ಬೆಂಗಳೂರಿನಲ್ಲಿ ಮತ್ತೆ ಶುರುವಾಯಿತು ವ್ಹೀಲಿಂಗ್ ಹುಚ್ಚಾಟ: ಆಟೋ ಚಾಲಕನನ್ನು ಬಂಧಿಸಿದ ಪೊಲೀಸರು
ಬೆಂಗಳೂರಿನಲ್ಲಿ ವ್ಹೀಲಿಂಗ್ ಸ್ಟಂಟ್ ಹುಚ್ಚು ಮತ್ತೆ ಶುರುವಾಗಿದೆ. ರಸ್ತೆಯಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುತ್ತಿದ್ದ ಆಟೋ ಚಾಲಕನೊಬ್ಬ ತನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾದ ಈ ಘಟನೆ ನಂತರ, ಪೊಲೀಸರು ಅವನನ್ನು ಬಂಧಿಸಿ, ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಾಹನವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು, ಡಿ.24: ಬೆಂಗಳೂರಿನಲ್ಲಿ ವ್ಹೀಲಿಂಗ್ (wheelie stunt) ಹುಚ್ಚು ಕಡಿಮೆ ಆಗಿತ್ತು. ಇದೀಗ ಮತ್ತೆ ಶುರುವಾಗಿದೆ. ಹದಿಯರೆದ ಹುಡುಗರು ರಸ್ತೆಯಲ್ಲಿ ವ್ಹೀಲಿಂಗ್ ಮಾಡಿಕೊಂಡು ಇತರ ಸವಾರರಿಗೆ ತೊಂದರೆ ಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕವಾಗಿ ಕೂಡ ಆಕ್ರೋಶಗಳು ವ್ಯಕ್ತವಾಗಿತ್ತು. ಪೊಲೀಸರು ಕೂಡ ಕಟ್ಟನಿಟ್ಟಿನ ಕ್ರಮವನ್ನು ತೆಗೆದುಕೊಂಡು ವ್ಹೀಲಿಂಗ್ ಮಾಡುವವರಿಗೆ ಸರಿಯಾದ ಶಿಕ್ಷೆ ನೀಡುತ್ತಿದ್ದರು. ಸ್ವಲ್ಪ ದಿನಗಳಿಂದ ಈ ವ್ಹೀಲಿಂಗ್ ಹುಚ್ಚು ಕಡಿಮೆ ಆಗಿತ್ತು. ಇದೀಗ ಮತ್ತೆ ಶುರುವಾಗಿದೆ. 28 ವರ್ಷದ ಆಟೋ ರಿಕ್ಷಾ ಚಾಲಕ ವ್ಹೀಲಿಂಗ್ ಸ್ಟಂಟ್ ಮಾಡಲು ಹೋಗಿ ಪೊಲೀಸರ ಕೈಯಲ್ಲಿ ತಗ್ಲಾಕೊಂಡಿದ್ದಾನೆ. ತಾನು ಮಾಡಿದ ವ್ಹೀಲಿಂಗ್ ಸ್ಟಂಟ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿದ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಕೆಆರ್ ಪುರಂನ ಪ್ಲೇಗ್ ಮಾರಮ್ಮ ಬೀದಿಯ ನಿವಾಸಿ ಉದಯ್ ವಿಕ್ರಮ್ ಎ ಎಂಬ ಆರೋಪಿಯ ವಿರುದ್ಧ ಸೋಮವಾರ ಕಾನೂನಿನ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಸಾರ್ವಜನಿಕ ಮಾರ್ಗದಲ್ಲಿ ಅತಿವೇಗ ಅಥವಾ ನಿರ್ಲಕ್ಷ್ಯದ ಚಾಲನೆ/ಸವಾರಿ) ಸೆಕ್ಷನ್ 281, ಜೊತೆಗೆ ಭಾರತೀಯ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184 (ಅಪಾಯಕಾರಿ ಚಾಲನೆ) ಮತ್ತು 189 (ರೇಸಿಂಗ್/ವೇಗದ ಪ್ರಯೋಗಗಳು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನೂ ಓದಿ: ಎಮಿಷನ್ ಸರ್ಟಿಫಿಕೇಟ್ ಇಲ್ಲ, ಪರ್ಮಿಟ್ ಇಲ್ಲ! ಪರಿವಾಹನ್ ದೋಷದಿಂದ ವಾಹನ ಮಾಲೀಕರ ಪರದಾಟ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಒಂದು ಸ್ಟಂಟ್ ಅನೇಕ ಅಮೂಲ್ಯ ಜೀವಗಳನ್ನು ಅಂತ್ಯಗೊಳಿಸಬಹುದು. ಆಟೋ ವೀಲಿಂಗ್ಗೆ ಮಾಡದಿರಿ. ಸುರಕ್ಷತೆಯನ್ನು ಆಯ್ಕೆ ಮಾಡಿ. ರಸ್ತೆಗಳನ್ನು ಸುರಕ್ಷಿತವಾಗಿರಿಸಲು ಬೆಂಗಳೂರು ನಗರ ಪೊಲೀಸರು ಆಟೋ ವೀಲಿಂಗ್ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುತ್ತಿದ್ದಾರೆ.
One stunt can end many lives. Say NO to auto wheeling. Choose safety.… pic.twitter.com/FdRu8wHAmp
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) December 22, 2025
ಕಳೆದ ತಿಂಗಳು ಈತ ಸ್ನೇಹಿತನ ಸಹಾಯದಿಂದ ವ್ಹೀಲಿಂಗ್ ಸ್ಟಂಟ್ ಮಾಡುವುದನ್ನು ವಿಡಿಯೋ ಮಾಡಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ, ಈ ವಿಡಿಯೋವನ್ನು ಹಂಚಿಕೊಂಡದ್ದೇ ಇದೀಗ ಆತನಿಗೆ ಸಂಕಷ್ಟಕ್ಕೆ ಕಾರಣವಾಗಿದೆ. ಇದೀಗ ಆಟೋವನ್ನು ಕೆಆರ್ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿದರೆ ಮಾತ್ರ ಅದನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನೊಂದು ಇಂತಹದೇ ಒಂದು ಘಟನೆಯೊಂದು ನಡೆದಿದೆ. ಸ್ಕೂಟರ್‌ನಲ್ಲಿ ಇಬ್ಬರು ವ್ಯಕ್ತಿಗಳು ಅಪಾಯಕಾರಿ ಸಾಹಸ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಕ್ಲಿಪ್ ಬೆಂಗಳೂರಿನದ್ದಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




