ಮಂಡ್ಯ: ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Shrirangapattana) ತಾಲೂಕಿನ ಸಂಗಮ ಬಳಿಯ ಕಾವೇರಿ ನದಿಯಲ್ಲಿ (Kaveri River) ಸ್ನಾನ ಮಾಡಲು ಹೋಗಿ ನದಿಯಲ್ಲಿ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ. ಬೆಂಗಳೂರಿನ (Bengaluru) ಯಲಹಂಕ ನಿವಾಸಿ ಅಶೋಕ್(26) ನೀರುಪಾಲಾದ ಯುವಕ. ಕುಟುಂಬಸ್ಥರು, ಸ್ನೇಹಿತರೊಂದಿಗೆ ಯುವಕ ಪೂಜೆಗಾಗಿ ಬಂದಿದ್ದನು. ಬೆಳಗ್ಗೆ ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿದೆ. ನದಿ ನೀರಿನ ರಭಸ ಹೆಚ್ಚಿದ್ದ ಕಾರಣ ಯುವಕ ಕೊಚ್ಚಿಹೋಗಿದ್ದಾನೆ.
ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ 30ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪ್ರತ್ಯೇಕ ತಂಡಗಳಾಗಿ ಬೋಟ್, ಪಾತಾಳ ಗರಡಿ ಬಳಸಿ ಹುಡುಕಾಟ ನಡೆಸುತ್ತಿದ್ದಾರೆ. ಸಂಗಮ ಬಳಿ ಅಶೋಕ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ SDRF ಅಗ್ನಿಶಾಮಕ ಸಿಬ್ಬಂಧಿ ಸ್ಥಳಕ್ಕೆ ಬಂದಿದ್ದು, ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಬೀದಿಬದಿ ವ್ಯಾಪಾರಸ್ಥರ ತಳ್ಳುಗಾಡಿ ತೆರವು ಕಾರ್ಯ; ಆತ್ಮಹತ್ಯೆಗೆ ಯತ್ನ
ಶಿವಮೊಗ್ಗ : ಬೀದಿಬದಿ ವ್ಯಾಪಾರಸ್ಥರ ತಳ್ಳುಗಾಡಿ ತೆರವು ಕಾರ್ಯ ಹಿನ್ನೆಲೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕ್ರಮ ಖಂಡಿಸಿ ವ್ಯಾಪಾರಸ್ಥರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಪಟ್ಟಣದಲ್ಲಿ ನಡೆದಿದೆ. ವೀರಭದ್ರಪ್ಪ ಮತ್ತು ಶಂಕ್ರಪ್ಪ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಾಪಾರಸ್ಥರು.
ಅಸ್ವಸ್ಥ ವೀರಭದ್ರಪ್ಪಗೆ ಶಿಕಾರಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಳೆಗಾಲದಲ್ಲಿ ತೆರವುಗೊಳಿಸದಂತೆ ಶಾಸಕ ಕುಮಾರ ಬಂಗಾರಪ್ಪ ಅವರಿಗೆ ಬೀದಿ ಬದಿ ವ್ಯಾಪಾರಸ್ಥರು ಮನವಿ ಮಾಡಿದ್ದರು.
Published On - 4:27 pm, Wed, 13 July 22