
ದಾವಣಗೆರೆ, ಡಿಸೆಂಬರ್ 3: ಮೆಕ್ಕೆಜೋಳವು ದಾವಣಗೆರೆ (Davanagere), ಹಾವೇರಿ, ವಿಜಯನಗರ, ಶಿವಮೊಗ್ಗ ಜಿಲ್ಲೆಯ ಕೆಲ ಭಾಗ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರ ಪ್ರಮುಖ ಬೆಳೆ. ಆದರೆ ಇದೇ ಬೆಳೆಯ ಬೆಲೆ ಕುಸಿತ ಆಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಕ್ವಿಂಟಲ್‌ಗೆ 2400 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ ರಾಜ್ಯದಲ್ಲಿ ಈವರೆಗೂ ಖರೀದಿ ಕೇಂದ್ರಗಳು ಓಪನ್ ಆಗಿಲ್ಲ. ಇತ್ತೀಚೆಗಷ್ಟೇ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ, ಎಥೆನಾಲ್ ಕಂಪನಿಗಳು 2400 ರೂ. ದರದಲ್ಲೇ ಖರೀದಿ ಮಾಡಬೇಕು ಎಂದು ಸೂಚನೆ ನೀಡಿದ್ದರು. ಆದರೆ, ದಾವಣಗೆರೆ ಜಿಲ್ಲೆಯಲ್ಲಿ ಒಂದೇ ಒಂದು ಎಥೆನಾಲ್ ಘಟಕ ಇದ್ದು ಅಲ್ಲಿ ಕೂಡಾ ಖರೀದಿ ಮಾಡ್ತಿಲ್ಲ. ಇನ್ನು ಕೆಎಂಎಫ್‌ನವರು ಕೂಡಾ ಒಬ್ಬ ರೈತರಿಂದ ಕೇವಲ 25 ಕ್ವಿಂಟಲ್ ಜೋಳ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ರೈತರು ಅನಿವಾರ್ಯವಾಗಿ 1600, 1700 ರೂ.ಗೆ ಅಥವಾ ವರ್ತಕರು ಕೊಟ್ಟಷ್ಟು ಹಣಕ್ಕೆ ಮೆಕ್ಕೆಜೋಳ ಮಾರಾಟ ಮಾಡುವಂತಾಗಿದೆ.
ಮೆಕ್ಕೆಜೋಳ ಬೆಲೆ ವಿಷಯವನ್ನೇ ಅಸ್ತ್ರ ಮಾಡಿಕೊಂಡಿದ್ದ ಬಿಜೆಪಿ ನಾಯಕರು ಮಂಗಳವಾರ ಧಾರವಾಡದಲ್ಲಿ ದೊಡ್ಡ ಹೋರಾಟ ನಡೆಸಿದ್ದಾರೆ. ಟ್ರ್ಯಾಕ್ಟರ್, ಎತ್ತಿನ ಬಂಡಿ ಏರಿ ಪ್ರತಿಭಟನೆ ನಡೆಸಿದ್ದಾರೆ. ಆಲೂರು ವೆಂಕಟರಾವ್ ವೃತ್ತ ಹಾಗೂ ಕೋರ್ಟ್ ವೃತ್ತಗಳ ಮೂಲಕ ಡಿಸಿ ಕಚೇರಿವರೆಗೆ ಆಗಮಿಸಿ ಆಕ್ರೋಶ ಹೊರಹಾಕಿದ್ದಾರೆ.
ಮೆಕ್ಕೆಜೋಳ ಖರೀದಿ ಕೇಂದ್ರಕ್ಕಾಗಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಚಿವ ಶಿವಾನಂದ್ ಪಾಟೀಲ್, ರಾಜ್ಯದಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಉತ್ಪಾದನೆಯಾಗಿದೆ. ಹೀಗಾಗಿ ಖರೀದಿ ಸವಾಲು ಆಗಿದೆ. ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಆದರೆ ಅವರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಯವರು ಕರ್ನಾಟಕವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಕೂಡಾ ಕೇಂದ್ರದ ವಿರುದ್ಧವೇ ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲ ಮೆಕ್ಕೆಜೋಳ ಖರೀದಿ ಸಂಬಂಧ ಸಂಸದರ ಸಭೆ ಕರೆಯಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಪ್ರತಿ ರೈತನಿಂದ 5 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಆದೇಶ: ಆದೇಶದ ಪ್ರತಿಗೇ ಬೆಂಕಿ ಹಚ್ಚಿ ಹಾವೇರಿ ರೈತರ ಆಕ್ರೋಶ!
ಮತ್ತೊಂದೆಡೆ, ಖರೀದಿ ಕೇಂದ್ರ ಓಪನ್ ಮಾಡುವಂತೆ ಆಗ್ರಹಿಸಿ ಹಾವೇರಿ, ದಾವಣಗೆರೆಯಲ್ಲಿ ಹೋರಾಟ ಜೋರಾಗುತ್ತಿದ್ದು, ಇತ್ತ ಸರ್ಕಾರ ಹಾಗೂ ಬಿಜೆಪಿ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.