ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಕಾರ ಮಳೆ; ಪ್ರವಾಸಿ ತಾಣ ಮುತ್ತತ್ತಿ ಸುತ್ತಮುತ್ತ ನಿಷೇಧಾಜ್ಞೆ ಜಾರಿ
ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಕಾರ ಮಳೆ ಹಿನ್ನೆಲೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪ್ರವಾಸಿ ತಾಣ ಮುತ್ತತ್ತಿ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪ್ರವಾಸಿ ತಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮಂಡ್ಯ, ಜುಲೈ.27: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಕಾರ ಮಳೆ (Karnataka Rain) ಹಿನ್ನೆಲೆ ಪ್ರವಾಸಿ ತಾಣ ಮುತ್ತತ್ತಿ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ (Muthathi) ಪ್ರವಾಸಿ ತಾಣದಲ್ಲಿ ಅಪಾಯ ಹೆಚ್ಚಾಗಿತ್ತು. ಸದ್ಯ ಈಗ ಮಳವಳ್ಳಿ ತಹಶೀಲ್ದರ್ ಕೆ.ಎನ್. ಲೋಕೇಶ್ ಮುತ್ತತ್ತಿ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಸಿ ತಾಣ ಮುತ್ತತ್ತಿ ಕಾವೇರಿ ನದಿ ತಟದಲ್ಲಿ ಇದೆ. ಈ ಪ್ರವಾಸಿ ತಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈಗಾಗಲೇ ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ 30 ಮಂದಿ ಮೃತಪಟ್ಟಿರುವ ಬಗ್ಗೆ ವರದಿಗಳಾಗಿವೆ.
ಮಳವಳ್ಳಿ ತಾಲೂಕು, ಹಲಗೂರು ಹೋಬಳಿಯ ಮುತ್ತತ್ತಿ ರಸ್ತೆಯ ಗಾಣಾಳು ಜಲಪಾತದ ಬಳಿ ಸಾವಿನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ. ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ 50 ಸಾವಿರ ಕ್ಯುಸೆಕ್‌ವರೆಗೂ ನೀರನ್ನು ನದಿಗೆ ಬಿಡುತ್ತಿರುವ ಕಾರಣ, ಕಾವೇರಿ ನದಿ ದಂಡೆಯಲ್ಲಿ ಬರುವ ಪ್ರವಾಸಿ ತಾಣಗಳಿಗೆ ಪೊಲೀಸ್ ಮತ್ತು ಗೃಹ ರಕ್ಷಕ ಸಿಬ್ಬಂದಿ ನಿಯೋಜಿಸಿ, ಪ್ರವಾಸಿಗರನ್ನು ನಿಯಂತ್ರಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ನವಿ ಮುಂಬೈನಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ; ಹಲವಾರು ಮಂದಿ ಸಿಲುಕಿರುವ ಶಂಕೆ
ಮತ್ತೊಂದೆಡೆ ರಂಗನತಿಟ್ಟು ಪಕ್ಷಿಧಾಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಬೋಟಿಂಗ್ ವ್ಯವಸ್ಥೆ ಬಂದ್ ಮಾಡಲಾಗಿದ್ದು, ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಹೇಮಾವತಿ ನದಿ ಅಬ್ಬರದಿಂದಾಗಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಚಿಕ್ಕಮಂದಗೆರೆಯಲ್ಲಿ ನೂರಾರು ಎಕರೆ ಜಮೀನು ಜಲಾವೃತವಾಗಿವೆ.
ಕಬಿನಿ, KRS ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಿಂದ ಕೊಳ್ಳೆಗಾಲ ತಾಲೂಕಿನ ಹಂಪಾಪುರ, ಮುಳ್ಳೂರು, ಹಳೇ ಅಣಗಳ್ಳಿ, ದಾಸನಪುರ ಸೇರಿ 9 ಗ್ರಾಮಗಳಲ್ಲಿ ನೆರೆ ಭೀತಿ ಸೃಷ್ಟಿಯಾಗಿದೆ. ಇನ್ನು ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೊಳೆ ನರಸೀಪುರ ಪಟ್ಟಣದ ಕುವೆಂಪು ಬಡಾವಣೆಗೆ ನೀರು ನುಗ್ಗಿದ್ದು, 30ಕ್ಕೂ ಹೆಚ್ಚು ಮನೆಗಳು 3ಅಡಿಗೂ ಹೆಚ್ಚು ಮುಳುಗಡೆಯಾಗಿವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ