್ ಕುರಿತು ಆತಂಕ ಎದುರಾಗಿದೆ.

ಬೆಂಗಳೂರು, ಡಿಸೆಂಬರ್ 24: ಕೇಂದ್ರ ಸರ್ಕಾರದ ವಾಹನ್–4 (Parivahan Portal) ಪೋರ್ಟಲ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ರಾಜ್ಯದ ವಾಹನಗಳ ಎಮಿಷನ್ ಸರ್ಟಿಫಿಕೇಟ್‌ಗಳು ಅಪ್ಡೇಟ್ ಆಗುತ್ತಿಲ್ಲ. ಈ ಸಮಸ್ಯೆಯಿಂದ ವೈಟ್ ಬೋರ್ಡ್ (ಖಾಸಗಿ) ಹಾಗೂ ಯೆಲ್ಲೋ ಬೋರ್ಡ್ (ವಾಣಿಜ್ಯ) ವಾಹನ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಎಮಿಷನ್ ಸರ್ಟಿಫಿಕೇಟ್ ಇಲ್ಲದೆ ಬಾಡಿಗೆಗೆ ಹೋಗುವವರ ಪರದಾಟ
ವಾಹನ್–4 ನಲ್ಲಿ ಎಮಿಷನ್ ಸರ್ಟಿಫಿಕೇಟ್ ಅಪ್ಡೇಟ್ ಆಗದ ಕಾರಣ ಸಾವಿರಾರು ಟೂರ್ಸ್ ಅಂಡ್ ಟ್ರಾವೆಲ್ಸ್ ವಾಹನಗಳು ನಿಂತಲ್ಲೇ ನಿಂತಿವೆ. ಶಬರಿಮಲೆ ಯಾತ್ರೆ, ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಬಾಡಿಗೆ ಹೋಗಲು ಸಾಧ್ಯವಾಗದೆ ವಾಹನ ಮಾಲೀಕರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಎಮಿಷನ್ ಸರ್ಟಿಫಿಕೇಟ್ ಇಲ್ಲದೆ ಹೊರ ರಾಜ್ಯಗಳಿಗೆ ತೆರಳಲು ಅಗತ್ಯವಿರುವ ಸ್ಪೆಷಲ್ ಪರ್ಮಿಟ್ ಕೂಡ ದೊರೆಯುತ್ತಿಲ್ಲ. ಅಲ್ಲದೆ, ಅಪಘಾತ ಸಂಭವಿಸಿದರೆ ಇನ್ಶುರೆನ್ಸ್ ಕ್ಲೈಮ್ ಕೂಡ ಆಗುವುದಿಲ್ಲ ಎಂಬ ಆತಂಕ ವ್ಯಕ್ತವಾಗಿದೆ.
ನಮ್ಮ ರಾಜ್ಯದಲ್ಲಿ ಮಾತ್ರ ಈ ಸಮಸ್ಯೆ?
ಅಕ್ಕಪಕ್ಕದ ರಾಜ್ಯಗಳಲ್ಲಿ ಎಮಿಷನ್ ಸರ್ಟಿಫಿಕೇಟ್ ಅಪ್ಡೇಟ್ ಆಗುತ್ತಿದ್ದರೂ, ನಮ್ಮ ರಾಜ್ಯದಲ್ಲಿ ಮಾತ್ರ ಈ ಸಮಸ್ಯೆ ಮುಂದುವರಿದಿದೆ. ಈ ಕುರಿತು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ ಅಸೋಸಿಯೇಷನ್ ಸಾರಿಗೆ ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ. ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ವಾಹನ ಮಾಲೀಕರ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



