Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕಕ್ಕೆ ತಪ್ಪದ ಗೋಳು: ತಮಿಳುನಾಡಿಗೆ ಮತ್ತೆ ನೀರು ಹರಿಸಲು ಸಿಡಬ್ಲ್ಯುಆರ್​​ಸಿ ಸೂಚನೆ

ಮುಂದಿನ 15 ದಿನಗಳ ಕಾಲ 2,600 ಕ್ಯೂಸೆಕ್​ ನೀರು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಸೋಮವಾರ ಸೂಚನೆ ನೀಡಿದೆ. ಕರ್ನಾಟಕದ ಪರ ಎಸಿಎಸ್ ರಾಕೇಶ್ ಸಿಂಗ್ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಭಾಗವಹಿಸಿ ವಾದ ಮಂಡಿಸಿದ್ದಾರೆ.

ಕರ್ನಾಟಕಕ್ಕೆ ತಪ್ಪದ ಗೋಳು: ತಮಿಳುನಾಡಿಗೆ ಮತ್ತೆ ನೀರು ಹರಿಸಲು ಸಿಡಬ್ಲ್ಯುಆರ್​​ಸಿ ಸೂಚನೆ
ಸಾಂದರ್ಭಿಕ ಚಿತ್ರ
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: Ganapathi Sharma

Updated on:Oct 30, 2023 | 4:37 PM

ನವದೆಹಲಿ, ಅಕ್ಟೋಬರ್ 30: ತಮಿಳುನಾಡಿಗೆ ಮತ್ತೆ 2,600 ಕ್ಯೂಸೆಕ್ ಕಾವೇರಿ ನೀರು (Cauvery Water) ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ ಸೋಮವಾರ ಸೂಚನೆ ನೀಡಿದೆ. ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. ಮುಂದಿನ 15 ದಿನಗಳ ಕಾಲ 2,600 ಕ್ಯೂಸೆಕ್​ ನೀರು ಹರಿಸುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕದ ಪರ ಎಸಿಎಸ್ ರಾಕೇಶ್ ಸಿಂಗ್ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಭಾಗವಹಿಸಿ ವಾದ ಮಂಡಿಸಿದ್ದಾರೆ.

ಪ್ರತಿದಿನ 3 ಸಾವಿರ ಕ್ಯೂಸೆಕ್​ ನೀರು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ ಈ ಹಿಂದೆ ಸೂಚಿಸಿತ್ತು. ಅಕ್ಟೋಬರ್ ಅಂತ್ಯದ ವರೆಗೆ ಈ ಆದೇಶವನ್ನು ಪಾಲನೆ ಮಾಡುವಂತೆ ಸೂಚನೆ ನೀಡಿತ್ತು. ಅದರಂತೆ, ಕರ್ನಾಟಕ ಸದ್ಯ ರಾಜ್ಯದ ಜನರ, ರೈತರ ವಿರೋಧದ ಮಧ್ಯೆಯೂ ತಮಿಳುನಾಡಿಗೆ ನೀರು ಹರಿಸುತ್ತಿದೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ಕರ್ನಾಟಕದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ಈಗಲೂ ಕಾವೇರಿ ಜಲಾನಯನ ಪ್ರದೇಶಗಳಾದ ಮೈಸೂರು, ಮಂಡ್ಯ ಮತ್ತಿತರ ಕಡೆಗಳಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ, ಧರಣಿ ನಡೆಸುತ್ತಿವೆ. ರಾಜಕೀಯವಾಗಿಯೂ ಕರ್ನಾಟಕದಲ್ಲಿ ಈ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಕಾವೇರಿ ನದಿ ನೀರು ಹಂಚಿಕೆ: ತಮಿಳುನಾಡಿಗೆ ಭೇಟಿ ನೀಡಿ ವರದಿ ಸಲ್ಲಿಸಲು ರಾಜ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ

ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸದಸ್ಯನಾದ ಡಿಎಂಕೆಯನ್ನು ಮೆಚ್ಚಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ ಎಂದು ರಾಜ್ಯ ಬಿಜೆಪಿ ನಾಯಕರು ಟೀಕಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಕಾಂಗ್ರೆಸ್ ಹೈಕಮಾಂಡ್, ಕರ್ನಾಟಕ ಸಂಪುಟ ಸಮಿತಿಗೆ ಸೂಚನೆ ನೀಡಿತ್ತು.

ಮಂಡ್ಯದಲ್ಲಿ ಹೆದ್ದಾರಿ ತಡೆದು ರೈತರ ಆಕ್ರೋಶ

ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಸ್ತೆಯಲ್ಲಿಯೇ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, CWRC ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಯಾವುದೇ ಕಾರಣಕ್ಕೂ ನೀರು ಹರಿಸದಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Mon, 30 October 23