ಮದುವೆ ಮುಂದೂಡಿ ಕೊರೊನಾ ಕರ್ತವ್ಯಕ್ಕೆ ಹಾಜರ್ ಆದ ಮಳವಳ್ಳಿ ಡಿವೈಎಸ್‌ಪಿ
ಮಂಡ್ಯ: ಕೊರೊನಾ ಅನ್ನೋ ಹೆಮ್ಮಾರಿ ಕಾಲಿಟಿದ್ದೇ ಇಟ್ಟಿದ್ದು. ಅದೆಷ್ಟೋ ಕನಸುಗಳನ್ನು ಸುಟ್ಟುಹಾಕಿದೆ. ಮಕ್ಕಳ ಮದುವೆ ಹೀಗ್ ಮಾಡ್ಬೇಕು ಹಾಗ್ ಮಾಡ್ಬೇಕು ಅನ್ನೋರ ಆಸೆಗೆ ಕಲ್ಲು ಹಾಕಿದೆ. ಮನೆಯವರನ್ನ ಒಪ್ಪಿಸಿ ಪ್ರೀತಿಸಿದವರನ್ನ ಮದುವೆ ಆಗ್ಬೇಕು ಅನ್ನೋರ ಸುಂದರ ಪ್ರೀತಿಗೆ ಕೊಳ್ಳಿ ಇಟ್ಟಿದೆ. ಸಾಲ ಆದ್ರೂ ಪರವಾಗಿಲ್ಲ ಧಾಮ್ ಧೂಮ್ ಆಗಿ ಮದುವೆ ಆಗ್ಬೇಕು ಅನ್ನೋರ ಕನಸುಗಳನ್ನು ಛಿದ್ರ ಛಿದ್ರ ಮಾಡಿದೆ. ಇದರ ನಡುವೆ ಸಕ್ಕರೆ ನಾಡಿನಲ್ಲಿ ಅಧಿಕಾರಿಯೊಬ್ಬರು ಜನರಿಗೆ ಮಾದರಿಯಾಗಿದ್ದಾರೆ. ಹೆಮ್ಮಾರಿಯಿಂದಾಗಿ ಮದುವೆ ಮುಂದೂಡಿದ ಡಿವೈಎಸ್‌ಪಿ! ರಾಜ್ಯದಲ್ಲಿ ಕ್ರೂರಿ […]
ಮಂಡ್ಯ: ಕೊರೊನಾ ಅನ್ನೋ ಹೆಮ್ಮಾರಿ ಕಾಲಿಟಿದ್ದೇ ಇಟ್ಟಿದ್ದು. ಅದೆಷ್ಟೋ ಕನಸುಗಳನ್ನು ಸುಟ್ಟುಹಾಕಿದೆ. ಮಕ್ಕಳ ಮದುವೆ ಹೀಗ್ ಮಾಡ್ಬೇಕು ಹಾಗ್ ಮಾಡ್ಬೇಕು ಅನ್ನೋರ ಆಸೆಗೆ ಕಲ್ಲು ಹಾಕಿದೆ. ಮನೆಯವರನ್ನ ಒಪ್ಪಿಸಿ ಪ್ರೀತಿಸಿದವರನ್ನ ಮದುವೆ ಆಗ್ಬೇಕು ಅನ್ನೋರ ಸುಂದರ ಪ್ರೀತಿಗೆ ಕೊಳ್ಳಿ ಇಟ್ಟಿದೆ. ಸಾಲ ಆದ್ರೂ ಪರವಾಗಿಲ್ಲ ಧಾಮ್ ಧೂಮ್ ಆಗಿ ಮದುವೆ ಆಗ್ಬೇಕು ಅನ್ನೋರ ಕನಸುಗಳನ್ನು ಛಿದ್ರ ಛಿದ್ರ ಮಾಡಿದೆ. ಇದರ ನಡುವೆ ಸಕ್ಕರೆ ನಾಡಿನಲ್ಲಿ ಅಧಿಕಾರಿಯೊಬ್ಬರು ಜನರಿಗೆ ಮಾದರಿಯಾಗಿದ್ದಾರೆ.
ಹೆಮ್ಮಾರಿಯಿಂದಾಗಿ ಮದುವೆ ಮುಂದೂಡಿದ ಡಿವೈಎಸ್‌ಪಿ! ರಾಜ್ಯದಲ್ಲಿ ಕ್ರೂರಿ ಕೊರೊನಾ ನರ್ತಿಸುತ್ತಿದೆ. ಮಹಾಮಾರಿ ಕೊರೊನಾಗೆ ಜನರು ತತ್ತರಿಸಿ ಹೋಗಿದ್ದಾರೆ. ಹೆಮ್ಮಾರಿಯನ್ನ ಕಟ್ಟಿ ಹಾಕೋಕೆ ದೇಶಾದ್ಯಂತ ಲಾಕ್ಡೌನ್ ಜಾರಿಯಾಗಿದೆ. ಈ ಲಾಕ್ಡೌನ್ ನಡುವೆ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿ ಸೇರಿ ವಿವಿಧ ವರ್ಗಗಳ ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಹಗಲಿರುಳು ಎನ್ನದೆ ಕುಟುಂಬಸ್ಥರಿಂದ ದೂರ ಉಳಿದು ದೇಶದ ಹಿತಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಂತೆ ಸಕ್ಕರೆ ನಾಡು ಮಂಡ್ಯದ ದಕ್ಷ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯಕ್ಕಾಗಿ ತಮ್ಮ ಮದುವೆಯನ್ನೇ ಮುಂದೂಡಿ ಮಾದರಿಯಾಗಿದ್ದಾರೆ.
ಹೌದು, ಮಳವಳ್ಳಿಯಲ್ಲಿ ಡಿವೈಎಸ್‌ಪಿ ಎಂ.ಜೆ.ಪೃಥ್ವಿ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಮಳವಳ್ಳಿಯಲ್ಲಿ ಕೊರೋನಾ ಸೋಂಕಿತರ ಹೆಚ್ಚಾಗಿದ್ದು, ಪೃಥ್ವಿ ಅವರು ಎದೆಗುಂದದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್ಡೌನ್ ಕರ್ತವ್ಯ ನಿರ್ವಹಿಸಲು ಇದೇ ತಿಂಗಳು 5ನೇ ತಾರೀಖಿನಂದು ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿದ್ದಾರೆ.
ಮದುವೆ ಮುಂದೂಡಿ ಕರ್ತವ್ಯ ನಿರ್ವಹಿಸುತ್ತಿರುವ ದಕ್ಷ ಅಧಿಕಾರಿಯ ಕಾರ್ಯಕ್ಕೆ ಜಿಲ್ಲೆಯ ಸಂಸದೆ ಸುಮಲತಾ ಅಂಬರೀಶ್ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಉಪವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಜೆ.ಪೃಥ್ವಿ ಅವರು ಏಪ್ರಿಲ್ 5ರಂದು ಹಸೆಮಣೆ ಏರಬೇಕಿತ್ತು.
ಆದರೆ ಕೊರೋನಾ ತಡೆಗಟ್ಟಲು ಲಾಕ್ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವ ಸಲುವಾಗಿ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಇಂತಹ ಧೈರ್ಯವಂತ, ದಕ್ಷ, ಪ್ರಾಮಾಣಿಕ, ಮಾದರಿ ಮಹಿಳಾ ಅಧಿಕಾರಿ ಮಂಡ್ಯ ಜಿಲ್ಲೆಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಸುಮಲತಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಘಟ್ಟ. ಅಂತಹ ಮಹತ್ವದ ಘಟ್ಟದಲ್ಲಿ ದಾಂಪತ್ಯ ಜೀವನ ಆರಂಭಿಸಬೇಕಿದ್ದ ಮಳವಳ್ಳಿಯ ಡಿವೈಎಸ್ ಪಿ ಪೃಥ್ವಿ ಅವರು ಕೊರೊನಾ ವಿರುದ್ಧ ಹೊರಾಡಲು ತಮ್ಮ ಮದುವೆಯನ್ನೇ ಮುಂದೂಡಿ ಜನರ ಮೆಚ್ಚುಗೆಗೆ ಪಾತ್ರ ಆಗಿದ್ದಾರೆ. ಮುಂದೆ ನಿಗದಿಯಾದ ದಿನಾಂಕದಲ್ಲಿ ಯಾವುದೇ ವಿಘ್ನ ಬರದೆ ಹೊಸ ಜೀವನಕ್ಕೆ ಕಾಲಿಟ್ಟು ಖುಷಿಯಾಗಿರಲಿ ಅನ್ನೋದೆ ಎಲ್ಲರ ಆಶಯ.