ಲೋಕಸಭೆ ಸಿಟು ಹಂಚಿಕೆ ಬಗ್ಗೆ ಜೆಪಿ ನಡ್ಡಾ, ಅಮಿತ್ ಶಾ ಜತೆ ಶುಕ್ರವಾರ ಕುಮಾರಸ್ವಾಮಿ ಮಾತುಕತೆ: 6 ಸ್ಥಾನಕ್ಕೆ ಬೇಡಿಕೆ ಸಾಧ್ಯತೆ
BJP-JDS alliance: ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಅವರೊಂದಿಗೆ ಅಕ್ಟೋಬರ್ 22 ರಂದು ಗೋವಾ ಸಿಎಂ ಅವರನ್ನು ಭೇಟಿ ಮಾಡಿ, ಸೀಟು ಹಚಿಕೆ ಕುರಿತಂತೆ ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆಸುವಂತೆ ಮನವಿ ಮಾಡಿದ್ದರು. ಅದರಂತೆ, ಅಂತಿಮ ಸುತ್ತಿನ ಮಾತುಕತೆಗಾಗಿ ನವೆಂಬರ್ 3 ರಂದು ದೆಹಲಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದೆ.
ಬೆಂಗಳೂರು, ಅಕ್ಟೋಬರ್ 30: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ನವೆಂಬರ್ 3 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರನ್ನು ಭೇಟಿ ಮಾಡಲಿದ್ದಾರೆ. ಇದೇ ವೇಳೆ, ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ. ಮತ್ತೊಂದೆಡೆ, ರಾಜ್ಯ ಬಿಜೆಪಿ ನಾಯಕರಿಗೆ ಈ ಬೆಳವಣಿಗೆಗಳ ಬಗ್ಗೆ ತಿಳಿದಿಲ್ಲ ಮತ್ತು ಕೇಂದ್ರ ನಾಯಕರ ಜತೆ ಮಾತುಕತೆಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಅವರೊಂದಿಗೆ ಇತ್ತೀಚೆಗೆ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಮೈತ್ರಿ ಮಾತುಕತೆ ಅಂತಿಮಗೊಳಿಸಿದ್ದರು. ಬಳಿಕ ಸೀಟು ಹಂಚಿಕೆ ಬಗ್ಗೆ ದಸರಾ ಹಬ್ಬದ ನಂತರ ತೀರ್ಮಾನ ಕೈಗೊಳ್ಳಲಾಗವುದು ಎಂದು ಕುಮಾರಸ್ವಾಮಿ ಹೇಳಿದ್ದರು.
ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಅವರೊಂದಿಗೆ ಅಕ್ಟೋಬರ್ 22 ರಂದು ಗೋವಾ ಸಿಎಂ ಅವರನ್ನು ಭೇಟಿ ಮಾಡಿ, ಸೀಟು ಹಚಿಕೆ ಕುರಿತಂತೆ ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆಸುವಂತೆ ಮನವಿ ಮಾಡಿದ್ದರು. ಅದರಂತೆ, ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸೀಟು ಹಂಚಿಕೆ ಕುರಿತು ಅಂತಿಮ ಸುತ್ತಿನ ಮಾತುಕತೆಗಾಗಿ ನವೆಂಬರ್ 3 ರಂದು ದೆಹಲಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಕುಮಾರಸ್ವಾಮಿ ಅವರು ತಮ್ಮ ಪತ್ನಿಯೊಂದಿಗೆ ಸದ್ಯ ದುಬೈನಲ್ಲಿದ್ದು, ಅಲ್ಲಿಂದಲೇ ನೇರವಾಗಿ ಬಿಜೆಪಿ ಕೇಂದ್ರ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಲಿದ್ದಾರೆ.
ಏತನ್ಮಧ್ಯೆ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಇನ್ನೂ ಸಮಾಲೋಚನೆ ನಡೆಯದ ಕಾರಣ ರಾಜ್ಯ ಬಿಜೆಪಿ ನಾಯಕರಿಗೆ ಈ ಬೆಳವಣಿಗೆಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಲಾಗುತ್ತಿದೆ. ಕುಮಾರಸ್ವಾಮಿ ಅವರು ಸೆಪ್ಟೆಂಬರ್ 22 ರಂದು ಶಾ ಮತ್ತು ನಡ್ಡಾ ಅವರನ್ನು ಭೇಟಿಯಾದಾಗಿನಿಂದ, ಬಿಜೆಪಿ ಹೈಕಮಾಂಡ್ ಮಾತುಕತೆಯನ್ನು ಮುಂದಕ್ಕೆ ಕೊಂಡೊಯ್ಯಲು ರಾಜ್ಯದಿಂದ ಯಾವುದೇ ನಾಯಕರನ್ನು ನಿಯೋಜಿಸಿಲ್ಲ. ಇದರಿಂದಾಗಿ ಜೆಡಿಎಸ್ ನಾಯಕರು ಗೋವಾ ಸಿಎಂ ಅವರನ್ನು ಭೇಟಿಯಾಗಬೇಕಾಯಿತು.
ಇದನ್ನೂ ಓದಿ: ಚುನಾವಣಾ ಪೂರ್ವದಲ್ಲಿ ಡಿಕೆ ಶಿವಕುಮಾರ್ ಕಾಲು ಹಿಡಿಯಲು ರಮೇಶ್ ಜಾರಕಿಹೊಳಿ ಬಂದಿದ್ದರು; ರವಿ ಗಣಿಗ
ಸೆಪ್ಟೆಂಬರ್ 22 ರಂದು ದೆಹಲಿಯಲ್ಲಿ ನಡೆದ ಸಭೆಯಲ್ಲೂ ರಾಜ್ಯ ನಾಯಕರು ಯಾರೂ ಹಾಜರಾಗದ ಕಾರಣ ಬಿಜೆಪಿ ಕೇಂದ್ರ ನಾಯಕರು ಜೆಡಿಎಸ್ ನಾಯಕರೊಂದಿಗೆ ಸಂವಹನ ನಡೆಸುವ ಹೊಣೆಯನ್ನು ಸಿಎಂ ಸಾವಂತ್ ಅವರಿಗೆ ನೀಡಿದ್ದರು.
ಆರು ಸ್ಥಾನಗಳಿಗೆ ಜೆಡಿಎಸ್ ಬೇಡಿಕೆ ಸಾಧ್ಯತೆ
ಲೋಕಸಭೆ ಚುನಾವಣೆಗೆ ಐದರಿಂದ ಆರು ಸ್ಥಾನಗಳನ್ನು ಪಡೆಯಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಆದರೆ, ಜೆಡಿಎಸ್ ಗೆ ನಾಲ್ಕು ಸ್ಥಾನ ಬಿಟ್ಟುಕೊಡಲು ಬಿಜೆಪಿ ನಾಯಕತ್ವ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಸೀಟು ಹಂಚಿಕೆ ಸೂತ್ರದ ಕುರಿತು ಈ ವಾರ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.
ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಡಲಿದೆ ಎನ್ನಲಾಗಿದೆ. 2019 ರ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು.
ರಾಜಕಾರಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ