ಮಂಡ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣ ರಾಜ ಸಾಗರ ಅಣೆಕಟ್ಟಿಗೆ (ಕೆಆರ್‌ಎಸ್) ಬಾಗಿನ ಅರ್ಪಿಸಿದ್ದಾರೆ. ಅಣೆಕಟ್ಟು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ಮಾಡಲಾಗಿದೆ. ಸಚಿವರಾದ ಗೋವಿಂದ ಕಾರಜೋಳ, ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಖ್ಯಾತ ಜ್ಯೋತಿಷಿ ಭಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ಸಿಎಂ ಬೊಮ್ಮಾಯಿ ಮೈಸೂರಿನಲ್ಲಿ ನಡೆದ ಕಬಿನಿಗೆ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾವೇರಿ ಮಾತೆಗೆ ಬಾಗೀನ ಸಲ್ಲಿಸಿದ ನಂತರ ವೇದಿಕೆಯಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ದು, ‘‘ಸಂತೋಷದಿಂದ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಲಾಗಿದೆ. ಕೆ ಆರ್ಎಸ್ಗೆ ಒಂದು ಇತಿಹಾಸ ಇದೆ. ಒಂದು ಕ್ಷಣ ಆ ದಿನದ ಮಹಾರಾಜರು, ಆಡಳಿತಗಾರರರು, ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ಮನಸು ಮಾಡದಿದ್ದರೆ ಈ ಭಾಗ ನೀರಾವರಿ ಪ್ರದೇಶವಾಗುತ್ತಿರಲಿಲ್ಲ. ಕಾವೇರಿ ಮಾತೆ ನಮಗೆ ಹಲವು ದಶಕಗಳಿಂದ ಅನ್ನ ನೀರು ಕೊಡ್ತಿದ್ದಾಳೆ. ಡ್ಯಾಂ ಅನ್ನು ನಾವು ಬರುವ 100 ವರ್ಷಕ್ಕೆ ಬಳಕೆಯಾಗಬೇಕಾದರೆ, ರಕ್ಷಣೆ ಮತ್ತು ಆಧುನೀಕರಣಗೊಳಿಸಬೇಕಿರೋದು ಅವಶ್ಯಕವಾಗಿದೆ’’ ಎಂದು ನುಡಿದಿದ್ದಾರೆ.
‘‘ನಾನು ಡ್ಯಾಂ ಗೆ ಭೇಟಿ ನೀಡಿದ್ದ ವೇಳೆ, ಡ್ಯಾಂ ನಲ್ಲಿ ನೀರು ಪೋಲಾಗುತ್ತಿತ್ತು. ಡ್ಯಾಂನ ಗೇಟ್ ಗಳು ಬದಲಾವಣೆ ಮಾಡಬೇಕಿರುವುದು ಅನಿವಾರ್ಯವಾಗಿತ್ತು. ಆ ಬಗೆಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಗೇಟ್ ಬದಲಾವಣೆಗೆ ರೂಪು ರೇಷೆ ತಯಾರಿಸಲಾಯ್ತು. ಆರಂಭದಲ್ಲಿ 16 ಗೇಟ್ ಗಳು ನಂತರ 5 ಗೇಟ್ ಗಳು, ಈಗ 130 ಪ್ಲಸ್ ಅಡಿಯಲ್ಲಿ ಬರುವ ಗೇಟ್ ಗಳನ್ನ ಪೂರ್ಣಗೊಳಿಸೊ ಕೆಲಸ ನಡೆಯುತ್ತಿದೆ. ಡ್ಯಾಂ ಭದ್ರತೆ ಬರೋದು ಗೇಟ್ ಗಳನ್ನ ಬದಲಾಯಿಸಿದಾಗ. ಹಾಗಾಗಿ ಗೇಟ್ ಗಳನ್ನ ಬದಲಾಯಿಸೊ ಕೆಲಸ ಶೀಘ್ರವಾಗಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ’’ ಎಂದು ಬೊಮ್ಮಾಯಿ ಹೇಳಿದ್ದಾರೆ.
ವಿಸಿ ನಾಲೆಯನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸೊ ಕೆಲಸ ತ್ವರಿತವಾಗಿ ನಡೆಯಬೇಕಿದೆ. ನವಂಬರ್ ತಿಂಗಳಲ್ಲಿ ಡ್ಯಾಂ ತುಂಬಿರೋದು ಅಪರೂಪದ ಸಂದರ್ಭ. 2012 ರಲ್ಲಿ ಬಹಳ ಗಂಭೀರವಾದ ಪರಿಸ್ಥಿತಿ ಇತ್ತು. ಸುಪ್ರೀಂ ಕೋರ್ಟ್ ನಲ್ಲಿ 14 ಟಿಎಂ ಸಿ ನೀರು ಬಿಡುವಂತೆ ಸೂಚಿಸಿತ್ತು. ಆದ್ರೆ ಆಗ ಡ್ಯಾಂನಲ್ಲಿ ಅಷ್ಟು ನೀರಿರಲಿಲ್ಲ. ನಂತರ ಕಾವೇರಿ ಮಾತೆಯ ದಯೆಯಿಂದ ಡ್ಯಾಂ ನವಂಬರ್ ನಲ್ಲೇ ಭರ್ತಿಯಾಗಿತ್ತು. ಡ್ಯಾಂ ಸಾರ್ವಜನಿಕ ಆಸ್ತಿಯಾಗಿದ್ದು, ಅದನ್ನ ಉಳಿಸಿಕೊಂಡು ಹೋಗಬೇಕಿರೋದು ಸರ್ಕಾರದ ಕರ್ತವ್ಯ. ಕಾವೇರಿ ಜಲಾನಯನ ಪ್ರದೇಶದ ಇತರೇ ಯೋಜನೆಗಳಿಗೂ ಪ್ರಾಮುಖ್ಯತೆ ಕೊಡಲಾಗುವುದು. ಕೃಷ್ಣ ಹಾಗೂ ಕಾವೇರಿ ಜಲಾನಯನ ಪ್ರದೇಶ ಸಮೃದ್ದಿಯಾದರೆ ರಾಜ್ಯ ಸಮೃದ್ದಿಯಾಗಲಿದೆ ಎಂದು ಬೊಮ್ಮಾಯಿ ನುಡಿದಿದ್ದಾರೆ.
ಕಬಿನಿಗೆ ಬಾಗಿನ ಅರ್ಪಿಸಿದ ಸಿಎಂ ಬೊಮ್ಮಾಯಿ:
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಸಿಎಂ ಬೊಮ್ಮಾಯಿರಿಂದ ಬಾಗಿನ ಅರ್ಪಿಸಿದ್ದಾರೆ. ಅವರಿಗೆ ಸಚಿವರಾದ ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್, ಶಾಸಕ ಅನಿಲ್ ಚಿಕ್ಕಮಾದು ಸಾಥ್ ನೀಡಿದ್ದಾರೆ. ನಂತರ ಮಾತನಾಡಿದ ಬೊಮ್ಮಾಯಿ, ರಾಜ್ಯದಲ್ಲಿ ಜಲಾಶಯಗಳು ತುಂಬಿವೆ. ಜಲಾಶಯಗಳಿಗೆ ಬಾಗಿನ ಅರ್ಪಿಸುವುದು ಸಂತಸದ ವಿಚಾರ. ರೈತರಿಗೆ ಖುಷಿಯಾದರೆ ನಮಗೆ ಸಂತೋಷ’’ ಎಂದಿದ್ದಾರೆ. ಕಬಿನಿ ಡ್ಯಾಂ ಬಳಿ ಬೃಂದಾವನ ಮಾದರಿ ಮಾಡುವ ಪ್ರಸ್ತಾಪದ ಕುರಿತಂತೆ ಅದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಸಿಎಂ ನುಡಿದಿದ್ದಾರೆ.
ಪುನೀತ್ ಎಲ್ಲಾ ಗೌರವಕ್ಕೆ ಅರ್ಹರು; ಸಿಎಂ ಬೊಮ್ಮಾಯಿ:
ಪುನೀತ್ ರಾಜ್‌ಕುಮಾರ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡುವ ಕುರಿತು ಪ್ರತಿಕ್ರಿಯಿಸಿದ ಸಿಎಂ, ಪುನೀತ್ ರಾಜ್‌ಕುಮಾರ್ ಬಗ್ಗೆ ನಮಗೆ ಅಪಾರ ಗೌರವ ಇದೆ. ಸಿದ್ದರಾಮಯ್ಯ ತಮ್ಮ ಪ್ರಸ್ತಾವ ಸಲ್ಲಿಸಲಿ, ಪರಿಶೀಲಿಸುತ್ತೇವೆ. ಎಲ್ಲದಕ್ಕೂ ಒಂದು ನಿಯಮ ಪಾಲನೆ ಇರುತ್ತದೆ. ಅದರ ಅಡಿಯಲ್ಲಿ ನಾವು ಸಾಗುತ್ತೇವೆ. ನಟ ಪುನೀತ್ ರಾಜ್‌ಕುಮಾರ್ ಎಲ್ಲ ಗೌರವಕ್ಕೂ ಅರ್ಹರು ಎಂದು ಮೈಸೂರು ಜಿಲ್ಲೆ ಬೀಚನಹಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
UPSC Exam: ಯುಪಿಎಸ್ಸಿ ಪರೀಕ್ಷೆಯಲ್ಲಿ ಇಂಜಿನಿಯರ್ಗಳೇ ಹೆಚ್ಚು ಯಶಸ್ವಿ ಆಗುತ್ತಿರುವುದೇಕೆ?
Dhanteras 2021: 1 ರೂಪಾಯಿಗೂ ಚಿನ್ನ ಖರೀದಿಸಿ; ಶುದ್ಧತೆ, ತೆರಿಗೆ, ಆನ್ಲೈನ್ ಖರೀದಿ ಹೇಗೆಂದು ತಿಳಿಯಿರಿ
Published On - 1:43 pm, Tue, 2 November 21