ಧಾರವಾಡದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸಿದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ!
ಡಾ. ವರ್ಧನ್ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ವರ್ಧನ್ ಅವರು ಸಾಮಾಜಿಕ ಜಾಲತಾಣದಲ್ಲಿ ಕಚೇರಿಯ ಮುಖ್ಯಸ್ಥನಾದ ನನ್ನ ಮೇಲೆ ಅನಾವಶ್ಯಕವಾಗಿ ಆಪಾದನೆ ಮಾಡಿ ಅಸಂವಿಧಾನಿಕ ಶಬ್ದಗಳನ್ನು ಬಳಿಸಿದ್ದಾರೆ ಎಂದು ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧಾರವಾಡ: ಇತ್ತೀಚೆಗೆ ವಿದ್ಯಾಕಾಶಿ ಧಾರವಾಡಕ್ಕೆ ಶಿಕ್ಷಣ ಸಚಿವ ಸುರೇಶ ಕುಮಾರ ಭೇಟಿ ನೀಡಿದ್ದು, ಹಲವಾರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಬೆಳಿಗ್ಗೆ ವಾಕಿಂಗ್ ಎಂದು ಹೊರಟಿದ್ದ ಸಚಿವರು ತಮ್ಮೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರನ್ನು ಕೂಡ ಕರೆದಿದ್ದರು. ಈ ವೇಳೆ ವಾಕಿಂಗ್ ಡ್ರೆಸ್ ನಲ್ಲಿಯೇ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸಚಿವರೊಂದಿಗೆ ಹೋಗಿದ್ದು, ಬಳಿಕ ವಾಕಿಂಗ್ ಪ್ರದೇಶದಲ್ಲಿರುವ ಡಿಡಿಪಿಐ ಕಚೇರಿಗೆ ಸಚಿವರು ಭೇಟಿ ನೀಡಿದ್ದರು. ಈ ವೇಳೆ ಅಲ್ಲಿದ್ದ ಚಿತ್ರಕಲಾ ಶಿಕ್ಷಕರು ಸಚಿವರಿಗೆ ಸನ್ಮಾನ ಮಾಡಿ, ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದರು.
ಈ ಫೋಟೋದಲ್ಲಿ ಅಪರ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಕೂಡ ಇದ್ದರು. ಆದರೆ ಸಚಿವರ ಪಕ್ಕ ಕೂತಿದ್ದ ಅವರು ಚೆಡ್ಡಿ ಹಾಕಿದ್ದರು. ಇದು ಇಲಾಖೆಗೆ ಅವಮಾನ ತರುವಂತಹ ಸಂಗತಿ ಎಂದು ಶಿಕ್ಷಣ ಇಲಾಖೆಯ ಕಲಬುರ್ಗಿ ಆಯುಕ್ತಾಲಯದ ನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ್ ಸಾಮಾಜಿಕ ಜಾಲತಾಣಗಳ ಮೂಲಕ ಟೀಕಿಸಿದ್ದು, ಈ ಪ್ರಕರಣವೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ವಾಟ್ಸಪ್, ಫೇಸ್ಬುಕ್ ಮೂಲಕ ಡಾ. ವರ್ಧನ್ ಅವರು ಈ ಫೋಟೋ ಶೇರ್ ಮಾಡಿ, ವಿನಾಕಾರಣ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಗರಂ ಆಗಿದ್ದಾರೆ.
ಡಾ. ಬಿ.ಕೆ.ಎಸ್. ವರ್ಧನ್ ವಿರುದ್ಧ ಸರ್ಕಾರಕ್ಕೆ ದೂರು: ಶಿಕ್ಷಣ ಇಲಾಖೆಯ ಕಲಬುರ್ಗಿ ಆಯುಕ್ತಾಲಯದ ನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ ಅವರು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಪ್ ಮತ್ತು ಸುದ್ದಿ ಮಾಧ್ಯಮಗಳಲ್ಲಿ ನನ್ನ ವಿರುದ್ಧ ದುರುದ್ದೇಶದಿಂದಾಗಿ ಆರೋಪಗಳನ್ನು ಮಾಡುತ್ತಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಇದೀಗ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದಾರೆ.
ಮೇಜರ್ ಸಿದ್ದಲಿಂಗಯ್ಯ ಹಿರೇಮಠ ನೀಡಿದ ದೂರಿನಲ್ಲಿ ಏನೇನಿದೆ? ಕಳೆದ ಮಾರ್ಚ್ 2ರಂದು ಶಿಕ್ಷಣ ಇಲಾಖೆ ಸಚಿವರಾದ ಸುರೇಶ ಕುಮಾರ ಅವರು ಶಿಕ್ಷಣ ಸ್ಪಂದನಕ್ಕಾಗಿ ಧಾರವಾಡ ಭೇಟಿ ನೀಡಿದ್ದರು. ಸಚಿವರ ಇಚ್ಛೆಯ ಮೇರೆಗೆ ಬೆಳಿಗ್ಗೆ 5ಕ್ಕೆ ಕರ್ನಾಟಕ ಕಾಲೇಜು ಮೈದಾನದ ಆವರಣದಲ್ಲಿ ಅವರೊಂದಿಗೆ ವಾಕಿಂಗ್ ಮುಗಿಸಿ ಅತಿಥಿ ಗೃಹಕ್ಕೆ ಮರಳುವಾಗ, ಅದೇ ಸಮಯಕ್ಕೆ ಡಿಡಿಪಿಐ ಮೋಹನ ಹಂಚಾಟೆ ಅವರು ತಮ್ಮ ಕಚೇರಿಯ ಆವರಣದಲ್ಲಿ ಮಧುಬಣಿ ಕಲಾಕೃತಿಗಳನ್ನು ವೀಕ್ಷಣೆ ಮಾಡಲು ಸಚಿವರೊಂದಿಗೆ ತಮ್ಮನ್ನು ಕರೆದುಕೊಂಡು ಹೋಗಿದ್ದರು. ಆಗ ಇಲಾಖೆಯ ಚಿತ್ರಕಲಾ ಶಿಕ್ಷಕರು ಮಧುಬಣಿ ಕಲಾವಿದರಿಂದ ಸನ್ಮಾನ ಸಹ ನಡೆಯಿತು ಎಂದು ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ವಾಕಿಂಗ್ ಸಮಯದಲ್ಲಿ ತಾನು ಚೆಡ್ಡಿ ಧರಿಸಿದ್ದು, ಈ ಸಂದರ್ಭದಲ್ಲಿ ಸಚಿವರು ಸಹ ಸಾಕ್ಷಿಯಾಗಿದ್ದಾರೆ. ಆದರೆ, ಡಾ. ವರ್ಧನ್ ಅವರು ನನ್ನ ತೇಜೋವಧೆ ಮಾಡಲು ನಾನು ಚೆಡ್ಡಿ ಹಾಕಿರುವ ಫೋಟೋಗಳನ್ನು ವಾಟ್ಸಪ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಶಿಕ್ಷಣ ಇಲಾಖೆ ಎಲ್ಲರಿಗೂ ಶಿಷ್ಟಾಚಾರ ಗೊತ್ತಿದೆ. ಆದರೆ, ಅದನ್ನು ನಿಯಂತ್ರಿಸುವ ಅಧಿಕಾರಿಯೇ ಚೆಡ್ಡಿಯ ಮೇಲಿರುವುದು ಸಚಿವರಿಗೆ ಸರ್ಕಾರಕ್ಕೆ ಅಪಮಾನವಲ್ಲವೇ ಎಂಬ ಸಂದೇಶವನ್ನು ಕಳುಹಿಸಿದ್ದಾರೆ. ಇದರೊಂದಿಗೆ ಮತ್ತೊಂದು ಸಂದೇಶದಲ್ಲಿ ಇದು ಅಪರ ಆಯುಕ್ತ ಹುದ್ದೆಯ ಅಧೋಗತಿಯೋ ಅಥವಾ ಬೆಳಗಾವಿ ವಿಭಾಗದ ಶಿಕ್ಷಕ ಇಲಾಖೆಯ ಮಾನದ ಅಧೋಗತಿಯೋ ಎಂದಿದ್ದಾರೆ. ಇದು ಕೆಲವು ಪತ್ರಿಕಾ ಮಾಧ್ಯಮಗಳಲ್ಲೂ ಪ್ರಕಟವಾಗಿದೆ. ಈ ಮೂಲಕ ತಮಗೆ ಹಾಗೂ ಇಲಾಖೆಗೂ ಮುಜುಗರ ತರುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ಹಿರೇಮಠ ತಿಳಿಸಿದ್ದಾರೆ.
ಡಾ. ವರ್ಧನ್ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ವರ್ಧನ್ ಅವರು ಸಾಮಾಜಿಕ ಜಾಲತಾಣದಲ್ಲಿ ಕಚೇರಿಯ ಮುಖ್ಯಸ್ಥನಾದ ನನ್ನ ಮೇಲೆ ಅನಾವಶ್ಯಕವಾಗಿ ಆಪಾದನೆ ಮಾಡಿ ಅಸಂವಿಧಾನಿಕ ಶಬ್ದಗಳನ್ನು ಬಳಿಸಿ, ಕಚೇರಿಯ ಕಡತಗಳಲ್ಲಿ ವೈಯಕ್ತಿಕ ಮತ್ತು ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸಿ, ತಮ್ಮದಲ್ಲದ ಆರೋಪಗಳನ್ನು ಮಾಡಿದ್ದರು ಎಂದು ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅದು ಈಡೇರದೇ ಇದ್ದಾಗ, ಜಾತಿನಿಂದನೆಯ ಆರೋಪಗಳನ್ನು ಸಹ ಮಾಡಿದ್ದರು. ಈ ಮೂಲಕ ಮಾನಸಿಕ ಕಿರುಕುಳ ನೀಡಿ ಹಿರಿಯ ಅಧಿಕಾರಿ ಹುದ್ದೆಗೆ ನೀಡಬೇಕಾದ ಕನಿಷ್ಟ ಗೌರವ ತೋರಿರಲಿಲ್ಲ. ಆದ್ದರಿಂದ ವರ್ಧನ್ ಅವರು ಇಲಾಖೆಯನ್ನು ಮುಜುಗರಕ್ಕೆ ಈಡು ಮಾಡುವ ಸಂದೇಶಗಳನ್ನು ಕಳುಹಿಸಿದ್ದು, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮೇಜರ್ ಸಿದ್ದಲಿಂಗಯ್ಯ ಅವರು ಸರ್ಕಾರಕ್ಕೆ ಮಾರ್ಚ್ 6 ರಂದು ನೀಡಿರುವ ತಮ್ಮ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವುದು ಸದ್ಯ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಹುಬ್ಬಳ್ಳಿ- ಧಾರವಾಡ ಪಾಲಿಕೆಯಲ್ಲಿ ರೂ. 200 ಕೋಟಿ ನೀರಿನ ಬಿಲ್ ಬಾಕಿ: ಕೈ- ಕಮಲ ಪಕ್ಷಗಳ ನಾಯಕರ ನಡುವೆ ಹಗ್ಗ ಜಗ್ಗಾಟ