ಬೀದಿ ಪ್ರಾಣಿಗಳಿಗೆ ಆಸರೆಯಾದ ಕೋಲಾರದ ವ್ಯಕ್ತಿ; ನಾಯಿ, ಕೋತಿಗಳಿಗೆ ನಿತ್ಯ ಆಹಾರ ನೀಡಿ ಪೋಷಣೆ

| Updated By: preethi shettigar

Updated on: Jun 27, 2021 | 11:31 AM

ವಿವಿಧ ಬಡಾವಣೆಗಳ ನಾಯಿಗಳಿಗೆ ಮತ್ತು ಕೋತಿಗಳಿಗೆ ಹಾಲು ಬ್ರೆಡ್​​ ನೀಡುವುದಷ್ಟೇ ಅಲ್ಲ, ವಿವಿಧ ಕಾಯಿಲೆಗಳಿಂದ ನರಳುತ್ತಿರುವ ನಾಯಿಗಳಿಗೆ ಔಷಧಿ ಉಪಚಾರಗಳನ್ನು ಮಾಡುವ ಜತೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸುತ್ತಾರೆ. ಮನುಷ್ಯನಲ್ಲಿ ಕಾಣದ ಪ್ರೀತಿಯನ್ನು ನಾವು ಪ್ರಾಣಿಗಳಲ್ಲಿ ಕಾಣಬಹುದು ಎಂಬ ಧ್ಯೇಯದೊಂದಿಗೆ ಮನೋಹರ್​ ಲಾಲ್​ ಪ್ರಾಣಿಗಳಿಗೆ ಆಸರೆಯಾಗಿದ್ದಾರೆ.

ಬೀದಿ ಪ್ರಾಣಿಗಳಿಗೆ ಆಸರೆಯಾದ ಕೋಲಾರದ ವ್ಯಕ್ತಿ; ನಾಯಿ, ಕೋತಿಗಳಿಗೆ ನಿತ್ಯ ಆಹಾರ ನೀಡಿ ಪೋಷಣೆ
ಬೀದಿ ಪ್ರಾಣಿಗಳಿಗೆ ಆಸರೆಯಾದ ಕೋಲಾರದ ವ್ಯಕ್ತಿ
Follow us on

ಕೋಲಾರ: ಮನೆಯಲ್ಲಿ ಒಂದು ಅಥವಾ ಎರಡು ಪ್ರಾಣಿಗಳನ್ನು ಸಾಕುವುದೇ ಈ ಕಾಲಘಟ್ಟದಲ್ಲಿ ಬಹಳ ಕಷ್ಟ. ಹೀಗಿರುವಾಗ ಬೀದಿ ಪ್ರಾಣಿಗಳ ನೆರವಿಗೆ ನಿಲ್ಲಲ್ಲೂ ಮುಂದೆ ಬರುವವರ ಸಂಖ್ಯೆ ತೀರ ಕಡಿಮೆ. ಒಂದು ವೇಳೆ ಬೀದಿ ಪ್ರಾಣಿಗಳಿಗೆ ಆಹಾರ ನೀಡಲು ಮುಂದೆ ಬಂದರು ಅದು ಒಂದು ಅಥವಾ ಎರಡು ದಿನಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಕೋಲಾರ ಜಿಲ್ಲೆಯ ವ್ಯಕ್ತಿಯೊಬ್ಬರು ಬರೊಬ್ಬರಿ 30 ವರ್ಷಗಳಿಂದ ಬೀದಿ ಬದಿಯ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದಾರೆ. ಬೀದಿ ಬದಿಯ ಪ್ರಾಣಿಗಳೆಂದರೆ ಈ ವ್ಯಕ್ತಿಗೆ ಪಂಚಪ್ರಾಣ, ಅದರಲ್ಲೂ ನಾಯಿ, ಕೋತಿಗಳೆಂದರೆ ಸಾಕು ಎಲ್ಲಿಲ್ಲದ ಕಾಳಜಿ. ತಮಗೆ ತಿನ್ನಲು ಆಹಾರ ಸಿಗದೇ ಹೋದರು ಬೀದಿ ಪ್ರಾಣಿಗಳಿಗೆ ಮಾತ್ರ ನಿತ್ಯವೂ ಹಾಲು ಅನ್ನ ಹಾಕುತ್ತಾರೆ.

ಕೆಜಿಎಫ್​ನಲ್ಲಿ ವಿಭಿನ್ನ ಪ್ರಾಣಿ ಪ್ರಿಯ
ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್​ಸನ್​ ಪೇಟೆಯ ಮನೋಹರ್ ಲಾಲ್ ಎಂಬುವವರು ಕಳೆದ 30 ವರ್ಷಗಳಿಂದ ಇಲ್ಲಿನ ನೂರಾರು ಬೀದಿ ನಾಯಿಗಳಿಗೆ ಮತ್ತು ಕೋತಿಗಳಿಗೆ ಆಹಾರ ನೀಡುವ ಮೂಲಕ ಆಸರೆಯಾಗಿದ್ದಾರೆ. ಮನೋಹರ್ ಲಾಲ್ ಅವರಿಗೆ ಯಾರಿಲ್ಲದೆ ತಾವೇ ಬದುಕಲು ಕಷ್ಟವಾಗಿರುವ ಪರಿಸ್ಥಿತಿಯಲ್ಲಿದ್ದಾರೆ. ಆದರೂ ಇವರು ಪ್ರತಿ ದಿನ ಮಾರುಕಟ್ಟೆಯನ್ನೆಲ್ಲಾ ಸುತ್ತಾಡಿ, ತನಗೆ ಪರಿಚಯಸ್ಥರು ಸೇರಿದಂತೆ ಹತ್ತಾರು ಜನರಿಂದ ಹಾಲು-ಹಣ್ಣನ್ನು ಸಂಗ್ರಹಿಸಿಕೊಂಡು ಬೆಳಗ್ಗೆ ಒಂದು ಆಟೋದಲ್ಲಿ ಹೋಗಿ ಬೀದಿ ಪ್ರಾಣಿಗಳಿಗೆ ನೀಡುತ್ತಿದ್ದಾರೆ.

ವಿವಿಧ ಬಡಾವಣೆಗಳ ನಾಯಿಗಳಿಗೆ ಮತ್ತು ಕೋತಿಗಳಿಗೆ ಹಾಲು ಬ್ರೆಡ್​​ ನೀಡುವುದಷ್ಟೇ ಅಲ್ಲ, ವಿವಿಧ ಕಾಯಿಲೆಗಳಿಂದ ನರಳುತ್ತಿರುವ ನಾಯಿಗಳಿಗೆ ಔಷಧಿ ಉಪಚಾರಗಳನ್ನು ಮಾಡುವ ಜತೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸುತ್ತಾರೆ. ಮನುಷ್ಯನಲ್ಲಿ ಕಾಣದ ಪ್ರೀತಿಯನ್ನು ನಾವು ಪ್ರಾಣಿಗಳಲ್ಲಿ ಕಾಣಬಹುದು ಎಂಬ ಧ್ಯೇಯದೊಂದಿಗೆ ಮನೋಹರ್​ ಲಾಲ್​ ಪ್ರಾಣಿಗಳಿಗೆ ಆಸರೆಯಾಗಿದ್ದಾರೆ.

ಮನೋಹರ್​ ಲಾಲ್​ ಅವರ ಪ್ರಾಣಿ ಪ್ರೇಮಕ್ಕೆ ಜನರ ಶ್ಲಾಘನೆ
ಯಾವುದೇ ಸ್ವಾರ್ಥವಿಲ್ಲದೆ ಬೀದಿ ನಾಯಿ ಮತ್ತು ಕೋತಿಗಳನ್ನು ಮಕ್ಕಳಂತೆ ಪಾಲನೆ ಮಾಡುವ ಇವರ ಕೆಲಸಕ್ಕೆ ಕೆಜಿಎಫ್​ ನಗರದ ಹಲವಾರು ಜನರು ಪ್ರಶಂಸೆ ವ್ಯಕ್ತಪಡಿಸುವ ಜತೆಗೆ ಇವರ ನೆರವಿಗೆ ನಿಂತಿದ್ದಾರೆ. ಪ್ರತಿನಿತ್ಯ ಮನೋಹರ್​ ಲಾಲ್​ ನಗರದ ಮಾರುಕಟ್ಟೆಯ ವಿವಿಧ ಜನರ ಬಳಿಗೆ ಹೋಗಿ ಅವರು ಕೊಡು ಅಷ್ಟೋ ಇಷ್ಟು ಹಾಲು, ಹಣ್ಣು ಆಹಾರವನ್ನು ಸಂಗ್ರಹಿಸಿಟ್ಟಿಕೊಂಡು, ಮುಂಜಾನೆ ಐದಾರು ಗಂಟೆಗೆ ಆಟೋ ಒಂದರಲ್ಲಿ ತುಂಬಿಸಿಕೊಂಡು ನಗರದ ವಿವಿಧೆಡೆ ನಾಯಿಗಳಿಗೆ ನೀಡುತ್ತಾರೆ. ಹೀಗೆ ಹತ್ತಾರು ವರ್ಷಗಳಿಂದ ಮನೋಹರ್​ ಲಾಲ್​ ಮಾಡಿಕೊಂಡು ಬಂದಿರುವ ಕೆಲಸಕ್ಕೆ ಕೆಜಿಎಫ್​ ನಗರದ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪ್ರಾಣಿ ಹಿಂಸೆ, ಬೀದಿ ನಾಯಿಗಳನ್ನು ಕೊಲ್ಲುವುಕ್ಕೆ ಮನೋಹರ್​ ಲಾಲ್​ ವಿರೋಧ!
ಇನ್ನು ನಗರದಲ್ಲಿ ಬೀದಿ ನಾಯಿಗಳನ್ನು ಕೊಲ್ಲುವುದು ಹಾಗೂ ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ಸಹಿಸದ ಇವರು ಬೀದಿನಾಯಿಗಳ ರಕ್ಷಣೆಗಾಗಿ ಅದೆಷ್ಟೋ ಹೋರಾಟಗಳನ್ನು ಮಾಡಿದ್ದಾರೆ. ನಗರಸಭೆ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳು ಬೀದಿ ನಾಯಿಗಳನ್ನು ಹಿಡಿಯುವುದು, ಸಾಯಿಸುವುದು ಮಾಡಿದಾಗ ಅದರ ವಿರುದ್ಧ ಹೋರಾಟಗಳನ್ನು ಮಾಡಿದ್ದಾರೆ.

ಒಟ್ಟಿನಲ್ಲಿ ಬೀದಿ ನಾಯಿಗಳಿಗೆ ಅನ್ನ ಹಾಕುವವರಿಗಿಂತ ಕಲ್ಲು ಹೊಡೆಯುವ ಜನರೇ ಹೆಚ್ಚಿರುವ ಈ ಕಾಲದಲ್ಲಿ ನಾಯಿ -ಕೋತಿಗಳಿಗೆ ನಿತ್ಯ ಅನ್ನ, ಹಾಲು ಹಾಕುವ ಮೂಲಕ ತನ್ನ ಪ್ರಾಣಿ ಪ್ರೀತಿ ತೋರಿಸಿ ಮಾನವೀಯತೆ ಮೆರೆಯುತ್ತಿರುವ ಮನೋಹರ್​ ಲಾಲ್​ ರವರ ಕೆಲಸ ನಿಜಕ್ಕೂ ಶ್ಲಾಘಿಸುವಂತದ್ದು.

ಇದನ್ನೂ ಓದಿ:

ಕೊರೊನಾ ಸಂಕಷ್ಟ: ವಿಶ್ವವಿಖ್ಯಾತ ಹಂಪಿ ವಾನರ ನೆರವಿಗೆ ಧಾವಿಸಿದ ಯುವಪಡೆ

ಜಾನುವಾರುಗಳು, ನಾಯಿಗಳಿಗೆ ಆಹಾರ ಹಾಕಿ ಮಾನವೀಯತೆ ಮೆರೆದ ಗದಗ ಟ್ರಾಫಿಕ್ ಪೊಲೀಸರು