ಮಂಡ್ಯ: ತನ್ನ ಅಂತ್ಯಕ್ರಿಯೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಬರುವಂತೆ Death Note ಬರೆದಿಟ್ಟು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅಭಿಮಾನಿಯ ಕೊನೆಯಾಸೆ ಈಡೇರಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ತನ್ನ ಅಭಿಮಾನಿಯ ಕೊನೆ ಆಸೆಯನ್ನು ಸಿದ್ದರಾಮಯ್ಯ ಈಡೇರಿಸಿದ್ದಾರೆ. ಜೊತೆಗೆ ನಟ ಯಶ್ ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಅಭಿಮಾನಿ ಆತ್ಮಹತ್ಯೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಪಾಪ ಆತ ನನಗೆ ಗೊತ್ತಿಲ್ಲದೆಯೇ ದೊಡ್ಡ ಅಭಿಮಾನಿಯಾಗಿದ್ದ. ಅಂತ್ಯಕ್ರಿಯೆಗೆ ಬರಬೇಕು ಎಂದು ಡೆತ್ ನೋಟ್ ಬರೆದುಕೊಂಡಿದ್ದ. ನನಗೆ ಈ ವಿಷಯ ತಿಳಿದ ಮೇಲೆ ಅಂತಿಮ ದರ್ಶನ ಪಡೆಯಲು ಬಂದಿದ್ದೇನೆ. ನನಗೆ ಆತ ಅಷ್ಟೇನು ಪರಿಚಯ ಇರಲಿಲ್ಲ. ಅಭಿಮಾನಿಯಾಗಲಿ; ಆಗದೇ ಇರಲಿ, ಅಂತ್ಯಕ್ರಿಯೆಗೆ ಬರಬೇಕು ಎಂದು ಬರೆದುಕೊಂಡಿದ್ದ. ಹಾಗಾಗಿ ನಾನು ಬಂದಿದ್ದೇನೆ. ಪಾಪ ಸಾಮಾನ್ಯ ಕುಟುಂಬದಿಂದ ಬಂದಿದ್ದು, ಮನೆಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಆತ. ಈತನ ಸಾವಿನಿಂದ ಮನೆಯವರಿಗೆ ನಷ್ಟ ಆಗಿದೆ. ಆತನ ತಾಯಿ, ಅಣ್ಣನನ್ನು ನಾನು ಮಾತನಾಡಿಸಿದೆ. ಪ್ರಾಣ ಕಳೆದುಕೊಂಡಿರುವುದು ಕುಟುಂಬಕ್ಕೆ ಮಾತ್ರ ಅಲ್ಲ ಸಮಾಜಕ್ಕೂ ನಷ್ಟವಾಗಿದೆ.ಆತನ ಆತ್ಮಕ್ಕೆ ಶಾಂತಿ ಸಿಗಲಿ. ಆತ್ಮಹತ್ಯೆ ಯಾವುದೇ ಸಮಸ್ಯೆಗೂ ಪರಿಹಾರ ಅಲ್ಲ. ಎಷ್ಟೇ ತೊಂದರೆ ಇರಲಿ, ಸಮಸ್ಯೆ ಇರಲಿ, ಮನೆಯವರ ಜೊತೆ ಸ್ನೇಹಿತರ ಜೊತೆ ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ತಮ್ಮ ಅಭಿಮಾನಿಯ ಸಾವಿಗೆ ಮಿಡಿದಿದ್ದಾರೆ.
ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ- ನಟ ಯಶ್
ಆತ್ಮಹತ್ಯೆಗೆ ಶರಣಾದ ರಾಮಕೃಷ್ಣ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದರು. ಅಂತ್ಯಕ್ರಿಯೆಗೆ ಸಿದ್ದರಾಮಯ್ಯ, ಯಶ್ ಬರುವಂತೆ ಮನವಿ ಮಾಡಿದ್ದರು. ಹಾಗಾಗಿ, ಅಭಿಮಾನಿಯ ಅಂತಿಮ ದರ್ಶನ ಪಡೆಯಲು ಸಿದ್ದರಾಮಯ್ಯ ತೆರಳಿದ್ದಾರೆ. ನಟ ಯಶ್ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ – ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ. ರಾಮಕೃಷ್ಣ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದಿದ್ದಾರೆ.
ಅಭಿಮಾನಿಗಳ ಅಭಿಮಾನವೇ ನಮ್ಮ ಬದುಕು.. ಜೀವನ.. ಹೆಮ್ಮೆ..
ಆದರೆ ಮಂಡ್ಯದ ರಾಮಕೃಷ್ಣನ ಅಭಿಮಾನಕ್ಕೆ ಹೆಮ್ಮೆಪಡಲು ಸಾಧ್ಯವೇ…
ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ.. ಕೋಡಿ ದೊಡ್ಡಿ ರಾಮಕೃಷ್ಣನ ಆತ್ಮಕ್ಕೆ ಚಿರಶಾಂತಿ ಸಿಗಲಿ…
ಓಂ ಶಾಂತಿ…— Yash (@TheNameIsYash) February 18, 2021
ರಾಮಕೃಷ್ಣ ಡೆತ್ನೋಟ್ನಲ್ಲಿ, ನನ್ನನ್ನು ದಯವಿಟ್ಟು ಕ್ಷಮಿಸಿ ಬಿಡಿ. ಏಕೆಂದರೆ ನಿಮಗೆಲ್ಲಾ ತುಂಬಾ ನೋವು ಕೊಟ್ಟಿದ್ದೀನಿ. ಅಮ್ಮನಿಗೆ ಒಬ್ಬ ಮಗನಾಗಿ, ಅಣ್ಣನಿಗೆ ತಮ್ಮನಾಗಿ, ಗೆಳೆಯರಿಗೆ ಒಂದೊಳ್ಳೆ ಸ್ನೇಹಿತನಾಗಿ, ನನ್ನ ಹುಡುಗಿಗೆ ಜೊತೆಗಾರನಾಗಿ, ಬಾಳ ಸಂಗಾತಿಯಾಗಲು ವಿಫಲನಾಗಿದ್ದೇನೆ. ಹಾಗಾಗಿ, ನಾನು ನಿಮ್ಮಿಂದ ದೂರವಾಗಬೇಕೆಂದು ತೀರ್ಮಾನಿಸಿ ನನ್ನ ಇಚ್ಛೆಯಂತೆ ಮರಣ ಹೊಂದುತ್ತಿದ್ದೇನೆ ಎಂದು ರಾಮಕೃಷ್ಣ ಪತ್ರದಲ್ಲಿ ಬರೆದುಕೊಂಡಿದ್ದರು.
ನನ್ನ ಅಂತ್ಯಕ್ರಿಯೆಗೆ ರಾಕಿಂಗ್ ಸ್ಟಾರ್ ಯಶ್ ಅಣ್ಣ ಭಾಗವಹಿಸಬೇಕು. ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸರ್ರವರು ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕು. ಏಕೆಂದರೆ ನಿಮ್ಮಿಬ್ಬರ ಅಪ್ಪಟ ಅಭಿಮಾನಿ ನಾನು. ದಯವಿಟ್ಟು ಕೇಳಿಕೊಳ್ಳುತ್ತೇನೆ ನನ್ನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ. ನನ್ನ ಕೊನೆಯ ಆಸೆ ಈಡೇರಿಸಿ ಪ್ಲೀಸ್. ಮಾಧ್ಯಮ ಮಿತ್ರರು ಸಹ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದರು. 15 ವರ್ಷದ ಹಿಂದೆ ರಾಮ ಕೃಷ್ಣ ತಂದೆ ಚಂದ್ರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ಯುವಕನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿರುವ ಸಿದ್ದರಾಮಯ್ಯ?
ಯುವಕ ಆತ್ಮಹತ್ಯೆ; ಸಿದ್ದರಾಮಯ್ಯ, ಯಶ್ ಅಂತ್ಯಸಂಸ್ಕಾರಕ್ಕೆ ಬರುವಂತೆ ಮನವಿ, 15 ವರ್ಷದ ಹಿಂದೆ ತಂದೆ ಸಹ ಆತ್ಮಹತ್ಯೆ..
Published On - 2:53 pm, Thu, 18 February 21