ಮಂಡ್ಯ, ನವೆಂಬರ್ 1: ತಮಿಳುನಾಡಿಗೆ ಕಾವೇರಿ ನೀರು (Cauvery Water) ಹರಿಸುವುದನ್ನು ವಿರೋಧಿಸಿ ಮಂಡ್ಯದಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು (Farmers Protest) ಮತ್ತೆ 14 ದಿನಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ. ಪ್ರತಿಭಟನಾ ಸ್ಥಳಕ್ಕೆ ಮಂಗಳವಾರ ಖುದ್ದು ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ರೈತರ ಹಿತ ಕಾಯುವುದಾಗಿ ಭರವಸೆ ನೀಡಿದ್ದರು. ಆದರೆ, ಇದರಿಂದಲೂ ತೃಪ್ತರಾಗದ ಪ್ರತಿಭಟನಾಕಾರರು, ಕಾವೇರಿ ನೀರಿನ ವಿಚಾರವಾಗಿ ಸರ್ಕಾರ ದೃಢ ನಿರ್ಧಾರ ಪ್ರಕಟಿಸಿಲ್ಲ. ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ. ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ಪ್ರತಿಭಟನೆ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸರ್ಕಾರದ ನಿಲುವಿನ ವಿರುದ್ಧ ರೈತರು ಧರಣಿ ನಡೆಸುತ್ತಿದ್ದಾರೆ. ಕಳೆದ 58 ದಿನಗಳಿಂದ ನಿರಂತರವಾಗಿ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ.
58 ದಿನಗಳಿಂದ ಧರಣಿ ನಡೆಸುತ್ತಿದ್ದೇವೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ಹಿಂಪಡೆಯುವವರೆಗೂ ನಾವು ಹೋರಾಟ ಮಾಡುತ್ತೇವೆ. ಪ್ರತಿಭಟನೆ ಕೈಬಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿಲ್ಲ. ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು, ಮತ್ತೆ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾನಿರತರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕಕ್ಕೆ ತಪ್ಪದ ಗೋಳು: ತಮಿಳುನಾಡಿಗೆ ಮತ್ತೆ ನೀರು ಹರಿಸಲು ಸಿಡಬ್ಲ್ಯುಆರ್ಸಿ ಸೂಚನೆ
ಶಾಸಕ ರವಿಕುಮಾರ್ ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದರು. ಮುಖ್ಯಮಂತ್ರಿಗಳೇ ನಮ್ಮನ್ನು ಭೇಟಿ ಮಾಡಿ ಭರವಸೆ ನೀಡುವವರೆಗೂ ನಮ್ಮ ಧರಣಿ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡಿಗೆ ಮತ್ತೆ 2,600 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಸೋಮವಾರ ಸೂಚನೆ ನೀಡಿತ್ತು. ಮುಂದಿನ 15 ದಿನಗಳ ಕಾಲ 2,600 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಸಮಿತಿ ಸೂಚಿಸಿತ್ತು. ಇದರ ಬೆನ್ನಲ್ಲೇ ರೈತರ ಪ್ರತಿಭಟನೆ ತೀವ್ರಗೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ