ಮಂಡ್ಯ: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಪುತ್ರಿ ನಿಶಾ ಮಾಲೀಕತ್ವದ ಕಂಪನಿ ಬಾಡಿಗೆ ಬಾಕಿ ಉಳಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮದ ಮುಂದೆ ಸತ್ಯ ಹೇಳಿದ್ದಕ್ಕೇ TAPCMS ಅಧ್ಯಕ್ಷ ಅವಾಜ್ ಹಾಕಿದ ಘಟನೆ ನಡೆದಿದೆ. ಮದ್ದೂರು TAPCMS ನಿರ್ದೇಶಕಿ ಇಂದಿರಾಗೆ ಕರೆ ಮಾಡಿ TAPCMS ಅಧ್ಯಕ್ಷ ಮಹದೇವು ಅವಾಜ್ ಹಾಕಿ ಬೆದರಿಕೆ ಹಾಕಿದ್ದಾರಂತೆ.
ನಿಶಾ ಮಾಲೀಕತ್ವದ ಡೆಕನ್ ಆಗ್ರೋ ಕಂಪನಿ ಬಾಡಿಗೆ ಬಾಕಿ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದಕ್ಕೇ ಸಂಸ್ಥೆಯ ಅಧ್ಯಕ್ಷನಾಗಿ ಹೇಳ್ತಿದ್ದೀನಿ ಇದು ಒಳ್ಳೆಯ ಬೆಳವಣಿಗೆಯಲ್ಲ. ನಮಗೂ ದಕ್ಕೆಯಾದಾಗ ನಾವು ಸುಮ್ಮನೇ ಇರುವುದಿಲ್ಲ. ಟಿವಿಯಲ್ಲಿ ಕೇಳಿದಾಗ ಆಡಳಿತ ಮಂಡಳಿಗೆ ಸಂಬಂಧಪಟ್ಟಿದ್ದ ಅಂತ ಹೇಳಬೇಕಿತ್ತು. ಇದೇ ವಿಚಾರಕ್ಕೆ ತುರ್ತು ಮೀಟಿಂಗ್ ಕರೆಯುತೇನೆ ಎಂದು ಆವಾಜ್ ಹಾಕಿ ಬೆದರಿಕೆ ಹಾಕಿದ್ದಾರಂತೆ.
2017 ರ ಏಪ್ರಿಲ್ನಲ್ಲಿ ನಿಶಾ, ಮದ್ದೂರು ಮಳವಳ್ಳಿ ರಸ್ತೆಯಲ್ಲಿರೋ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘಕ್ಕೆ ಸೇರಿದ 28 ಸಾವಿರ ಚದರ ಅಡಿ ಅಳತೆಯ ಗೋದಾಮು ಮತ್ತು ಖಾಲಿ ನಿವೇಶನವನ್ನ ಲೀಸ್ಗೆ ಪಡೆದುಕೊಂಡಿದ್ರು. ನಿಶಾ ಮಾಲೀಕತ್ವದ ಕಂಪನಿ ಹೆಸರಿಗೆ 30 ವರ್ಷಕ್ಕೆ ಲೀಸ್ ನೀಡಲಾಗಿತ್ತು. ಆದರೆ ಲೀಸ್ಗೆ ಪಡೆದಿದ್ದ ಜಾಗದಲ್ಲಿ ಇಂದಿಗೂ ಯಾವುದೇ ಉದ್ದಿಮೆ ನಡೆಸುತ್ತಿಲ್ಲ. ಹಾಗೇ ಲೀಸ್ ಒಪ್ಪಂದದಂತೆ 3 ವರ್ಷಕ್ಕೆ 1 ಬಾರಿ ಬಾಡಿಗೆ ಪಾವತಿ ಮಾಡಬೇಕಿತ್ತು. ನಿಶಾ ಒಡೆತನದ ಕಂಪನಿ ಇಂದಿಗೂ ಬಾಡಿಗೆ ಪಾವತಿ ಮಾಡಿಲ್ಲ ಅಂತಾ ಆರೋಪಿಸಲಾಗಿದೆ.
ಲೀಸ್ಗೆ ಪಡೆದಾಗಲೇ ಕಿರಿಕ್ ನಡೆದಿತ್ತು
ಅಂದಹಾಗೆ 2017 ರಲ್ಲಿ ಸಿ.ಪಿ.ಯೋಗೀಶ್ವರ್ ಪುತ್ರಿ ನಿಶಾ ಗೋದಾಮು ಲೀಸ್ ಪಡೆದುಕೊಂಡಾಗ್ಲೇ ಕಾನೂನು ಉಲ್ಲಂಘನೆ ಆರೋಪ ಕೇಳಿಬಂದಿತ್ತು. 2017 ರ ಏಪ್ರಿಲ್ 11 ರಂದು ನಿಶಾ ಗೋದಾಮು ಮತ್ತು ನಿವೇಶನ ಬಾಡಿಗೆಗೆ ಕೊಡುವಂತೆ ಸಂಘಕ್ಕೆ ಅರ್ಜಿ ಸಲ್ಲಿಸಿದ್ರು. ಇದಾದ ಮರುದಿನವೇ ಅಂದ್ರೆ ಏಪ್ರಿಲ್ 12 ರಂದು ಸಭೆ ಕರೆದಿದ್ದ ಆಡಳಿತ ಮಂಡಳಿ ಸದಸ್ಯರು ನಿವೇಶನ ಬಾಡಿಗೆಗೆ ಕೊಡುವ ವಿಚಾರ ಅಜೆಂಡಾದಲ್ಲಿ ಇಲ್ಲದಿದ್ರೂ ಅಧ್ಯಕ್ಷರ ಅಪ್ಪಣೆ ಮೇರೆಗೆ ಈ ವಿಚಾರ ಸೇರಿಸಿ ಅನುಮೋದನೆ ಪಡೆದುಕೊಂಡಿದ್ದರು. ಇನ್ನೂ ಏಪ್ರಿಲ್ 16ರಂದು ರಿಜಿಸ್ಟ್ರೇಷನ್ ಪೂರ್ಣಗೊಂಡಿತ್ತು. ಅವ್ಯವಹಾರ ನಡೆದಿದೆ ಎಂಬ ಬಗ್ಗೆ ಸಂಘದ ಕೆಲ ಸದಸ್ಯರು ಸಲ್ಲಿಸಿದ್ದ ದೂರಿನ ಅನ್ವಯ ತನಿಖೆ ಕೈಗೊಂಡಿದ್ದ ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರು, ನಿವೇಶನ ಹಾಗೂ ಗೋದಾಮನ್ನು ಬಾಡಿಗೆಗೆ ನೀಡುವ ಪ್ರಕ್ರಿಯೆಯಲ್ಲಿ ಸಹಕಾರ ಸಂಘಗಳ ಕಾಯ್ದೆ ಉಲ್ಲಂಘನೆಯಾಗಿದೆ ಅಂತಾ ಆಡಳಿತ ಮಂಡಳಿಯ 9 ಸದಸ್ಯರನ್ನ 3 ವರ್ಷ ಅನರ್ಹಗೊಳಿಸಿದ್ದರು.
ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರು ನೀಡಿದ್ದ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಆಡಳಿತ ಮಂಡಳಿ, ಉಪನಿಬಂಧಕರ ಆದೇಶಕ್ಕೆ ತಡೆಯಾಜ್ಞೆ ತಂದು ಆಡಳಿತ ಮುಂದುವರೆಸಿತ್ತು. ಇದೀಗ ಸಂಘಕ್ಕೆ ಚುನಾವಣೆ ನಡೆದು 1 ವರ್ಷವಾಗಿದ್ದು, ಆಗ ಸಹಕಾರ ಸಂಘದ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿದ್ದ ಮಹಾದೇವು ಅನ್ನೋರೆ ಈಗಲೂ ಸಂಘದ ಅಧ್ಯಕ್ಷರಾಗಿದ್ದಾರೆ. ಈ ಮಧ್ಯೆ ನಿಶಾ ಒಡೆತನದ ಕಂಪನಿ ಬಾಡಿಗೆ ಪಾವತಿ ಮಾಡದಿರೋದು ಭಾರಿ ಅನುಮಾನ ಮೂಡಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿಗೆ ಕಂಟಕ; ಕಾನೂನು ಹೋರಾಟಕ್ಕೆ ಟಿಎಪಿಸಿಎಂಎಸ್ ನಿರ್ಧಾರ
Published On - 10:13 am, Sun, 3 October 21