ಗದಗ: ಧಾರಾವಾಹಿಯಲ್ಲಿ ಚಾನ್ಸ್ ಕೊಡಿಸುವುದಾಗಿ ಹೇಳಿ ಕಿಲಾಡಿಯೊಬ್ಬ ನಾಲ್ವರು ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ್ದಾನೆ. ಬೆಂಗಳೂರು ಮೂಲದ ಪ್ರವೀಣ್ ಗೌಡ ಎಂಬ ನಕಲಿ ಡೈರೆಕ್ಟರ್ನಿಂದ ಮೋಸ ನಡೆದಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿ ಮಂಜುಳಾ ಎಂಬುವವರಿಗೆ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಪ್ರವೀಣ್ ಗೌಡ ವಂಚನೆ ಮಾಡಿದ್ದಾನೆ.
ಏನಿದು ಪ್ರಕರಣ?
ಸ್ಫೂರ್ತಿ ಎಂಬ ಧಾರಾವಾಹಿಯಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಮಂಜುಳಾ ಸೇರಿ ಬೈಲಹೊಂಗಲದ 3 ಮಹಿಳೆಯರಿಗೆ ಪ್ರವೀಣ್ ಗೌಡ ವಂಚಿಸಿದ್ದಾನೆ. ಒಬ್ಬೊಬ್ಬರಿಂದ ವಂಚಕ ಪ್ರವೀಣ್ ಬರೋಬ್ಬರಿ 12 ಸಾವಿರ ರೂ. ವಸೂಲಿ ಮಾಡಿದ್ದಾನೆ. ಬೆಳಗಾವಿ ಮೂಲದ ಭಾರತಿ ಎಂಬುವವರ ಮೂಲಕ ಪರಿಚಯವಾದ ಈ ಕಿಲಾಡಿ ಇದೀಗ ಎಲ್ಲರಿಗೆ ಮೋಸ ಮಾಡಿದ್ದಾನೆ.
ಈ ನಡುವೆ, ಸೀರಿಯಲ್ನಲ್ಲಿ ಌಕ್ಟಿಂಗ್ ಚಾನ್ಸ್ ಸಿಗುತ್ತೆ ಅಂತಾ ಮಂಜುಳಾ ತನ್ನ ಒಡವೆ ಅಡವಿಟ್ಟು ಹಣ ಕೊಟ್ಟಿದ್ದಾರಂತೆ. ಹಣ ಪಡೆದ ನಂತರ ಆಸಾಮಿ ಅಡ್ರೆಸ್ಗೆ ಸಿಗದಿದ್ದಾಗ ಮಹಿಳೆಯರು ಕಂಗಾಲು. ಇತ್ತ ಧಾರಾವಾಹಿಯ ಶೂಟಿಂಗ್ ಇಲ್ಲ ಅತ್ತ ಕೊಟ್ಟ ಹಣದ ಸುಳಿವೂ ಇಲ್ಲ!
ಅಷ್ಟೇ ಇಲ್ಲ, ಈ ನಕಲಿ ಡೈರೆಕ್ಟರ್ ಹಲವು ಕಡೆ ಇದೇ ರೀತಿ ಸ್ಕೆಚ್ ಹಾಕಿ ಬಹಳಷ್ಟು ಜನರಿಗೆ ವಂಚಿಸಿದ್ದಾನೆ. ಮಕ್ಕಳಿಗೆ ಸಹ ಧಾರಾವಾಹಿಯಲ್ಲಿ ಪಾತ್ರ ಕೊಡಿಸುವುದಾಗಿ ನಂಬಿಸಿ ಅವರ ಪೋಷಕರ ಬಳಿ ದುಡ್ಡು ಪೀಕಿಸಿದ್ದಾನೆ.
ಇದನ್ನೂ ಓದಿ: Bribe 2 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ED ಅಧಿಕಾರಿ CBI ವಶಕ್ಕೆ