ಬೆಂಗಳೂರು ಸೆ.15: ಈ ಬಾರಿ ಮುಂಗಾರು (Monsoon) ಕೈ ಕೊಟ್ಟಿದ್ದರಿಂದ 195 ತಾಲೂಕುಗಳಲ್ಲಿ ಬರ ಆವರಿಸಿದೆ ಎಂದು ಸರ್ಕಾರ ತಿಳಿಸಿದೆ. ಇದರಿಂದ ಬಿತ್ತನೆಗೆ ನೀರಿಲ್ಲದೆ ರೈತ ಪರದಾಡುತ್ತಿದ್ದಾನೆ. ಕೃಷ್ಣರಾಜಸಾಗರ ಜಲಾಶಯದಲ್ಲಿ (KRS Dam) ನೀರಿಲ್ಲದೇ ರೈತರು ಕಂಗಾಲು ಆಗಿದ್ದಾರೆ. ಆದರೂ ತಮಿಳುನಾಡಿಗೆ (Tamil Nadu) ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಂಗಳಲ್ಲಿ ನೀರಿನ ಮಟ್ಟವು ಕುಸಿಯುತ್ತಲೇ ಇದೆ. ಹೀಗೆ ಮುಂದುವರೆದರೇ ಮುಂಬರುವ ವಾರಗಳಲ್ಲಿ ನೀರಿಲ್ಲದೆ ಪರದಾಡುವಂತಾಗುತ್ತದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (KSNDMC) ಪ್ರಕಾರ, ಸೆಪ್ಟೆಂಬರ್ 9ರ ವೇಳೆಗೆ ಕೆಆರ್‌ಎಸ್, ಹೇಮಾವತಿ ಮತ್ತು ಕಬಿನಿ ಜಲಾಶಯಗಳಲ್ಲಿ ಕಳೆದ 10 ವರ್ಷಗಳಲ್ಲೇ ಅತಿ ಕಡಿಮೆ ನೀರು ಇತ್ತು. ಸೆಪ್ಟೆಂಬರ್ 14 ರಂದು 124.80 ಅಡಿ ಸಾಮರ್ಥ್ಯದ ಕೆಆರ್ಎಸ್ನಲ್ಲಿ 97.50 ಅಡಿ ನೀರು ಇತ್ತು. ಕಳೆದ ವರ್ಷ ಇದೇ ದಿನ 124.60 ಅಡಿಯಷ್ಟು ನೀರು ಇತ್ತು. ಕೆಎಸ್‌ಎನ್‌ಡಿಎಂಸಿ ಪ್ರಕಾರ, ಸೆಪ್ಟೆಂಬರ್ 3 ರಿಂದ 9ರ ವರೆಗೆ ನೀರಿನ ಮಟ್ಟವು ಕಳೆದ 10 ವರ್ಷಗಳ ಸರಾಸರಿ ಮಟ್ಟಕ್ಕಿಂತ 17.83 ಅಡಿ ಕಡಿಮೆಯಾಗಿದೆ.
ಕಳೆದ ವರ್ಷಕ್ಕ ಹೋಲಿಸಿದರೆ ನೀರಿನ ಮಟ್ಟವು 26.10 ಅಡಿಗಳಷ್ಟು ಕಡಿಮೆಯಾಗಿದೆ. ಸೆ.14 ರಂದು ಹೇಮಾವತಿಯಲ್ಲಿ 2,897.86 ಅಡಿ ನೀರು ಇತ್ತು. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2,921.65 ಅಡಿ ನೀರು ಇತ್ತು. ಸೆ.9ರ ವರೆಗಿನ ಅಂಕಿ-ಅಂಶಗಳ ಪ್ರಕಾರ ಕಳೆದ 10 ವರ್ಷಗಳಲ್ಲೇ ಇದೆ ಮೊದಲಬಾರಿಗೆ 10.78 ಟಿಎಂಸಿ ನೀರಿನ ಮಟ್ಟ ಕಡಿಮೆಯಾಗಿದೆ. ಕಳೆದ ವರ್ಷ ಇದೇ ದಿನ 36.91 ಟಿಎಂಸಿ ಅಡಿ ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೇ 20.13 ಟಿಎಂಸಿ ಅಡಿಯಷ್ಟು ಕಡಿಮೆಯಾಗಿದೆ. ಸದ್ಯ ಡ್ಯಾಂನಲ್ಲಿ 18.56 ಟಿಎಂಸಿ ನೀರು ಇದೆ. ಅಣೆಕಟ್ಟಿನ ಒಟ್ಟು ಸಂಗ್ರಹಣಾ ಸಾಮರ್ಥ್ಯವು 37.10 ಟಿಎಂಸಿ ಆಗಿದೆ.
ಇದನ್ನೂ ಓದಿ: ಸೆ.15ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ
ಕಬಿನಿ ಜಲಾಶಯವು ಕುಡಿಯುವ ಮತ್ತು ನೀರಾವರಿಗೆ ಮತ್ತೊಂದು ಪ್ರಮುಖ ನೀರಿನ ಮೂಲವಾಗಿದೆ. ಕಬಿನಿ ಜಲಾಶಯದಲ್ಲಿ ಕಳೆದ 10 ವರ್ಷಗಳ ಸರಾಸರಿ ನೀರಿನ ಮಟ್ಟಕ್ಕಿಂತ 5.53 ಅಡಿ ಕಡಿಮೆಯಾಗಿದೆ. ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ 8.39 ಅಡಿ ಕಡಿಮೆಯಾಗಿದೆ. ಸೆಪ್ಟೆಂಬರ್ 14 ರಂದು ಕಬಿನಿ ನೀರಿನ ಮಟ್ಟ 2,276.08 ಅಡಿ ಇತ್ತು. ಒಟ್ಟು ಸಂಗ್ರಹಣಾ ಸಾಮರ್ಥ್ಯ 19.52 ಟಿಎಂಸಿ ಆಗಿದ್ದು, ಸದ್ಯ 14.92 ಟಿಎಂಸಿ ನೀರು ಇದೆ. ಕಳೆದ ವರ್ಷ ಇದೇ ದಿನ 18.87 ಟಿಎಂಸಿ ನೀರು ಇತ್ತು.
ಹಾರಂಗಿಯಲ್ಲಿ ಚಿಕ್ಕ ಅಣೆಕಟ್ಟು ಆಗಿದ್ದು, ನೀರಿನ ಮಟ್ಟವು ಸ್ವಲ್ಪ ಉತ್ತಮವಾಗಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 8.5 ಟಿಎಂಸಿ ಅಡಿ ಇದ್ದು, ಲಭ್ಯವಿರುವ ನೀರು 8.29 ಟಿಎಂಸಿ. ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಸದ್ಯ ನೀರು ಕೇವಲ 62.69 ಟಿಎಂಸಿ ಅಡಿ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ