ಮಂಡ್ಯ, ಜೂನ್.26: ಗಣಿಗಾರಿಕೆ ಬಳಿಕ KRS ಅಣೆಕಟ್ಟೆಗೆ ಮತ್ತೊಂದು ಕಂಟಕ ಎದುರಾಗಿದೆ. ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದ ಹಿನ್ನೀರು ಪ್ರದೇಶವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಭೂಗಳ್ಳರು ಅಣೆಕಟ್ಟೆ ಜಾಗವನ್ನೇ ನುಂಗಿ ನೀರು ಕುಡಿಯುತ್ತಿದ್ದಾರೆ. ಡ್ಯಾಂ ಜಾಗ ಒತ್ತುವರಿ (Encroachment) ಮಾಡ್ತಿದ್ರು ಅಧಿಕಾರಿಗಳು ಮಾತ್ರ ಜಾಣ ಮೌನರಾಗಿದ್ದಾರೆ.
ಸರ್ಕಾರಿ ದಾಖಲೆಗಳಲ್ಲಿ 3 ಎಕರೆ ಇದ್ರೂ ಹೆಚ್ಚುವರಿ ಭೂಮಿ ಒತ್ತುವರಿ ಆಗಿದೆ. ಒತ್ತುವರಿ ಜಾಗದಲ್ಲಿ ಟ್ರಂಚ್ ಹೊಡೆಸಿ ಫೆನ್ಸ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಕೇರಳ ಮೂಲದ ನಕೇಶ್ ಜಾನ್ ಮ್ಯಾಥ್ಯು ಎಂಬುವವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸರ್ವೆ ನಂ 279ರಲ್ಲಿ ಜಮೀನು ಹೊಂದಿರುವ ನಕೇಶ್ ಜಾನ್ ಮ್ಯಾಥ್ಯು ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿಕ್ಕಾರಳ್ಳಿ ಗ್ರಾಮದ ಸರ್ವೆ ನಂಬರ್ನಲ್ಲಿ ಜಮೀನು ಹೊಂದಿದ್ದಾರೆ.
ಡ್ಯಾಂನ ನೀರು ಸಂಗ್ರಹದ ಕಣ್ಣಳತೆ ದೂರದಲ್ಲಿ ಒತ್ತುವರಿ ಆಗ್ತಿದ್ರು ಹೇಳೋರಿಲ್ಲ, ಕೇಳೋರಿಲ್ಲದಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರ ಸಹಾಯದಿಂದ ಅತಿಕ್ರಮಣ ಆರೋಪ ಕೇಳಿ ಬಂದಿದೆ. ಒತ್ತುವರಿ ತೆರವು ಮಾಡದಿದ್ರೆ ಡ್ಯಾಂಗೆ ಅಪಾಯ ಕಟ್ಟಿಟ್ಟ ಬುತ್ತಿ. ಅಕ್ರಮ ಒತ್ತುವರಿಯಿಂದಾಗಿ ಡ್ಯಾಂ ನೀರು ಸಂಗ್ರಹಕ್ಕೆ ಧಕ್ಕೆ ಸಾಧ್ಯತೆ. ಸಂಗ್ರಹ ಸಾಮರ್ಥ್ಯ ಕುಗ್ಗಿದ್ರೆ ಭವಿಷ್ಯದಲ್ಲಿ ನೀರಿಗೆ ಹಾಹಾಕಾರ ಎದುರಾಗಲಿದೆ. ಜಮೀನು ಮಾಲೀಕ ಟ್ರಂಚ್ ಹೊಡೆಸಿ ದೊಡ್ಡ ದೊಡ್ಡ ಕಲ್ಲುಗಳನ್ನ ಟ್ರಂಚ್ಗೆ ಹಾಕಿಸಿದ್ದಾನೆ. ಕೂಡಲೇ ಒತ್ತುವರಿ ತೆರವು ಮಾಡಲು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿವೆ ತೆರಿಗೆ ಕಟ್ಟದ 7 ಲಕ್ಷ ಆಸ್ತಿಗಳು; ಇ-ಖಾತಾ ಮೂಲಕ ಬಾಕಿ ತೆರಿಗೆ ವಸೂಲಿಗೆ ಪ್ಲಾನ್
ಕೃಷ್ಣ ರಾಜ ಸಾಗರ ಅಣೆಕಟ್ಟನ್ನು 1924 ರಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಯಿತು. ಇದು ಮೈಸೂರು ಮತ್ತು ಮಂಡ್ಯದಲ್ಲಿ ನೀರಾವರಿಗೆ ಪ್ರಮುಖ ನೀರಿನ ಮೂಲವಾಗಿದೆ. ಕೆಲ ತಿಂಗಳ ಹಿಂದೆ ಕೆಆರ್ಎಸ್ ಅಣೆಕಟ್ಟೆಯ ಸುತ್ತಮುತ್ತ ಗಣಿಗಾರಿಕೆಗೆ ನಿರ್ಬಂಧ ಹೇರಿ ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ಕೆಆರ್ಎಸ್ನ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿರ್ಬಂಧ ಹೇರಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಆದೇಶ ನೀಡಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ