ಮಂಡ್ಯ: ರಸ್ತೆ ಗುಂಡಿ ತಪ್ಪಿಸಲು ಹೋಗಿ ನಿವೃತ್ತ ಯೋಧ ಸಾವು
12 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದ ಕುಮಾರ್, ಕಾರೆಮನೆ ಗೇಟ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಮಂಡ್ಯ: ರಸ್ತೆ ಗುಂಡಿ ತಪ್ಪಿಸಲು ಹೋಗಿ ನಿವೃತ್ತ ಯೋಧ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಂಡ್ಯ ತಾಲೂಕಿನ ಕಾರೆಮನೆ ಗೇಟ್ ಬಳಿ ನಡೆದಿದೆ. ಮಂಡ್ಯ ತಾಲೂಕಿನ ಸಾತನೂರು ಗ್ರಾಮದ ಬೀರೇಶ್ವರ ಬಡಾವಣೆಯ ನರಸಯ್ಯ ಅವರ ಮಗ, ನಿವೃತ್ತ ಯೋಧ ಎಸ್.ಎನ್.ಕುಮಾರ್(34) ಮೃತ ದುರ್ದೈವಿ. ಮಂಡ್ಯದಿಂದ ಸಾತನೂರಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬೈಕ್ನಿಂದ ಬಿದ್ದು ಕುಮಾರ್ ಅವರು ಸಾವನ್ನಪ್ಪಿದ್ದಾರೆ.
12 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದ ಕುಮಾರ್, ನಿವೃತ್ತಿ ಬಳಿಕ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆ ಆಗಿದ್ದರು. ನಿನ್ನೆ ಮಂಡ್ಯದಿಂದ ತಮ್ಮ ಗ್ರಾಮಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಭಾರತೀಯ ಸೇನೆಯಲ್ಲಿ ನಿವೃತ್ತರಾದ ನಂತರ ಊರಿಗೆ ಆಗಮಿಸಿದ್ದ ಕುಮಾರ್ ಅವರಿಗೆ ಗ್ರಾಮಸ್ಥರು ಅದ್ದೂರಿ ಮೆರವಣಿಗೆ ಮಾಡಿ ಸ್ವಾಗತಿಸಿದ್ದರು. ಸದ್ಯ ಧಾರವಾಡದಲ್ಲಿ ಪೊಲೀಸ್ ಕಾನ್ಸ್ಟೆಬಲ್ ತರಬೇತಿಯನ್ನು ಪಡೆಯುತ್ತಿದ್ದ ಕುಮಾರ್, ರಜೆ ಮೇರೆಗೆ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಘಟನೆ ನಡೆದಿದೆ.
ಇದನ್ನೂ ಓದಿ: Turkey Blast ಇಸ್ತಾಂಬುಲ್‌ನಲ್ಲಿ ಬಾಂಬ್ ಇರಿಸಿದ್ದು ಸಿರಿಯಾದ ಮಹಿಳೆ: ಟರ್ಕಿ ಪೊಲೀಸ್
ಅಂತ್ಯಸಂಸ್ಕಾರಕ್ಕೆ ಸಿದ್ಧತೆ
ಇನ್ನು ಮಂಡ್ಯ ತಾಲೂಕಿನ ಸಾತನೂರಿನಲ್ಲಿ ಕುಮಾರ್ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಮಾರ್ 10 ವರ್ಷದ ಹಿಂದೆ ಕೋಮಲಾ ಎಂಬುವರನ್ನು ವಿವಾಹವಾಗಿದ್ದರು. ಕುಮಾರ್ ತಂದೆಯೂ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಮಗನನ್ನ ಕಳೆದು ಕೊಂಡು ಈಗ ತಂದೆ ನರಸಯ್ಯ ಕಣ್ಣೀರಿಡುತ್ತಿದ್ದಾರೆ. ಕುಮಾರ್ ನಿವೃತ್ತ ಯೋಧರಾದ ಕಾರಣ ಮಂಡ್ಯ ಜಿಲ್ಲಾಡಳಿತದಿಂದ ಗಾರ್ಡ್ ಆಫ್ ಆನರ್ ನೀಡಲಾಗುತ್ತಿದೆ.
ಆಟೋ ಚಾಲಕನ ಮೇಲೆ ತಲವಾರು ದಾಳಿ
ಮಂಗಳೂರು: ಆಟೋ ಚಾಲಕನ ಮೇಲೆ ತಲವಾರು ದಾಳಿ ನಡೆಸಿ ಕೊಲೆ ಯತ್ನ ಮಾಡಿರುವ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾಡಾಜೆಯಲ್ಲಿ ನಡೆದಿದೆ. ಬೋಳಂತೂರು ಸಮೀಪದ ಗುಳಿ ನಿವಾಸಿ ಆಟೋ ಚಾಲಕ ಶಾಕೀರ್(30) ಮೇಲೆ ದಾಳಿ ನಡೆದಿದೆ. ಹಲ್ಲೆಗೊಳಗಾದ ಶಾಕೀರ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಬಡ್ಡಿ ಮ್ಯಾಚ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಶಾಕೀರ್ನನ್ನು ಬೋಳಂತೂರು ಸಮೀಪದ ನಾಡಾಜೆ ರಸ್ತೆಯಲ್ಲಿ ನಾಲ್ವರ ತಂಡ ತಲವಾರಿನಿಂದ ದಾಳಿ ನಡೆಸಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪರಿಚಯಸ್ಥರೇ ಕೃತ್ಯ ಎಸಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 2:01 pm, Mon, 14 November 22