ಮಂಡ್ಯ, ಮಾರ್ಚ್.05: ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ( Baby Betta) ಟ್ರಯಲ್ ಬ್ಲಾಸ್ಟ್ (Trail blast) ನಡೆಸಲು ಹೈಕೋರ್ಟ್ ಆದೇಶ ನೀಡಿದೆ. ಹಾಗಾಗಿ ಇಂದಿನಿಂದ 4 ದಿನಗಳ ಕಾಲ ಟ್ರಯಲ್ ಬ್ಲಾಸ್ಟ್ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಕೋರ್ಟ್ ಆದೇಶವೇ ನೀಡಿಲ್ಲ. ಆದರೂ ಹೈ ಕೋರ್ಟ್ ಆದೇಶ ನೆಪವೊಡ್ಡಿ ಟ್ರಯಲ್ ಬ್ಲಾಸ್ಟ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ ಎಂಬ ಅಂಶ ಬಯಲಾಗಿದೆ. ಇಂದು ನಡೆದ ತಜ್ಞರ ಸಭೆಯಲ್ಲಿ ಆದೇಶವೇ ಇಲ್ಲದಿರುವ ಮಾಹಿತಿ ಬಹಿರಂಗವಾಗಿದೆ. ಈ ಮೂಲಕ ಅಧಿಕಾರಗಳ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಗಣಿಮಾಲೀಕರ ಲಾಬಿಗೆ ಮಣಿದು ಸರ್ಕಾರ ನಕಲಿ ಆದೇಶ ಸೃಷ್ಟಿಸಿತಾ ಎಂಬ ಪ್ರಶ್ನೆ ಎದ್ದಿದೆ.
ಅಧಿಕಾರಗಳ ಸಮೇತ ಜನಪ್ರತಿನಿಧಿಗಳು ಕೂಡ ಹೈಕೋರ್ಟ್ ಆದೇಶ ಇದೆ ಎಂದು ಹೇಳಿಕೆ ನೀಡಿದ್ದರು. ಟ್ರಯಲ್ ಬ್ಲಾಸ್ಟ್‌ಗೆ ಹೈಕೋರ್ಟ್ ಆದೇಶ ಇದೆ ಎಂದು ಡಿಸಿ ಡಾ. ಕುಮಾರ್, ಸಚಿವ ಚಲುವರಾಯಸ್ವಾಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ ನೀಡಿದ್ದರು. ಆದರೆ ಇದೀಗ ತಜ್ಞರ ಸಭೆಯಲ್ಲಿ ಆದೇಶ ಇಲ್ಲದಿರುವ ಮಾಹಿತಿ ಬಟಾಬಯಲಾಗಿದೆ. ವಕೀಲರು ಕಾಲಾವಕಾಶ ಕೇಳಿದ್ದ ಪತ್ರವನ್ನೇ ಆದೇಶ ಪ್ರತಿ ಎಂದು ಬಿಂಬಿಸಲಾಗಿದೆ. ಸದ್ಯ ರೈತರ ಹೋರಾಟಕ್ಕೆ ಮಣಿದು ಟ್ರಯಲ್ ಬ್ಲಾಸ್ಟ್ ಮೂಂದೂಡಲಾಗಿದೆ. ಸಭೆ ನಡೆಸಿ ಪರೀಕ್ಷಾರ್ಥ ಸ್ಥಳ ಗುರತಿಸಲು ಬಂದಿದ್ದ ತಜ್ಞರ ತಂಡ ವಾಪಾಸ್ ತೆರಳಿದೆ.
ಇದನ್ನೂ ಓದಿ: ಮಂಡ್ಯದ ಬೇಬಿ ಬೆಟ್ಟದಲ್ಲಿ ಇಂದಿನಿಂದ 4 ದಿನ ಟ್ರಯಲ್ ಬ್ಲಾಸ್ಟ್: ರೈತ ಸಂಘಟನೆಗಳು, ಬಿಜೆಪಿಯಿಂದ ಪ್ರತಿಭಟನೆ
ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯಿಂದ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್ ಅಣೆಕಟ್ಟೆಗೆ ಹಾನಿ ಆಗುತ್ತದೆ ಎಂದು ಹಲವು ಹೋರಾಟಗಳು ನಡೆದವು. ರೈತ ಸಂಘಟನೆಗಳು, ಸಂಸದೆ ಸುಮಲತಾ ಅಂಬರೀಶ್, ಸಾಮಾಜಿಕ ಕಾರ್ಯಕರ್ತರ ಹೋರಾಟದ ಪ್ರತಿಫಲವಾಗಿ ಹೈಕೋರ್ಟ್ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಗೆ ನಿರ್ಬಂಧ ಹೇರಿತ್ತು. ಆದರೆ ಈಗ ಅಧಿಕಾರಿಗಳು, ರಾಜಪ್ರತಿನಿಧಿಗಳು ಹೈಕೋರ್ಟ್ ಆದೇಶ ಇದೆ ಎಂದು ಹೇಳಿ ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಸಮಸ್ಯೆ ಆಗುತ್ತಾ ಎಂದು ತಿಳಿಯಲು ಟ್ರಯಲ್ ಬ್ಲಾಸ್ಟ್ ಮಾಡಿಸಲು ಮುಂದಾಗಿದ್ದರು. ಸದ್ಯ ಇಂದು ನಡೆದ ತಜ್ಞರ ಸಭೆಯಲ್ಲಿ ಆದೇಶವೇ ಇಲ್ಲದಿರುವ ಮಾಹಿತಿ ಬಹಿರಂಗವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ