Maha Sivaratri 2021: ಕರ್ನಾಟಕ ರಾಜ್ಯದ ಪ್ರಸಿದ್ಧ ಶಿವನ ದೇವಾಲಯಗಳು ಇಲ್ಲಿವೆ

|

Updated on: Mar 10, 2021 | 2:16 PM

Maha Shivaratri Festival 2021: ಈ ಬಾರಿಯ ಶಿವರಾತ್ರಿ ಹಬ್ಬವನ್ನು ಎಲ್ಲಿ ಆಚರಿಸುವುದು, ಯಾವ ದೇವಾಲಕ್ಕೆ ಭೇಟಿ ನೀಡುವುದು ಎಂದು ಯೋಚಿಸುತ್ತಿದ್ದೀರಾ ಎಂದಾದರೆ, ಕರ್ನಾಟಕ ರಾಜ್ಯದ ಪ್ರಸಿದ್ಧ ಶಿವನ ದೇವಾಲಯಗಳು ಇಲ್ಲಿವೆ. ನೀವು ಒಮ್ಮೆಯಾದರೂ ಭೇಟಿ ನೀಡಲೇ ಬೇಕಾದ ಪ್ರಸಿದ್ಧ ದೇವಲಾಯಗಳು ಈ ಕೆಳಗಿನಂತಿದೆ.

Maha Sivaratri 2021: ಕರ್ನಾಟಕ ರಾಜ್ಯದ ಪ್ರಸಿದ್ಧ ಶಿವನ ದೇವಾಲಯಗಳು ಇಲ್ಲಿವೆ
ಧ್ಯಾನಸ್ಥನಾದ ಶಿವ (ಕೃಪೆ- ಫೇಸ್​ಬುಕ್)
Follow us on

ಈ ವರ್ಷ ಶಿವರಾತ್ರಿಯನ್ನು ನಾಳೆ(ಮಾರ್ಚ್​ 11) ಆಚರಿಸಲಾಗುತ್ತಿದೆ. ಶಿವನ ಭಕ್ತರು ಉಪವಾಸ ಕೈಗೊಳ್ಳುತ್ತಾರೆ. ಇನ್ನು ಕೆಲವರು ಶಿವನ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿ ಶಿವನಿಗೆ ನಮಸ್ಕರಿಸುತ್ತಾರೆ. ಆರಾಧನೆಯಲ್ಲಿ ತೊಡಗಿ ಆಶೀರ್ವಾದ ಪಡೆಯುತ್ತಾರೆ. ಶಿವನಿಗಿಷ್ಟದ ಬಿಲ್ವ ಪತ್ರೆ ಜೊತೆ ಪೂಜೆ ಕೈಗೊಳ್ಳುತ್ತಾರೆ. ಹಾಗಾದರೆ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿರುವ ಶಿವನ ದೇವಾಲಯಗಳು ಎಲ್ಲಿವೆ ಎಂಬುದನ್ನು ನೋಡೋಣ.

ಮಹಾಶಿವರಾತ್ರಿ ಪ್ರಯುಕ್ತ ಭಕ್ತರೆಲ್ಲ ಶಿವನ ಆರಾಧನೆಯಲ್ಲಿ ತೊಡಗಿಕೊಳ್ಳುತ್ತಾರೆ. ಬಿಲ್ವ ಪತ್ರೆ ಜೊತೆ ಶಿವನ ಧ್ಯಾನದಲ್ಲಿ ತೊಡಗಿಕೊಳ್ಳುತ್ತಾರೆ. ಇದಕ್ಕೆ ಪ್ರಶಾಂತವಾದ ವಾತಾವರಣ ಬೇಕು. ಜೊತೆಗೆ ಒಳ್ಳೆಯ ಸ್ಥಳವಿರಬೇಕು. ಶಿವನ ಎದುರಿಗೆ ಕೈ ಮುಗಿದು ಶಿವನಿಗೆ ಒಲಿಯಬೇಕು. ಇಷ್ಟಾರ್ಥಗಳನ್ನು ಬೇಡಿಕೊಳ್ಳಬೇಕು. ಹಾಗಾಗಿ ನಿಮಗೆ ಹತ್ತಿರದಲ್ಲಿರುವ ಶಿವನ ದೇವಸ್ಥಾನ ಪವಿತ್ರ ಸ್ಥದಲ್ಲಿ ಕುಳಿತು ಶಿವನ ಧ್ಯಾನ ಮಾಡಿ. ಏಕಾಂತದಲ್ಲಿ ಶಿವನ ಧ್ಯಾನದಲ್ಲಿ ಮೊರೆಹೋಗಿ. ಹೀಗಿದ್ದಾಗ ನಿಮಗೆ ಹತ್ತಿರವಾಗುವ ಪ್ರಸಿದ್ಧ ಶಿವನ ಸ್ಥಳಗಳ ಮಾಹಿತಿ ಇಲ್ಲಿದೆ.

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಾಲಯವನ್ನು ಶಾಸ್ತ್ರೀಯ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಕಾರವಾರ ಬೀಚ್​ ಪಕ್ಕದಲ್ಲಿ ಈ ದೇವಾಲಯವನ್ನು ನೋಡಬಹುದು. ಈ ದೇವಾಲಯವು ಕರ್ನಾಟಕದ ಏಳು ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಶಿವ ರಾತ್ರಿಯ ದಿನದಂದು ಭೇಟಿ ನೀಡಲು ಒಳ್ಳೆಯ ಸ್ಥಳವಿದು.

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ (ಕೃಪೆ- ವಿಕಿಪೀಡಿಯಾ)

ಮುರಡೇಶ್ವರ- ಭಟ್ಕಳ
ಮುರಡೇಶ್ವರ ದೇವಸ್ಥಾನವು ಕಂದುಕಾ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಹಾಗೂ ಶಿವನ ಮೂರ್ತಿ ಅರೇಬಿಯನ್ ಸಮುದ್ರದ ಮೂರು ಕಡೆಗಳಲ್ಲಿ ಸುತ್ತುವರೆದಿದೆ. ಈ ದೇವಾಲಯವು 20 ಅಂತಸ್ತಿನ ಗೋಪುರವನ್ನು ಹೊಂದಿದ್ದು, ವಿಶ್ವದ ಎರಡನೇ ಅತಿ ಎತ್ತರದ ಶಿವ ಪ್ರತಿಮೆಗೆ ಹೆಸರುವಾಸಿಯಾಗಿದೆ . ಭಟ್ಕಳ ತಾಲೂಕಿನಲ್ಲಿ ಕಂಡು ಬರುವ ಈ ಪ್ರಸಿದ್ಧ ಸ್ಥಳಕ್ಕೆ ಶಿವ ರಾತ್ರಿ ವಿಶೇಷೇದಂದು ಜನ ಸಾಗರವೇ ಹರಿದು ಬರುವುದುಂಟು. ಶಿವನ ಆರಾಧನೆಗೆಂದು, ವಿಶೇಷ ಪೂಜೆ ಸಲ್ಲಿಸುವ ನಿಟ್ಟಿನಲ್ಲಿ ಆಗಮಿಸುತ್ತಾರೆ. ಶಿವ ರಾತ್ರಿ ಅಂಗವಾಗಿ ಭೇಟಿ ನೀಡಲು ಉತ್ತಮ ಸ್ಥಳವಿದು.

ಮುರುಡೇಶ್ವರ ದೇವಸ್ಥಾನ (ಕೃಪೆ- ವಿಕಿಪೀಡಿಯಾ)

ಧರ್ಮಸ್ಥಳ ಮಂಜುನಾಧೇಶ್ವರ ದೇವಸ್ಥಾನ
ಧರ್ಮಸ್ಥಳ ಮಂಜುನಾಥ ದೇವಾಲಯವು ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದು. ಶಿವರಾತ್ರಿ ಪ್ರಯುಕ್ತ ಜನ ಸಾಗರವೇ ಹರಿದು ಬರುವ ಪ್ರಸಿದ್ಧ ಸ್ಥಳಗಳಲ್ಲಿ ಒಂದು ಮಂಜುನಾಥ ದೇವಾಲಯ. ಮಹಾ ಶಿವರಾತ್ರಿ ಪ್ರಯುಕ್ತ ಭೇಟಿ ನೀಡಲು ಸುಂದರ ತಾಣವೆಂದರೆ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯ.

ನಂಜನಗೂಡು- ಶ್ರೀಕಂಠೇಶ್ವರ ದೇವಸ್ಥಾನ
ನಂಜನಗೂಡಿನಲ್ಲಿರುವ ಶ್ರೀಕಂಠೇಶ್ವರ ದೇವಸ್ಥಾನವು ಪುರಾತನ ಹಿಂದೂ ದೇವಾಲಯವಾಗಿದ್ದು, ಕಪಿಲಾ ನದಿಯ ದಂಡೆಯಲ್ಲಿರುವ ನಂಜನಗೂಡು ಎಂಬ ಪಟ್ಟಣದಲ್ಲಿದೆ. ನಂಜನಗೂಡನ್ನು ದಕ್ಷಿಣ ಕಾಶಿ ಎಂದೂ ಕರೆಯುತ್ತಾರೆ. ಶಿವ ರಾತ್ರಿ ದಿನದಂದು ಶಿವನ ಆರಾಧನೆಗೆ ಒಳ್ಳೆಯ ಸ್ಥಳವಿದು.

ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ

ಕೋಲಾರ ಕೋಟಿಲಿಂಗೇಶ್ವರ ದೇವಸ್ಥಾನ
ಕೋಟಿಲಿಂಗೇಶ್ವರ ದೇವಸ್ಥಾನವು ವಿಶ್ವದ ಅತಿದೊಡ್ಡ ಲಿಂಗಗಳಲ್ಲಿ ಒಂದಾಗಿದೆ. ಇದು ಕೋಲಾರ ಜಿಲ್ಲೆಯ ಕಮ್ಮಸಂದ್ರ ಗ್ರಾಮದಲ್ಲಿದೆ. ಸ್ಥಳದಲ್ಲಿ 108 ಅಡಿ ಬೃಹದಾದ ಲಿಂಗ ಮತ್ತು 35 ಅಡಿ ಎತ್ತರದ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದ ಸ್ಥಳಗಳಲ್ಲಿ ಕೋಲಾರದ ಕೋಟಿಲಿಂಗೇಶ್ವರ ದೇವಾಲಯವೂ ಒಂದು. ಶಿವರಾತ್ರಿ ದಿನದಂದು ಭೇಟಿ ನೀಡಲು ಉತ್ತಮ ಸ್ಥಳಗಳಲ್ಲಿ ಒಂದು.

ಹಂಪಿಯ ಬದವಿಲಿಂಗ ದೇವಸ್ಥಾನ

ಹಂಪಿಯಲ್ಲಿರುವ ಬದವಿಲಿಂಗ ದೇವಸ್ಥಾನವು ಒಮ್ಮೆಯಾದರೂ ಭೇಟಿ ನೀಡಲೇ ಬೇಕು. ಭಾರತ ದೇಶದಲ್ಲಿ ಪ್ರಸಿದ್ಧಿ ಪಡೆದ 10 ದೇವಾಲಯಗಳಲ್ಲಿ ಒಂದಾದ ದೇವಾಲಯ ಇದಾಗಿದೆ. ಜೊತೆಗೆ ಅತಿ ಎತ್ತರದ ಶಿವಲಿಂಗವನ್ನು ಹೊಂದಿದ ದೇವಾಲಯ ಎಂದೂ ಪ್ರಸಿದ್ಧಿ ಹೊಂದಿದೆ.

ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನ
ಹಳೆಬೀಡಿನಲ್ಲಿರುವ ಹೊಯ್ಸಳೇಶ್ವರ ದೇವಸ್ಥಾನವು ಅತಿದೊಡ್ಡ ಹಿಂದೂ ದೇವಾಲಯವಾಗಿದ್ದು, ಶಿವನಿಗೆ ಹೊಯ್ಸಳೇಶ್ವರ ಮತ್ತು ಸಂತಲೇಶ್ವರ ಶಿವ ಲಿಂಗಗಳ ಹೆಸರಿನಿಂದ ಕರೆಯಲಾಗುತ್ತದೆ. ಶಿವನ ಆರಾಧನೆಗೆಂದು ಭೇಟಿ ನೀಡಲು ಜನರು ಹೋಗುವುದಿದ್ದರೆ ಉತ್ತಮ ಸ್ಥಳಗಳಲ್ಲಿ ಒಂದಾಗಿದೆ ಹೊಯ್ಸಳೇಶ್ವರ ದೇವಾಲಯ.

ಹಂಪಿಯ ವಿರೂಪಾಕ್ಷ ದೇವಾಲಯ
ವಿರೂಪಾಕ್ಷ ದೇವಾಲಯವು ತುಂಗಭದ್ರಾ ನದಿಯ ದಡದಲ್ಲಿದೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದ್ದು, ಕರ್ನಾಟಕದಲ್ಲಿ ಭೇಟಿ ನೀಡಲೇಬೇಕಾದ ಸ್ಥಳವಾವಾಗಿದೆ. ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದ ದೇವಾಲಯಗಳಲ್ಲಿ ಒಂದಾಗಿದೆ. ಹಂಪಿ ಬಸ್ ನಿಲ್ದಾಣದ ಮುಖ್ಯ ರಸ್ತೆಯ ಬಳಿ ಇನ್ನೊಂದು ಶಿವನ ದೇವಾಲಯವಿದೆ. ಇದೂ ಕೂಡಾ ಜನರಿಂದ ಪ್ರಸಿದ್ಧತೆ ಪಡೆದಿದೆ.

ಬೆಂಗಳೂರು ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ
ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ ಬೆಂಗಳೂರಿನ ಓಂಕಾರ ಬೆಟ್ಟಗಳಲ್ಲಿದೆ. ಇದು ಕರ್ನಾಟಕದ ಅತ್ಯಂತ ಬೃಹತ್ ದೇವಾಲಯಗಳಲ್ಲಿ ಒಂದಾಗಿದೆ. ಶಿವರಾತ್ರಿಯಂದು ವಿಶೇಷ ಪೂಜೆಯನ್ನು ದೇವಸ್ಥಾನದಲ್ಲಿ ಕೈಗೊಳ್ಳಲಾಗುತ್ತದೆ. ಜೊತೆಗೆ ಮಲ್ಲೇಶ್ರಂನಲ್ಲಿ ಕಾಡು ಮಲ್ಲೇಶ್ವರ ದೇವಾಲಯ, ಬಸವನಗುಡಿಯಲ್ಲಿ ಗವಿಗಂಗಾಧರೇಶ್ವರ ದೇವಾಲಯ ಹಾಗೂ ಹಲಸೂರಿನಲ್ಲಿ ಕಂಡುಬರುವ ಸೋಮೇಶ್ವರ ದೇವಾಲಯ ಬೆಂಗಳೂರಿನ ಪ್ರಸಿದ್ಧ ಶಿವ ದೇವಾಲಯಗಳಾಗಿವೆ. ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ ಸಾವಿರಾರು ಭಕ್ತರು ಶಿವನ ಆರಾಧನೆಗೆ ಬರುತ್ತಾರೆ.

ಬೆಂಗಳೂರು ಶಿವೋಹಂ ಶಿವ ದೇವಸ್ಥಾನ
ಬೆಂಗಳೂರಿನ ಪ್ರಮುಖ ಶಿವಾಲಯಗಳಲ್ಲಿ ಇದೂ ಒಂದು. ಹಳೆ ವಿಮಾನ ರಸ್ತೆಯ ಮುರುಗೇಶಪಾಳ್ಯದಲ್ಲಿರುವ ಶಿವೋಹಂ ದೇವಾಲಯವು 65 ಅಡಿ ಎತ್ತರದ ಶಿವ ಪ್ರತಿಮೆಯಾಗಿದೆ. ಬೆಂಗಳೂರಿನ ಜನಪ್ರಿಯ ಆಧ್ಯಾತ್ಮಿಕ ತಾಣವಾಗಿದೆ.

ಬೆಂಗಳೂರು ಶಿವೋಹಂ ಶಿವ ದೇವಸ್ಥಾನ

ಐಹೊಳೆಯ ಲಾಡ್ ಖಾನ್ ದೇವಸ್ಥಾನ
ಲಾಡ್ ಖಾನ್ ದೇವಾಲಯವು ಐಹೊಳೆಯಲ್ಲಿದೆ. ಚಾಲುಕ್ಯ ರಾಜವಂಶದ ಅವಧಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು. ಶಿವನ ಆರಾಧನೆಗೆ ಉತ್ತಮ ಸ್ಥಳಗಳಲ್ಲಿ ಈ ದೇವಾಲಯವೂ ಒಂದಾಗಿದೆ.

ಇಟಗಿಯ ಮಹಾದೇವ ದೇವಸ್ಥಾನ
ಚಾಲುಕ್ಯ ಸಾಮ್ರಾಜ್ಯದ ರಾಜ ವಿಕ್ರಮಾದಿತ್ಯರ ಕಾಲದಲ್ಲಿ ಇಟಗಿಯಲ್ಲಿರುವ ಮಹಾದೇವ ದೇವಾಲಯವನ್ನು ನಿರ್ಮಿಸಲಾಗಿದೆ. ದೇವಾಲಯ ಕರ್ನಾಟಕದ ಪ್ರಸಿದ್ಧ ಶಿವ ಲಿಂಗಗಳಲ್ಲಿ ಒಂದಾಗಿದೆ. ಮಹಾ ಶಿವರಾತ್ರಿ ಪ್ರಯುಕ್ತ ಶಿವನ ಆರಾಧನೆಗೆ ಭಕ್ತರು ಇಲ್ಲಿ ಬರುತ್ತಾರೆ. ಶಿವನ ಧ್ಯಾನದಲ್ಲಿ ತೊಡಗುತ್ತಾರೆ. ಕರ್ನಾಟಕದ ಪ್ರಸಿದ್ಧ ತಾಣಗಳಲ್ಲಿ ಮಹಾದೇವ ದೇವಸ್ಥಾನವೂ ಒಂದಾಗಿದೆ.

ಇದನ್ನೂ ಓದಿ: Maha Shivaratri 2021: ಶಿವ ಶಿವಾ.. ಶಿವರಾತ್ರಿಗೆ ಇನ್ನೂ ಒಂದು ವಾರ ಇರುವಾಗಲೇ ರಣಬಿಸಿಲಿನ ಆರ್ಭಟ ಶುರು!

ಇದನ್ನೂ ಓದಿ: Maha Shivaratri 2021: ಶಿವರಾತ್ರಿ ಹಬ್ಬ ಹುಟ್ಟಿದ್ದೇಗೆ? ಏನನ್ನು ಅರ್ಪಿಸಿದರೆ ಪರಶಿವ ಒಲಿಯುತ್ತಾನೆ?