ಕೋಟಿಗಟ್ಟಲೇ ಅನುದಾನ ಕೊಟ್ಟರೂ ನಿಲ್ಲದ ಸಮಸ್ಯೆ; 5 ದಿನಗಳಿಂದ ಮಂಡ್ಯದ ಮೈಶುಗರ್ ಕಾರ್ಖಾನೆ ಸ್ಥಗಿತ

ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆ, ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಕಾರ್ಖಾನೆ. ಈ ಕಾರ್ಖಾನೆ ಮಂಡ್ಯ ಜಿಲ್ಲೆಯ ರೈತರ ಜೀವನಾಡಿ. ನಷ್ಟದಲ್ಲಿ ಇದ್ದ ಕಾರ್ಖಾನೆಗೆ ರಾಜ್ಯ ಸರ್ಕಾರ ಜೀವ ತುಂಬಿತ್ತು. ಈಗಾಗಲೇ ಈ ವರ್ಷದ ಕಬ್ಬು ಅರಿಯುವಿಕೆ ಕೂಡ ಆರಂಭವಾಗಿದೆ. ಆದರೆ, ಆರಂಭದಲ್ಲೇ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಕಳೆದ ಐದು ದಿನಗಳಿಂದ ಕಬ್ಬು ಅರೆಯುವಿಕೆ ಸ್ಥಗಿತವಾಗಿದೆ. ಇದರಿಂದ ಬಿಲಿಸಿನಲ್ಲಿ ಕಬ್ಬು ಒಣಗುತ್ತಿದ್ದು, ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ

ಕೋಟಿಗಟ್ಟಲೇ ಅನುದಾನ ಕೊಟ್ಟರೂ ನಿಲ್ಲದ ಸಮಸ್ಯೆ; 5 ದಿನಗಳಿಂದ ಮಂಡ್ಯದ ಮೈಶುಗರ್ ಕಾರ್ಖಾನೆ ಸ್ಥಗಿತ
ಐದು ದಿನಗಳಿಂದ ಮಂಡ್ಯದ ಮೈಶುಗರ್ ಕಾರ್ಖಾನೆ ಸ್ಥಗಿತ
Follow us
ಪ್ರಶಾಂತ್​ ಬಿ.
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 20, 2024 | 9:07 PM

ಮಂಡ್ಯ, ಆ.20: ಜಿಲ್ಲೆಯ ರೈತರ ಜೀವನಾಡಿ, ರಾಜ್ಯದ ಏಕೈಕ ಸರ್ಕಾರಿ ಸಾಮ್ಯದ ಸಕ್ಕರೆ ಕಾರ್ಖಾನೆ ಅಂದರೆ ಅದು ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆ(mandya sugar factory). ಸಾಕಷ್ಟು ವಿವಾದ, ನಷ್ಟ, ಭ್ರಷ್ಟಚಾರದಿಂದಾಗಿ ಖ್ಯಾತಿಯನ್ನು ಕೂಡ ಪಡೆದಿದೆ. ಅಷ್ಟೇ ಅಲ್ಲದೆ ಮುಚ್ಚಿಯೇ ಹೋಗಿದ್ದ ಕಾರ್ಖಾನೆಗೆ ಸರ್ಕಾರ ಮರು ಜೀವ ತುಂಬಿ, ಆರ್ಥಿಕ ಸಹಾಯ ನೀಡಿ, ಮತ್ತೆ ಕಾರ್ಖಾನೆ ಪುನಶ್ಛೇತನ ಮಾಡಲಾಗಿದೆ. 2024-25ನೇ ಸಾಲಿನ ಕಬ್ಬು ಅರೆಯುವಿಕೆಗೆ ಚಾಲನೆ ಕೂಡ ನೀಡಲಾಗಿದೆ. ಆದರೆ, ಆರಂಭದಲ್ಲೇ ತಾಂತ್ರಿಕ ಸಮಸ್ಯೆ ಎದುರಾಗಿ ಕಳೆದ ಐದು ದಿನಗಳಿಂದ ಕಬ್ಬು ಅರಿಯುವಿಕೆಯನ್ನ ಆಡಳಿತ ಮಂಡಳಿ ಸ್ಥಗಿತ ಮಾಡಿದೆ.

ಬಿಸಿಲಿನಲ್ಲಿ ಒಣಗುತ್ತಿದೆ ರೈತರು ಬೆಳೆದ ಕಬ್ಬು

ತಾಂತ್ರಿಕ ಸಮಸ್ಯೆಯ ಕಾರಣ ನೀಡಿ, ಕಬ್ಬು ಅರೆಯುವಿಕೆ ಸ್ಥಗಿತಗೊಂಡಿದ್ದು, ಇದರಿಂದಾಗಿ ಕಷ್ಟಪಟ್ಟು ರೈತರು ಬೆಳೆದಿದ್ದ ಕಬ್ಬು ಬಿಸಿಲಿನಲ್ಲಿ ಒಣಗುತ್ತಿದೆ. ಇದೀಗ ಲಾಭವಲ್ಲ, ತಮ್ಮ ಬಂಡವಾಳವೂ ಬರದ ಸ್ಥಿತಿಗೆ ಅನ್ನದಾತ ಬಂದಿದ್ದು, ಕಾರ್ಖಾನೆಯ ಅಧಿಕಾರಿಗಳ ವಿರುದ್ದ ರೈತರು ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ:ಮುಚ್ಚುವ ಸ್ಥಿತಿಗೆ ಬಂದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ; ಬೀದಿಗೆ ಬಂತು ಕಾರ್ಮಿಕರ ಬದುಕು 

ಅಂದಹಾಗೆ 1932ರಲ್ಲಿ ಸ್ಥಾಪನೆಯಾಗಿರುವ ಮೈಶುಗರ್ ಸಕ್ಕರೆ ಕಾರ್ಖಾನೆ ಸಾಕಷ್ಟು ಹಳೆಯದಾದ ಕಾರ್ಖಾನೆ. ಈ ಹಿಂದೆ ಕಾರ್ಖಾನೆ ಸಾಕಷ್ಟು ನಷ್ಟ ಅನುಭವಿಸಿತ್ತು. ಕೆಲ ವರ್ಷಗಳ ಕಾಲ ಬಂದ್ ಕೂಡ ಆಗಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ 50 ಕೋಟಿ ಹಣವನ್ನ ಬಿಡುಗಡೆ ಮಾಡಿತ್ತು. ಹೀಗಾಗಿ ಕಳೆದ ವರ್ಷ 2 ಲಕ್ಷ 41 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಈ ಬಾರಿ ಕೂಡ ರೈತರ ಬಳಿ ಕಬ್ಬು ಒಪ್ಪಿಗೆಯಾಗಿದ್ದು, 2 ಲಕ್ಷ 50 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿಯನ್ನ ಹೊಂದಲಾಗಿದೆ. ಜೂನ್ 30ರಂದೇ ಕಬ್ಬು ಅರಿಯುವಿಕೆಗೆ ಚಾಲನೆ ಸಹ ನೀಡಲಾಗಿದೆ. ಆಗಸ್ಟ್ 2ರಿಂದ ಕಬ್ಬು ಅರೆಯುವಿಕೆ ಕೆಲಸ ನಡೆಯುತ್ತಿದೆ. ಹೀಗಾಗಿ ಒಪ್ಪಿಗೆ ಮಾಡಿಕೊಂಡ ರೈತರು ಎತ್ತಿನ ಗಾಡಿಗಳ ಮೂಲಕ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುತ್ತಿದ್ದಾರೆ. ಆದರೆ, ತಾಂತ್ರಿಕ ಕಾರಣವನ್ನ ಮುಂದಿಟ್ಟು ಐದು ದಿನಗಳಿಂದ ಕಾರ್ಖಾನೆಯನ್ನ ಸ್ಥಗಿತ ಮಾಡಲಾಗಿದೆ.

ಸಂಕಷ್ಟಕ್ಕೆ ಸಿಲುಕಿದ ಅನ್ನದಾತ

ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈಗಾಗಲೇ ಒಪ್ಪಿಗೆ ಆಗಿರುವ ಹಿನ್ನೆಲೆಯಲ್ಲಿ ಕಬ್ಬನ್ನ ಬೇರೆಯವರಿಗೂ ಮಾರಾಟ ಮಾಡದಂತಹ ಪರಿಸ್ಥಿತಿಯಲ್ಲಿ ರೈತರು ಇದ್ದಾರೆ. ಪದೇ ಪದೇ ಈ ರೀತಿಯ ಘಟನೆಗಳು ಕಾರ್ಖಾನೆಯಲ್ಲಿ ನಡೆಯುತ್ತಿದ್ದು, ಕಾರ್ಮಿಕರಿಗೂ ಕೂಡ ಕೆಲಸ ಇಲ್ಲದಂತಾಗಿದೆ. ಒಟ್ಟಾರೆ ಸಾಕಷ್ಟು ವಿವಾದಗಳಿಂದ ಖ್ಯಾತಿಗಳಿಸಿರುವ ಮೈಶುಗರ್ ಕಾರ್ಖಾನೆ, ಪ್ರಾರಂಭದಲ್ಲೇ ಯಡವಟ್ಟು ಮಾಡಿಕೊಂಡು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಈ ಸಮಸ್ಯೆ ಬಗೆಹರಿಯುತ್ತಾ ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ