ಮಂಡ್ಯ-ಚನ್ನಪಟ್ಟಣ ಜೆಡಿಎಸ್ ಮುಖಂಡರ ನಡುವೆ ಗಲಾಟೆ: ಕುಮಾರಣ್ಣನ ಚಿತ್ತ ಎತ್ತ..?

| Updated By: Rakesh Nayak Manchi

Updated on: Mar 25, 2024 | 3:23 PM

ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಅದರಂತೆ, ಬಿಜೆಪಿ ಬೆಂಬಲಿತ ಹಾಲಿ ಸಂಸದೆ ಸುಮಲತಾ ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇನ್ನೊಂದೆಡೆ, ಹೆಚ್​ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸಬೇಕು ಎಂದು ಮಂಡ್ಯ ಜೆಡಿಎಸ್ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಚನ್ನಪಟ್ಟಣದ ಜೆಡಿಎಸ್ ಕಾರ್ಯಕರ್ತರು, ಮಂಡ್ಯ ಕಾರ್ಯಕರ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಕುಮಾರಸ್ವಾಮಿ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಮಂಡ್ಯ-ಚನ್ನಪಟ್ಟಣ ಜೆಡಿಎಸ್ ಮುಖಂಡರ ನಡುವೆ ಗಲಾಟೆ: ಕುಮಾರಣ್ಣನ ಚಿತ್ತ ಎತ್ತ..?
ಮಂಡ್ಯ-ಚನ್ನಪಟ್ಟಣ ಜೆಡಿಎಸ್ ಮುಖಂಡರ ನಡುವೆ ಗಲಾಟೆ: ಇಂದು ಸಂಜೆ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ ಕುಮಾರಸ್ವಾಮಿ
Follow us on

ಬೆಂಗಳೂರು, ಮಾ.25: ಕಳೆದ ಲೋಕಸಭಾ ಚುನಾವಣೆ (Lok Sabha Elections) ಸಂದರ್ಭದಲ್ಲಿ ಇಡೀ ರಾಜ್ಯವೇ ಮಂಡ್ಯ (Mandya) ಲೋಕಸಭಾ ಕ್ಷೇತ್ರದ ಚಿತ್ತ ಹರಿಸಿತ್ತು. ಬಿಜೆಪಿ ಬೆಂಬಲಿತ ಸುಮಲತಾ ಅಂಬರೀಶ್ ಮತ್ತು ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನಡುವೆ ತೀವ್ರ ಪೈಪೋಟಿ ನಡೆದು ಸುಮಲತಾ ಅವರು ಗೆದ್ದು ಬೀಗಿದ್ದರು. ಇದೀಗ ಈ ಬಾರಿಯ ಚುನಾವಣೆಯಲ್ಲೂ ಮಂಡ್ಯ ಕ್ಷೇತ್ರ ಸುದ್ದು ಮಾಡುತ್ತಿದೆ. ಒಂದೆಡೆ, ಟಿಕೆಟ್ ಕೈತಪ್ಪುವ ಸುಳಿಸುವ ಪಡೆದಿರುವ ಸುಮಲತಾ ಅವರು ಪಕ್ಷೇತರವಾಗಿ ಕಣಕ್ಕಿಳಿಯಬೇಕು ಎಂದು ಬೆಂಬಲಿಗರು ಒತ್ತಡ ಹೇರುತ್ತಿದ್ದರೆ, ಇನ್ನೊಂದೆಡೆ, ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಸ್ಪರ್ಧೆ ಮಾಡಬೇಕು ಎಂದು ಮಂಡ್ಯ ಜೆಡಿಎಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ಸ್ಪರ್ಧೆಗೆ ಚನ್ನಪಟ್ಟಣ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇದೇ ವಿಚಾರವಾಗಿ ಕಾರ್ಯಕರ್ತರ ಜೊತೆ ಸಭೆಗಳನ್ನು ನಡೆಸಿದ್ದ ಕುಮಾರಸ್ವಾಮಿ ಅವರು ಇಂದು ಅಂತಿಮ ಸುತ್ತಿನ ಸಭೆ ನಡೆಸಿದ್ದಾರೆ. ಕುಮಾರಸ್ವಾಮಿ ನಿವಾಸದಲ್ಲಿ ನಡೆದ ಚನ್ನಪಟ್ಟಣ ಮುಖಂಡರ ಸಭೆಯಲ್ಲಿ, ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರ ಬಿಟ್ಟು ಹೋಗದಂತೆ ಮುಖಂಡರು ಪಟ್ಟು ಹಿಡಿದಿದ್ದಾರೆ. ಅದಾಗ್ಯೂ, ಮಂಡ್ಯದಲ್ಲಿ ಪರಿಸ್ಥಿತಿ ಬೇರೆ ಇದೆ. ನಾನು ಮಂಡ್ಯದಿಂದ ಸ್ಪರ್ಧೆ ಮಾಡಲು ಸಾಕಷ್ಟು ಒತ್ತಡ ಇದೆ. ಹೀಗಾಗಿ ಯಾರು ಬೇಸರ ಮಾಡಿಕೊಳ್ಳಬೇಡಿ ಎಂದು ಮನವೊಲಿಕೆ ಮಾಡಿದ ಕುಮಾರಸ್ವಾಮಿ, ಸಂಜೆಯೊಳಗೆ ನನ್ನ ನಿರ್ಧಾರ ತಿಳಿಸುತ್ತೇನೆ ಎಂದಿದ್ದಾರೆ.

ಕುಮಾರಸ್ವಾಮಿ ಮನೆ ಮುಂದೆ ಮುಖಂಡರ ಹೈಡ್ರಾಮಾ

ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಚನ್ನಪಟ್ಟಣದ ಶಾಸಕ ಹೆಚ್​ಡಿ ಕುಮಾರಸ್ವಾಮಿ ಮನೆ ಮುಂದೆ ಮುಖಂಡರ ಹೈಡ್ರಾಮಾವೇ ನಡೆಯಿತು. ಕ್ಷೇತ್ರ ಬಿಟ್ಟು ಹೋಗದಂತೆ ಕುಮಾರಸ್ವಾಮಿಯನ್ನು ಒತ್ತಾಯಿಸುತ್ತಿರುವ ಚನ್ನಪಟ್ಟಣ ಜೆಡಿಎಸ್​ ಮುಖಂಡರು ಮತ್ತು ಕುಮಾರಸ್ವಾಮಿ ಲೋಕಸಭೆ ಸ್ಪರ್ಧೆಗೆ ಒತ್ತಾಯಿಸುತ್ತಿರುವ ಮಂಡ್ಯ ಕ್ಷೇತ್ರದ ಜೆಡಿಎಸ್ ಮುಖಂಡರ ನಡುವೆ ಗಲಾಟೆ, ವಾಗ್ವಾದ ನಡೆಯಿತು. ಗಲಾಟೆ ವೇಳೆ ಕಾರ್ಯಕರ್ತರೊಬ್ಬರು ಕೈ ಕೊಯ್ದುಕೊಂಡಿದ್ದಾರೆ.

ಮಂಡ್ಯದಲ್ಲಿ ನಿಖಿಲ್ ನಿಂತಾಗ ನೀವು ಅವರ ಕೈ ಹಿಡಿದಿರಲಿಲ್ಲ. ನಾವು ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದಲ್ಲಿ ಉಳಿಸಿಕೊಂಡಿದ್ದೇವೆ ಎಂದು ಮಂಡ್ಯ ಜೆಡಿಎಸ್ ಕಾರ್ಯಕರ್ತರನ್ನು ಚನ್ನಪಟ್ಟಣದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಯಾವುದೇ ಕಾರಣಕ್ಕೆ ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಹೋಗಬಾರದು ಎಂದು ಆಗ್ರಹಿಸಿದರು. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನ ಗೆಲ್ಲಿಸಿ ಎಂದೂ ಒತ್ತಾಯಿಸಿದರು.

ಇದನ್ನೂ ಓದಿ: ಮಂಡ್ಯ ಗೆಲ್ಲಲು ಸಂಧಾನ ಸೂತ್ರಕ್ಕೆ ಮೊರೆ ಹೋದ ದಳಪತಿಗಳು; ಸಮನ್ವಯತೆ ಸಾಧಿಸಲು ಸರ್ಕಸ್

ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಮಾತನಾಡಿದ ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್, ತಮ್ಮ ತಂದೆ ಕುಮಾರಸ್ವಾಮಿ ಅವರು ಚನ್ನಪಟ್ಟಣದ ಶಾಸಕರಾಗಿದ್ದಾರೆ. ಆದರೆ ಅವರು ಮಂಡ್ಯದಿಂದ ಸ್ಪರ್ಧಿಸುವಂತೆ ಒತ್ತಡವಿದೆ. ಇಂದು ಎಲ್ಲ ಮುಖಂಡರ ಅಭಿಪ್ರಾಯ ಕಲೆಹಾಕುತ್ತಿದ್ದೇವೆ. ನಾಳೆ ಕೋರ್ ಕಮಿಟಿ ಸದಸ್ಯರ ಮೀಟಿಂಗ್ ಕರೆದಿದ್ದೇವೆ. ನಾಳೆ ಮಾತಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

2018 ರಲ್ಲಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದರು. ಅದಕ್ಕೂ ಮುಂಚೆ ಚನ್ನಪಟ್ಟಣ ಮತದಾತರರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಎರಡು ಕಡೆ ಸ್ಪರ್ಧೆ ಮಾಡಿದ್ದರು. ಪಂಚರತ್ನ ಕಾರ್ಯಕ್ರಮದ ಹಿನ್ನೆಲೆ ಸಾಕಷ್ಟು ಸರಿ ಚನ್ನಪಟ್ಟಣಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಆದರೂ ತಾವೇ ಕುಮಾರಣ್ಣ ಅಂದುಕೊಂಡು ಓಡಾಟ ನಡೆಸಿ ಗೆಲ್ಲಿಸಿದ್ದರು ಎಂದು ಹೇಳುವ ಮೂಲಕ ಚನ್ನಪಟ್ಟಣದ ಕಾರ್ಯಕರ್ತರು ಮತ್ತು ಮುಖಂಡರ ಶ್ರಮವನ್ನು ಸ್ಮರಿಸಿದರು. ಮಂಡ್ಯದಲ್ಲಿ ತಾವು ಸ್ಪರ್ಧಿಸುತ್ತೀರಾ ಎನ್ನುವ ಪ್ರಶ್ನೆಗೆ ನಿಖಿಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಒಂದೆಡೆ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯಗಳು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಅದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಒಂದು ರೀತಿಯಲ್ಲಿ ಒತ್ತಡ ಹಾಗೂ ಇಕ್ಕಟ್ಟಿನಲ್ಲಿ ಸಿಲುಕಿರುವ ಹೆಚ್​ಡಿ ಕುಮಾರಸ್ವಾಮಿ ಅವರ ಚಿತ್ತ ಎತ್ತ ಎನ್ನುವ ಕುತೂಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Mon, 25 March 24