ಮಂಡ್ಯ: ತನ್ನ 20 ದಿನದ ಮಗುವಿನ ಜೊತೆಗೆ ಉಳಿದುಕೊಳ್ಳಲು ಆಶ್ರಯವಿಲ್ಲದೆ ಪರದಾಡುತ್ತಿದ್ದ ಬಾಣಂತಿಗೆ ಕೊನೆಗೂ ಆಶ್ರಯ ಸಿಕ್ಕಿದೆ. ಇರಲು ಸೂರಿಲ್ಲದೆ ಬೀದಿಯಲ್ಲಿಯೇ ಜೀವನ ಸಾಗಿಸುತ್ತಿದ್ದ ಮಹಿಳೆಯ ಮುಖದಲ್ಲಿ ಮಂದಹಾಸ ಮೂಡಿದ್ದು. ಆಕೆಯ ಸಂತಸಕ್ಕೆ ಈಗ ಪಾರವೇ ಇಲ್ಲದಂತಾಗಿದೆ. ಟಿವಿ9 ಸಂಸ್ಥೆಗೆ ಆಕೆ ಮನತುಂಬಿ ಹಾರೈಸಿದ್ದಾಳೆ. ಬಾಣಂತಿಯ ಪರದಾಟ ಆಕೆಯ ಶೋಚನೀಯ ಸ್ಥಿತಿಯ ಕುರಿತು ಟಿವಿ9 ಸಮಗ್ರ ವರದಿಯನ್ನ ಬಿತ್ತರಿಸಿತ್ತು. ಬಾಣಂತಿ ಅನ್ನಪೂರ್ಣ ಅವರ ಶೋಚನೀಯ ಸ್ಥಿತಿಯನ್ನ ಜನರ ಮುಂದೆ ತೆರೆದಿಡಲಾಗಿತ್ತು. ಟಿವಿ9 ನಲ್ಲಿ ವರದಿ ಬಿತ್ತರವಾದ ಬಳಿಕ ಈಗ ಜಿಲ್ಲಾಡಳಿತ ಎಚ್ಚೆತ್ತು ಕೊಂಡಿದೆ. ಬಾಣಂತಿ ಅನ್ನಪೂರ್ಣ ಅವರ ಹಸುಗೂಸು ಹಾಗೂ ಇಬ್ಬರು ಮಕ್ಕಳಿಗೆ ಮಂಡ್ಯದ ‘ಸ್ವಾಧಾರ’ ಕೇಂದ್ರದಲ್ಲಿ ಆಶ್ರಯ ನೀಡುವ ಮೂಲಕ ಜಿಲ್ಲಾಡಳಿತ ಆಶ್ರಯ ನೀಡಿದೆ. ಅನ್ನಪೂರ್ಣ ಅವರಿಗೆ ಆಶ್ರಯ ನೀಡಿರುವ ಕುರಿತು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ನಾಗರಾಜ್ ಖಚಿತಪಡಿಸಿದರು.
ಅನ್ನಪೂರ್ಣ ಅವರ ಪತಿ ಐಪಿಎಲ್ ಬೆಟಿಂಗ್ ಚಟಕ್ಕೆ ಬಿದಿದ್ದರು. ಅನ್ನಪೂರ್ಣ ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಪತಿ ಸುರೇಶ್ ಕೈ ಕೊಟ್ಟು ಹೋಗಿದ್ದಾನೆ. ಆಗಿನಿಂದಲು ಅನ್ನಪೂರ್ಣ ಮದ್ದೂರಿನ ಹೆಮ್ಮನಹಳ್ಳಿಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ 20 ದಿನಗಳ ಹಿಂದೆಯಷ್ಟೇ ಅನ್ನಪೂರ್ಣ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅನ್ನಪೂರ್ಣ ಅವರ ತಂದೆಗೆ ವಯಸ್ಸಾಗಿದೆ. ತಿನ್ನಲು ಆಹಾರವಿಲ್ಲದೆ ಉಳಿದುಕೊಳ್ಳಲು ಸ್ಥಳವಿಲ್ಲದೆ ಪರಿತಪಿಸುತ್ತಿದ್ದರು. ಈ ವಿಚಾರ ತಿಳಿದ ಟಿವಿ9 ಈ ಸುದ್ದಿ ಪ್ರಸಾರ ಮಾಡಿತ್ತು. ಸುದ್ದಿ ನೋಡಿದ ವೀಕ್ಷಕರು ಅನ್ನಪೂರ್ಣ ಅವರಿಗೆ ಸಹಾಯ ಮಾಡಲು, ವಸತಿ ಹಾಗೂ ಉದ್ಯೋಗ ನೀಡಲು ಮುಂದೆ ಬಂದಿದ್ದಾರೆ.
ಈ ಕುರಿತು ‘ಟಿವಿ9’ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಮಹಾಲಿಂಗೇಗೌಡ, ಕ್ರಿಕೆಟ್ ಹಾಗೂ ಇನ್ನಿತರ ಯಾವುದೇ ಆಟಗಳನ್ನು ಮನರಂಜನೆಗಷ್ಟೇ ಸೀಮಿತವಾಗಿಡಬೇಕು. ಬೆಟಿಂಗ್ನಿಂದ ಕುಟುಂಬಗಳು ಬೀದಿಗೆ ಬರುತ್ತವೆ. ಬೆಟಿಂಗ್ ದಂಧೆಯಿಂದ ಆಗುವ ಅನಾಹುತಕ್ಕೆ ಅನ್ನಪೂರ್ಣ ಅವರ ಜೀವನವೇ ಅತ್ಯುತ್ತಮ ಉದಾಹರಣೆಯಾಗಿದೆ. ಅನ್ನಪೂರ್ಣ ಅವರು ಸ್ವಾವಲಂಬಿ ಜೀವನ ಸಾಗಿಸಲು ಸಹಾಯ ಮಾಡಲು ಹಲವು ಮುಂದೆ ಬಂದಿದ್ದಾರೆ’ ಎಂದರು.
ನಡುಬೀದಿಯಲ್ಲಿ ತಿನ್ನಲು ಆಹಾರ ಮತ್ತು ಮಲಗಲು ಮನೆಯಿಲ್ಲದೆ ಒದ್ದಾಡುತ್ತಿದ್ದ ಬಾಣಂತಿ ಅನ್ನಪೂರ್ಣ ಅವರಿಗೆ ಕೊನೆಗೂ ಜಿಲ್ಲಾಡಳಿತ ಆಶ್ರಯ ಕಲ್ಪಿಸಿಕೊಟ್ಟಿದೆ. ‘ಟಿವಿ9’ ವರದಿ ನೋಡಿದ ಕೆಲ ವೀಕ್ಷಕರು ಸಹಾಯ ಹಸ್ತ ಚಾಚುತ್ತಿದ್ದಾರೆ. ಟಿವಿ9 ವರದಿ ಮತ್ತೊಬ್ಬರ ಬಾಳಿಗೆ ಬೆಳಕಾಗಿದೆ.
ವರದಿ: ಸೂರಜ್ ಪ್ರಸಾದ್ ಟಿವಿ9 ಮಂಡ್ಯ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ