ಮಂಡ್ಯ, ಫೆ.24: ಲೋಕ ಸಮರಕ್ಕೆ (Lok Sabha Election) ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಮಧ್ಯೆ ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆ ಸಂಬಂಧ ದೆಹಲಿಯಲ್ಲಿ ಬಿಜೆಪಿ ನಾಯಕರ ಜೊತೆ ದಳಪತಿಗಳು ಮಾತುಕತೆ ನಡೆಸಿದ್ದಾರೆ. ಇದೀಗ ರಾಜ್ಯದ ಗಮನ ಸೆಳೆದಿರೋ ಮಂಡ್ಯ ಕ್ಷೇತ್ರ ಬಹುತೇಕ ಜೆಡಿಎಸ್ಗೆ ಫಿಕ್ಸ್ ಆಗಿದೆ. ಆದರೆ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ಗೆ ಕಣ್ಣಿಟ್ಟಿರೋ ರೆಬಲ್ ಲೇಡಿ ಸುಮಲತಾ (Sumalatha Ambareesh), ನಾನು ಸ್ವರ್ಧೆ ಮಾಡೇ ಮಾಡುತ್ತೇನೆ ಎಂದು ಹೇಳುವ ಮೂಲಕ ಸವಾಲು ಒಡ್ಡಿದ್ದಾರೆ. ಹೀಗಾಗಿ ರೋಚಕ ತಿರುವಿನತ್ತ ಮಂಡ್ಯ ಲೋಕಾ ಅಖಾಡ ತಿರುಗಿದೆ. ಸಂಸದೆ ಸುಮಲತಾ ಅವರ ನಡೆ ತೀವ್ರ ಕುತೂಹಲ ಮೂಡಿಸಿದೆ. ಇಂದು ಪ್ರಮುಖ ಮುಖಂಡರ ಸಭೆ ಕರೆಯಲಾಗಿದೆ.
ಸುಮಲತಾ ಅವರು ಮಂಡ್ಯದಿಂದ ಸ್ಪರ್ಧೆ ಖಚಿತ ಪಡಿಸಿದ ಬೆನ್ನಲ್ಲೆ ಮಹತ್ವದ ಸಭೆ ಕರೆದಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಬೆಂಗಳೂರು ನಿವಾಸದಲ್ಲಿ ಪ್ರಮುಖ ಮುಖಂಡರ ಜೊತೆ ಸುಮಲತಾ ಅವರು ಸಭೆ ನಡೆಸಲಿದ್ದಾರೆ. ಅಂಬರೀಶ್ ಹಾಗೂ ಸುಮಲತಾರ ಪ್ರಮುಖ ಬೆಂಬಲಿಗರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಕೆಲ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಕೂಡ ಸಭೆಯಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. ಚುನಾವಣೆಗೆ ಸಿದ್ದತೆ ಕುರಿತು ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ಟಿಕೆಟ್ ತಪ್ಪಿದ್ರೆ ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತೆ.
ಮುಖಂಡರೊಂದಿಗೆ ಸಾಧಕ-ಭಾದಕಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ನಿನ್ನೆಯಷ್ಟೆ ಸ್ಪರ್ಧೆ ಖಚಿತಪಡಿಸಿದ್ದ ಸುಮಲತಾ ಅಂಬರೀಶ್ ಅವರು ಇದೀಗ ಸಭೆ ಕರೆದಿರುವುದರಿಂದ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆ ಶುರುವಾಗಿದೆ. ಮುಖಂಡರೊಂದಿಗೆ ಸಮಾಲೋಚನೆ ಬಳಿಕ ಮುಂದಿನ ನಿರ್ಧಾರ ಪ್ರಕಟಿಸುತ್ತಾರಾ? ಅಥವಾ ಬಿಜೆಪಿ ನಡೆ ನೋಡಿಕೊಂಡು ಬಳಿಕ ಮುಂದಿನ ಹೆಜ್ಜೆ ಇಡುತ್ತಾರಾ? ಎಂಬ ಬಗ್ಗೆ ಸ್ವಾಭಿಮಾನಿ ಪಡೆಗೆ ಸುಮಲತಾ ಸಂದೇಶ ರವಾನಿಸಲಿದ್ದಾರೆ.
ಇದನ್ನೂ ಓದಿ: ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಯಲ್ಲೇ ಇರುತ್ತಾರೆ: ಸಚಿವ ಪ್ರಹ್ಲಾದ ಜೋಶಿ
ಮಂಡ್ಯ ಲೋಕಸಭಾ ಕ್ಷೇತ್ರ ಇದೀಗ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಕಳೆದ ಬಾರಿ ಲೋಕ ಸಮರದಲ್ಲಿ ಗೆದ್ದು ಬೀಗಿದ್ದ ಸ್ವಾಭಿಮಾನಿ ಸುಮಲತಾ, ಈ ಬಾರಿ ಮತ್ತೆ ಮಂಡ್ಯದಿಂದಲೇ ಸ್ವರ್ಧೆ ಮಾಡುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ ಬಿಜೆಪಿಯಿಂದಲೇ ಸ್ವರ್ಧೆ ಮಾಡಲು, ದೆಹಲಿ ಮಟ್ಟದಲ್ಲಿ ದಾಳ ಉರುಳಿಸುತ್ತಿದ್ದಾರೆ. ಈಗಾಗಲೇ ಬಿಜೆಪಿಯ ಘಟಾನುಘಟಿ ನಾಯಕರನ್ನ ಭೇಟಿ ಮಾಡಿ, ಬಿಜೆಪಿ ಟಿಕೆಟ್ ನೀಡುವಂತೆ ಒತ್ತಡವನ್ನು ಕೂಡ ಹಾಕಿದ್ದಾರೆ. ಈ ಮಧ್ಯೆ ಮೊನ್ನೆ ಮಂಡ್ಯದಿಂದ ಟಿಕೆಟ್ ಸಿಗುವ ನಿರೀಕ್ಷೆ ಇದೆ ಅಂತಾ ಕೂಡ ತಿಳಿಸಿದ್ರು. ಇದರ ಬೆನ್ನೆಲ್ಲೆ ಮಾಜಿ ಸಿಎಂ ಹೆಚ್ಡಿಕೆ, ದೆಹಲಿಗೆ ಹಾರಿ ಮೈತ್ರಿ ಟಿಕೆಟ್ ಸಂಬಂಧ ಅಮಿತ್ ಶಾ ಜೊತೆ ಕೂಡ ಮಾತುಕತೆ ನಡೆಸಿದ್ರು. ಮಂಡ್ಯ, ಹಾಸನ, ಕೋಲಾರ ಬಹುತೇಕ ಜೆಡಿಎಸ್ ಗೆ ಫಿಕ್ಸ್ ಅಂತ ಹೇಳಲಾಗುತ್ತಿದೆ. ಈ ಬೆಳವಣಿಗೆ ಮಧ್ಯೆ, ಬಿಜೆಪಿ ಟಿಕೆಟ್ ಗಾಗಿ ಪಟ್ಟು ಹಿಡಿದಿರೋ ಸುಮಲತಾ, ನನ್ನ ಸ್ವರ್ಧೆ ಖಚಿತವೆಂದು ಮಂಡ್ಯದಲ್ಲಿ ಸ್ವಷ್ಟಪಡಿಸಿದ್ದಾರೆ. ನನಗೆ ವಿಶ್ವಾಸ ಇವೆ. ಮಂಡ್ಯ ಬಿಜೆಪಿಗೆ ಸಿಗಲಿದೆ. ನನ್ನ ಹೋರಾಟ ಮಂಡ್ಯಕೋಸ್ಕರ. ಮಂಡ್ಯದಲ್ಲಿ ಬಿಜೆಪಿ ಸಂಘಟಿಸಲು ನನ್ನ ಹೋರಾಟ. ನನಗೆ ಟಿಕೆಟ್ ಪಡೆಯುವ ಉದ್ದೇಶ ಇದ್ದಿದ್ದರೆ ಎಲ್ಲಾದರೂ ಅವಕಾಶ ಸಿಗ್ತಿತ್ತು. ಜೆಡಿಎಸ್ ನಾಯಕರು ಏನಾದರೂ ಹೇಳಬಹುದು. ಆದರೆ ಅಧಿಕೃತವಾಗಬೇಕು. ಅಂತಿಮ ಘೋಷಣೆ ಆಗುವವರೆಗೂ ಮಾತನಾಡುವುದು ಸೂಕ್ತ ಅಲ್ಲ ಎಂದಿದ್ದರು. ಸದ್ಯ ಈಗ ಪ್ರಮುಖ ಮುಖಂಡರ ಸಭೆ ಕರೆದಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ