
ಮಂಡ್ಯ, (ಜೂನ್ 23): ಮನುಷ್ಯನಿಗೆ ಕಷ್ಟಗಳು ಬರುತ್ತಲೇ ಇರುತ್ತವೆ. ಅಂತಹ ಕಷ್ಟಗಳು ಕೂಡ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಆದ್ರೆ, ಇಲ್ಲೋರ್ವನಿಗೆ ತಾಯಿಯನ್ನು ಸಾಕಲಾಗದಷ್ಟು ಕಷ್ಟ, ಕಡುಬಡತನವಿದೆ. ಹೌದು….ಹೆತ್ತು, ಹೊತ್ತು ಸಾಕಿದ ತಾಯಿಗೆ (Mother) ವಯಸ್ಸಾದ ಕಾಲದಲ್ಲಿ ಆಸರೆಯಾಗಬೇಕಿದ್ದ ಮಗನೇ ಆಕೆಯನ್ನ ಅನಾಥ ಆಶ್ರಮಕ್ಕೆ ಸೇರಿಸಿಬಿಡಿ ಎಂದಿದ್ದಾನೆ. 70 ರಿಂದ 80 ವರ್ಷ ಇರುವ ವೃದ್ಧೆ ಮಾನಸಿಕ ಅಸ್ವಸ್ಥೆ, ಏನು ಮಾಡಲಾಗದ ಸ್ಥಿತಿಯಲ್ಲಿದ್ದಾಳೆ ಎನ್ನುವುದು ಒಂದು ಕಡೆಯಾದರೆ, ಮತ್ತೊಂದೆಡೆ ಮಗನಿಗೆ ಸಾಕಲಾಗುತ್ತಿಲ್ಲ ಎನ್ನುವುದು ಮತ್ತೊಂದು ಕಡೆ. ಇಂತಹ ಮನಕಲಕುವ ಘಟನೆ ಮಂಡ್ಯದಲ್ಲಿ (Mandya) ನಡೆದಿದ್ದು, ಕಣ್ಣಲ್ಲಿ ನೀರು ತರಿಸುತ್ತವೆ.
70 ರಿಂದ 80 ವರ್ಷ ಇರುವ ವೃದ್ಧೆ ತಾಯಿಯೊಬ್ಬರನ್ನು ಆಕೆಯ ಮಗನೇ ಮಂಡ್ಯದ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದಾನೆ. ಮಗನ ಕೃತ್ಯಕ್ಕೆ ತಾಯಿ ಅನಾಥಳಾಗಿ ರಸ್ತೆ ಬದಿಯಲ್ಲಿ ಕುಳಿತುಕೊಂಡಿದ್ದಳು. ಇದನ್ನೂ ಯಾರೋ ವಿಡಿಯೋ ಮಾಡಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ತಾಯಿನ ಬಿಟ್ಟು ಹೋದ ಮಗನಿಗೆ ಜನರು ಹಿಡಿ ಶಾಪ ಹಾಕಿದ್ದಾರೆ. ಇನ್ನು ಮಗನ ಸ್ಥಿತಿ ಕೇಳಿದ್ರೆ ಕರಳು ಚುರುಕ್ ಎನ್ನುತ್ತೆ.
ಮಾನಸಿಕ ಅಸ್ವಸ್ಥೆಯಾಗಿರುವ 70 ವರ್ಷದ ರುದ್ರಮ್ಮಳ ಇಂದು (ಜೂನ್ 23) ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲಿನಲ್ಲಿ ಅನಾಥವಾಗಿ ಸಿಕ್ಕಿದ್ದಾರೆ. ಸ್ಥಳೀಯರು ಆಕೆಗೆ ಊಟ ಕೊಟ್ಟು ಹಾರೈಕೆ ಮಾಡಿದ್ದಾರೆ. ಈ ವೇಳೆ ಮಗನೇ ಬಿಟ್ಟು ಹೋದ ಬಗ್ಗೆ ರುದ್ರಮ್ಮ ಹೇಳಿದ್ದಾರೆ. ಬರ್ತೀನಿ ಇಲ್ಲೆ ಇರು ಎಂದು ಹೇಳಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ. ಮಗ ಬರ್ತಾನೆ ಎಂದು ಕಾದಿದ್ದ ತಾಯಿ ಮಗನ ಕೃತ್ಯ ಅರಿಯದೆ ಅಕ್ಷರಶಃ ಅನಾಥಳಾಗಿದ್ದಾಳೆ. ಬಳಿಕ ಮಗನನ್ನು ಪತ್ತೆ ಮಾಡಿ ವಿಚಾರಿಸಿದರೆ ತಾಯಿಯನ್ನ ಸಾಕಲಾಗುತ್ತಿಲ್ಲ. ವೃದ್ದಾಶ್ರಮ ಸೇರಿಸಿಬಿಡಿ ಎಂದು ತನ್ನ ಕಷ್ಟಗಳನ್ನ ಹೇಳಿಕೊಂಡಿದ್ದಾನೆ.
ಸದ್ಯ ರುದ್ರಮ್ಮಳನ್ನ ರಕ್ಷಣೆ ಮಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆಸ್ಪತ್ರೆಗೆ ಬಂದ ಮಗ ಮಹದೇವಸ್ವಾಮಿ ತಾಯಿಯನ್ನ ನೋಡಿಕೊಳ್ಳಲಾಗಲ್ಲ ಎಂದಿದ್ದಾನೆ. ಬೆಂಗಳೂರಲ್ಲಿ ಬೀದಿ ವ್ಯಾಪಾರ ಮಾಡುತ್ತ ಜೀವನ ನಡೆಸುತ್ತಿದ್ದೇನೆ. ಸಾಲದ ಹೊರೆಯೂ ನನ್ನ ಮೇಲಿದೆ. ಸದ್ಯ ತಾಯಿಯನ್ನ ಸಾಕಲು ನನ್ನಿಂದಾಗಲ್ಲ. ಕಷ್ಟ ತೀರಿದ ಬಳಿಕ ತಾಯಿ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾನೆ. ಮಗನ ಮಾತಿನ ಬಳಿಕ ವೃದ್ಧೆಯನ್ನ ಅನಾಥಶ್ರಮಕ್ಕೆ ಸೇರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಒಂದೆಡೆ ವಯಸ್ಸಾದ ತಾಯಿ, ಮತ್ತೊಂದೆಡೆ ಕಡುಬಡತನ ಎದುರಿಸುತ್ತಿರುವ ಮಗ. ಆದರೂ ಎಷ್ಟೇ ಬಡತನವಿದ್ದರೂ ಮಗ ತಾಯಿಯನ್ನ ಕರೆದುಕೊಂಡು ಹೋಗಿ ಸಾಕಬಹುದಿತ್ತು. ಆದ್ರೆ, ಮಗನಿಗೆ ಅದು ಸಾಧ್ಯವಾಗುತ್ತಿಲ್ಲ. ಬದಲಿಗೆ ಕಷ್ಟ ತೀರಿದ ಬಳಿಕ ಕರೆದೊಯ್ಯುತ್ತೇನೆಂದು ಮಗ ತನ್ನ ಸಹಾಯಕತೆ ಹೊರಹಾಕಿದ್ದಾನೆ,
Published On - 6:01 pm, Mon, 23 June 25