ಮಂಡ್ಯ: ಪ್ರೇಯಸಿ ಮನೆ ಮುಂದೆಯೇ ಸ್ಫೋಟಿಸಿಕೊಂಡು ಪ್ರಿಯಕರ ಆತ್ಮಹತ್ಯೆ

| Updated By: ರಮೇಶ್ ಬಿ. ಜವಳಗೇರಾ

Updated on: Dec 29, 2024 | 1:09 PM

ಪ್ರೀತಿಸುತ್ತಿದ್ದ ಅಪ್ರಾಪ್ತೆ ಮನೆ ಮುಂದೆಯೇ ಜಿಲೆಟಿನ್ ಸ್ಫೋಟಿಸಿಕೊಂಡು ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸ್ಫೋಟದ ‌ತೀವ್ರತೆಗೆ ಯುವಕನ ಹೊಟ್ಟೆಯ ಭಾಗ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪ್ರಿಯತಮೆಗಾಗಿ ಜೈಲಿಗೆ ಹೋಗಿ ಬಂದಿದ್ದ. ಆದ್ರೆ, ಪ್ರೇಯಸಿ ಸಂಪರ್ಕಕ್ಕೆ ಸಿಗದಿದ್ದರಿಂದ ಮನನೊಂದು ಜೀವ ಕಳೆದುಕೊಂಡಿದ್ದಾನೆ. ಏನಿದು ಪ್ರಕರಣ| ಯುವಕ, ಪ್ರೇಯಸಿ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ? ಮಂಡ್ಯ ಎಸ್​ಪಿ ಹೇಳಿದ್ದೇನು? ಎನ್ನುವ ವಿವರ ಇಲ್ಲಿದೆ,

ಮಂಡ್ಯ: ಪ್ರೇಯಸಿ ಮನೆ ಮುಂದೆಯೇ ಸ್ಫೋಟಿಸಿಕೊಂಡು ಪ್ರಿಯಕರ ಆತ್ಮಹತ್ಯೆ
ರಾಮಚಂದ್ರು
Follow us on

ಮಂಡ್ಯ, (ಡಿಸೆಂಬರ್ 29): ಪ್ರೀತಿಸುತ್ತಿದ್ದ ಅಪ್ರಾಪ್ತೆ ಮನೆ ಮುಂದೆಯೇ ಜಿಲೆಟಿನ್ ಸ್ಫೋಟಿಸಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಗ್ರಾಮವೊಂದರಲ್ಲಿ‌ ನಿನ್ನೆ(ಶನಿವಾರ) ನಡೆದಿದೆ. ರಾಮಚಂದ್ರು (21) ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ. ಕಲ್ಲು ಗಣಿಗಾರಿಕೆಗೆ ಬಳಸುವ ಜಿಲೆಟಿನ್ ಸ್ಫೋಟಿಸಿಕೊಂಡು ರಾಮಚಂದ್ರು ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಿಲೆಟಿನ್ ಸ್ಫೋಟಕ್ಕೆ ಯುವಕನ ಹೊಟ್ಟೆಯ ಭಾಗ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಒಂದು ವರ್ಷದ ಹಿಂದೆ ಅಪ್ರಾಪ್ತೆ ಕರೆದೊಯ್ದ ಹಿನ್ನೆಲೆಯಲ್ಲಿ ರಾಮಚಂದ್ರು ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿತ್ತು. ಫೋಕ್ಸೋ ಕೇಸ್‌ನಲ್ಲಿ 6 ತಿಂಗಳು ಜೈಲುವಾಸ ಅನುಭವಿಸಿದ್ದ. ಬಳಿಕ 2 ಕುಟುಂಬಗಳ ರಾಜಿ ಸಂಧಾನ ಬಳಿಕ ಕೇಸ್ ವಾಪಾಸ್ ಪಡೆಯಲಾಗಿತ್ತು. ನಂತರ ಅಪ್ರಾಪ್ತ ಪ್ರಿಯತಮೆ ರಾಮಚಂದ್ರನ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಮನನೊಂದ ರಾಮಚಂದ್ರ ನಿನ್ನೆ ಆಕೆಯ ಮುನೆಯ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಲ್ಲುಗಣಿಗಾರಿಕೆಗೆ ಬಳಸುವ ಜಿಲೆಟಿನ್ ಸ್ಪೋಟಿಸಿಕೊಂಡು ಸೂಸೈಡ್‌ ಮಾಡಿಕೊಂಡಿದ್ದು, ಸ್ಪೋಟಕದ ಬಗ್ಗೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಮದ್ವೆಯಾಗಿದ್ದ ಆಂಟಿ ಜತೆ ಲವ್ವಿಡವ್ವಿ: ಕರೆ ಸ್ವೀಕರಿಸಲಿಲ್ಲ ಎಂದು ಮನೆಗೆ ಹೋದ ಯುವಕ ಆಸ್ಪತ್ರೆ ಸೇರಿದ

ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳಕ್ಕೆ ಬಾಂಬ್ ಪತ್ತೆ ಹಾಗೂ ‌ನಿಷ್ಕ್ರಿಯ ದಳ‌ ದೌಡಾಯಿಸಿ ಸ್ಫೋಟಕ್ಕೆ ಬಳಸಿರುವ ವಸ್ತು ಹಾಗೂ ತೀವ್ರತೆ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಕರಣದ ಬಗ್ಗೆ ಮಂಡ್ಯ ಎಸ್ ಪಿ ಹೇಳಿದ್ದೇನು?

ಇನ್ನು ಈ ಪ್ರಕರಣದ ಬಗ್ಗೆ ಮಂಡ್ಯ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಯುವಕ ಜಿಲೆಟಿನ್ ಸ್ಟೋಟಿಸಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ . ಈ ಹಿಂದೆ ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತಯನ್ನೆ ಮನೆಯಿಂದ ಕರೆದುಕೊಂಡು ಹೋಗಿದ್ದ. ಈ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರು ತಿಂಗಳು ಜೈಲಿನಲ್ಲಿ ಇದ್ದು ಬಂದಿದ್ದಾನೆ. ಆನಂತರ ಕುಟುಂಬಸ್ಥರು ರಾಜೀ ಮಾಡಿಕೊಂಡಿಕೊಂಡಿದ್ದರು . ಮೃತ ಯುವಕ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ ಸಹ ಸ್ನೇಹಿತರ ಜೊತೆ ಮದ್ಯಸೇವನೆ ಕೂಡ ಮಾಡಿದ್ದ. ಸ್ಟೋಟಕ ಎಲ್ಲಿ ಸಿಕ್ಕಿದೆ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಸ್ಪೋಟಕ ನೀಡಿದವರ ವಿರುದ್ಧ ಕೂಡ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ