ಬೆಂಗಳೂರು: ಸಾಲು ಸಾಲು ಸೋಲುಗಳಿಂದ ಸೋತು ಸುಣ್ಣವಾಗಿರುವ ಕಾಂಗ್ರೆಸ್‌ನಲ್ಲೀಗ ಒಳ ಜಗಳ ಜೋರಾಗಿದೆ. ಬಿಹಾರ ಮತ್ತು ರಾಜ್ಯವೂ ಸೇರಿದಂತೆ ಹಲವು ಉಪ ಚುನಾವಣೆಗಳಲ್ಲಿ ಸೋಲಿನ ಕಹಿಯಿಂದ ಕಂಗೆಟ್ಟ ಕಾಂಗ್ರೆಸ್‌ನಲ್ಲಿ ಮಾತಿನ ಸಮರ ತಾರಕ್ಕಕ್ಕೇರಿದೆ. ಖರ್ಗೆ ಮಾತು ಇದಕ್ಕೆ ಪುಷ್ಠಿ ನೀಡಿದೆ.
ಸಿದ್ಧಾಂತ ಹಳಿ ತಪ್ಪಿದರೆ ಪಕ್ಷ ಸರ್ವನಾಶವಾಗುತ್ತದೆ ಎಂದ ಖರ್ಗೆ..! ಹೌದು, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಕಾರ್ಯಕರ್ತರು, ಸಹನಾಯಕರಿಗೆ ನೀತಿ ಪಾಠದ ಮಾತುಗಳನ್ನಾಡಿದ್ದಾರೆ. ಸಾಲು ಸಾಲು ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್‌ನಲ್ಲಿ ಯಾವುದು ಸರಿ ಇಲ್ಲ ಅನ್ನೋದು ಖರ್ಗೆ ಮಾತಿನಿಂದ ಗೊತ್ತಾಗಿದೆ. ಅಂದಹಾಗೇ ಪಕ್ಷದ ನಾಯಕರ ಹೊಂದಾಣಿಕೆ ಬಗ್ಗೆ ಖರ್ಗೆ ಪಾಠ ಮಾಡಿದ್ದು ಕೆಪಿಸಿಸಿ ಕಚೇರಿಯಲ್ಲೇ.
ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಸ್ವಲ್ಪ ಖಾರವಾಗೇ ಮಾತಿನ ಮದ್ದು ಅರೆದಿದ್ದಾರೆ. ಅವರವರ ಕ್ಷೇತ್ರದಲ್ಲಿ ಕಾರ್ಪೊರೇಟರ್ಗಳನ್ನೂ ಕೂಡ ಸ್ಥಳೀಯ ನಾಯಕರು ಗೆಲ್ಲಿಸಿ ತರುವುದಿಲ್ಲ. ಸೋತರೆ ರಾಹುಲ್ ಗಾಂಧಿ ಕಾರಣ, ಸೋನಿಯಾ ಗಾಂಧಿ ಕಾರಣ ಅಂತ ಆರೋಪ ಮಾಡ್ತಾರೆ. ರಾಜ್ಯದಲ್ಲಿ ಇರೋರು ರಾಹುಲ್ ಗಾಂಧಿಯವರಾ..? ಎಂದು ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಸ್ಥಳೀಯ ನಾಯಕರು ಜವಾಬ್ಧಾರಿ ತೆಗೆದುಕೊಳ್ಳಬೇಕು, ಲೀಡರ್ಗಳನ್ನ ವೀಕ್ ಮಾಡಿದರೆ ಪಕ್ಷ ಉದ್ಧಾರವಾಗಲ್ಲ. ಸಿದ್ಧಾಂತ ಹಳಿ ತಪ್ಪಿದರೆ ಪಕ್ಷ ಸರ್ವನಾಶವಾಗುತ್ತೆ. ನಮ್ಮ ನಮ್ಮಲ್ಲೇ ಭಿನ್ನಾಬಿಪ್ರಾಯ ಬಿಡಬೇಕು. ನಾವು ನಮ್ಮ ನಾಯಕರನ್ನ ಒಟ್ಟುಗೂಡಿಸಬೇಕು ಎಂದು ಮಾತಿನಲ್ಲಿ ತಮ್ಮ ಪಕ್ಷದ ನಾಯಕರನ್ನ ಕುಟುಕಿದ್ದಾರೆ.
‘ದೇಶದಲ್ಲಿ ಕೋಮುವಾದಿಗಳು ಹೆಚ್ಚಾಗುತ್ತಿದ್ದಾರೆ’ ಎಂದ ಸಿದ್ದು..
ಖರ್ಗೆ ಕಿವಿ ಮಾತಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಧನಿಗೂಡಿಸಿದ್ದಾರೆ. ಪಕ್ಷದ ಪರಿಸ್ಥಿತಿ ನೋಡಿ ಖರ್ಗೆ ಬಹಳ ನೊಂದುಕೊಂಡು ಮಾತನಾಡಿದ್ದಾರೆ. ನಮ್ಮಲ್ಲಿ ಕ್ಲಾರಿಟಿ ಇಲ್ಲದಿದ್ರೆ ಪಕ್ಷ ಕಟ್ಟೋಕೆ ಆಗಲ್ಲ, ಬಹಳ ಮಂದಿಗೆ ಸಿದ್ಧಾಂತಗಳ ಬಗ್ಗೆ ಕ್ಲಾರಿಟಿ ಇಲ್ಲ. ಕಾರ್ಯಕರ್ತರಲ್ಲಿ ಸ್ಪಷ್ಟತೆ ಇಲ್ಲವಾದರೆ ಪಕ್ಷ ಸಂಘಟನೆ ಕಷ್ಟ ಅಂತ ಸಿದ್ದರಾಮಯ್ಯ ಕೂಡ ಬೇಸರದಲ್ಲೇ ಮಾತನಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಸದ್ಯಕ್ಕಂತೂ ಯಾವುದೇ ಗೆಲುವಿನ ರುಚಿ ನೋಡದೇ ಬೆಂದು ಹೋಗಿದೆ. ಪಕ್ಷದ ಒಳಗೂ ಹೊರಗೂ ಅನಿಶ್ಚಿತತೆ ಕಾಡುತ್ತಿರುವುದು ಹಿರಿಯ ನಾಯಕರ ಮಾತುಗಳಿಂದಲೇ ಸ್ಪಷ್ಟ.