ಕಲಬುರಗಿ FDA ಪರೀಕ್ಷೆ ಅಕ್ರಮ: ಆರ್ಡಿ ಪಾಟೀಲ್ ಜತೆ ಪ್ರಿಯಾಂಕ್ ಖರ್ಗೆ ಶಾಮೀಲು; ಅಶ್ವಥ್ ನಾರಾಯಣ ಆರೋಪ
ಕಲಬುರಗಿ ಎಫ್ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಯತ್ನಿಸಿದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ಗೆ ಸರ್ಕಾರದ ಕುಮ್ಮಕ್ಕು, ಸಹಕಾರ ಇದೆ. ಈ ಸರ್ಕಾರದಲ್ಲಿ ಪ್ರತಿಭಾವಂತ ಅಭ್ಯರ್ಥಿಗಳಿಗೆ ಮೋಸ ಆಗುತ್ತಿದೆ. ಕೆಇಎ ಪರೀಕ್ಷಾ ಅಕ್ರಮ ಹೊಣೆಯನ್ನು ಸಚಿವರೇ ಹೊತ್ತುಕೊಳ್ಳಬೇಕು. ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ಅ.30: ಎಫ್ಡಿಎ ಪರೀಕ್ಷೆ (FDA Exam) ವೇಳೆ ಬ್ಲೂಟೂತ್ ಡಿವೈಎಸ್ ಬಳಿಸಿ ಅಕ್ರಮ ಎಸಗಲು ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಹಗರಣದ (PSI Scam) ಆರೋಪಿ ರುದ್ರಗೌಡ ಪಾಟೀಲ್ (Rudragowda Patil) ಈ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದಾನೆ. ಆದರೆ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ. ಪ್ರಿಯಾಂಕ್ ಖರ್ಗೆ (Priyank Kharge) ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು. ಉಸ್ತುವಾರಿ ಸಚಿವರ ಮೂಗಿನಡಿಯಲ್ಲಿ ಪರೀಕ್ಷಾ ಅಕ್ರಮ ನಡೆದಿದೆ. ರುದ್ರಗೌಡ ಪಾಟೀಲ್ ಜತೆ ಪ್ರಿಯಾಂಕ್ ಖರ್ಗೆಯೂ ಶಾಮೀಲಾಗಿದ್ದಾರೆ ಎಂದು ಬಿಜೆಪಿ ಶಾಸಕ ಡಾ.ಅಶ್ವಥ್ ನಾರಾಯಣ (Ashwath Narayan) ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರುದ್ರಗೌಡ ಪಾಟೀಲ್ ಬೇಲ್ ಮೇಲೆ ಬಂದು ಮತ್ತೆ ಅಕ್ರಮವೆಸಗಿದ್ದಾನೆ. ಪಾಟೀಲ್ ಪರೀಕ್ಷಾ ಅಕ್ರಮ ನಡೆಸುವುದನ್ನು ಹವ್ಯಾಸ ಮಾಡಿಕೊಂಡಿದ್ದಾನೆ. ಅಕ್ರಮದ ಮಾಹಿತಿ ಬಂತು ಅಂತ ತಡೆದಿರುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅವರಿಗೇನೂ ಮಾಹಿತಿ ಬಂದಿಲ್ಲ. ಆದರೆ ರುದ್ರಗೌಡ ಪಾಟೀಲ್ನ ಅಕ್ರಮಕ್ಕೆ ಸರ್ಕಾರದ ಕುಮ್ಮಕ್ಕು, ಸಹಕಾರ ಇದೆ. ಈ ಸರ್ಕಾರದಲ್ಲಿ ಪ್ರತಿಭಾವಂತ ಅಭ್ಯರ್ಥಿಗಳಿಗೆ ಮೋಸ ಆಗುತ್ತಿದೆ. ಕೆಇಎ ಪರೀಕ್ಷಾ ಅಕ್ರಮ ಹೊಣೆಯನ್ನು ಸಚಿವರೇ ಹೊತ್ತುಕೊಳ್ಳಬೇಕು. ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬ್ಲೂಟೂತ್ ಬಳಸಿ FDA ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನ: ಈ ಪ್ರಕರಣದಲ್ಲೂ ಆರ್ಡಿ ಪಾಟೀಲ್ ಪ್ರಮುಖ ಆರೋಪಿ
ಕಾಂಗ್ರೆಸ್ನವರೇ ಹೊಡೆದಾಡಿಕೊಂಡು ಸರ್ಕಾರ ಬೀಳಿಸಿಕೊಳ್ಳುತ್ತಾರೆ
ನಾವೇನು ಆಪರೇಷನ್ ಕಮಲ ಮಾಡಲ್ಲ. ಕಾಂಗ್ರೆಸ್ನವರೇ ಹೊಡೆದಾಡಿಕೊಂಡು ಸರ್ಕಾರ ಬೀಳಿಸಿಕೊಳ್ಳುತ್ತಾರೆ. ಈ ಹಿಂದೆ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಸ್ಥಾನ ಕೇಳಿರಲಿಲ್ಲ. ಡಿಸಿಎಂ ಮಾಡಿ ಮಾಡಿ ಡಾ.ಪರಮೇಶ್ವರ್ ಗೋಗರೆದರೂ ಮಾಡಲಿಲ್ಲ. ಈಗ ಡಾ.ಪರಮೇಶ್ವರ್ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಯಾ ಪೈಸೆ ಅಭಿವೃದ್ಧಿಯಾಗಿಲ್ಲ. ಕಾಂಗ್ರೆಸ್ ಶಾಸಕ ರವಿ ಗಣಿಗಗೆ ರಾಜ್ಯ ಸರ್ಕಾರ ಅನುದಾನ ಕೊಡುತ್ತಿಲ್ಲ. ಅದಕ್ಕಾಗಿ ನಮಗೆ ಆಫರ್ ಇದೆ ಅಂತಾ ಬಹಿರಂಗವಾಗಿ ಹೇಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸುಳ್ಳುಬುರುಕ ಎಂದು ವಾಗ್ದಾಳಿ ಮಾಡಿದರು.
ವಯಸ್ಸಾಗುತ್ತಿದ್ದಂತೆ ಸಿದ್ದರಾಮಯ್ಯಗೆ ಸುಳ್ಳು ಹೇಳುವ ಪರಿಸ್ಥಿತಿ ಬಂದಿದೆ
ವಯಸ್ಸಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯಗೆ ಅನೇಕ ಸುಳ್ಳು ಹೇಳುವ ಪರಿಸ್ಥಿತಿ ಬಂದಿದೆ. ಸಿಎಂ, ಡಿಸಿಎಂ, ಆ ಗುಂಪು, ಈ ಗುಂಪು ಅಂತ ಅನೇಕ ಸಭೆ ಮಾಡುತ್ತಿದ್ದಾರೆ. ದುಬೈ ಹೋಗುವುದು, ಹೊಸ ಕಾರ್ ಖರೀದಿ ಮಾಡುವುದು, ಕಚೇರಿ ನವೀಕರಣ ಮಾಡುವುದು ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ನಯಾ ಪೈಸೆ ಅಭಿವೃದ್ಧಿ ಮಾಡಿಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Mon, 30 October 23