ಮಂಡ್ಯ, ಅ.06: ಲಂಚ (bribe) ಸ್ವೀಕರಿಸುವಾಗ ಅಬಕಾರಿ ಕಾನ್ಸ್‌ಟೇಬಲ್ ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಘಟನೆ ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ಅಬಕಾರಿ ಕಚೇರಿಯಲ್ಲಿ ನಡೆದಿದೆ. ಇನ್ನು ಲೋಕಾಯುಕ್ತ ದಾಳಿ ವೇಳೆ ಅಬಕಾರಿ ಇನ್ಸ್ಪೆಕ್ಟರ್ ಗೀತಾ ಪರಾರಿಯಾಗಿದ್ದಾರೆ. ಅಬಕಾರಿ ಪೇದೆ ದೇವರಾಜು ಬಲೆಗೆ ಬಿದ್ದ ಅಧಿಕಾರಿ. ಇತ ಸುರೇಶ್ ಎಂಬಾತನಿಂದ 10 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಮಂಡ್ಯ ಲೋಕಾಯುಕ್ತ ಎಸ್ಪಿ ಸಜೀತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಚಾರ್ಜ್ಶೀಟ್ನಲ್ಲಿ ಜಮೀನು ಮಾಲೀಕನ ಹೆಸರು ಕೈಬಿಡಲು ಸುರೇಶ್ ಬಳಿ ಇನ್ಸ್ಪೆಕ್ಟರ್ ಗೀತಾ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗೀತಾ ಅವರ ಸೂಚನೆಯಂತೆ ಪೇದೆ ದೇವರಾಜು ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.
ಇನ್ನು ಬೀದರ್ ಜಿಲ್ಲೆಯಲ್ಲೂ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಹೌದು, ಹುಮ್ನಾಬಾದ್ ತಾಲೂಕಿನ ಹುಡುಗಿ ಗ್ರಾಮದ ಪ್ರಾಥಮಿಕ ಕೇಂದ್ರದ ಎಸ್ಡಿಎ ಅಧಿಕಾರಿ ಆಗಿ ಕೆಲಸ ಮಾಡುತ್ತಿದ್ದ ಸುನೀಲ್ ಕುಮಾರ್ ಎಂಬಾತ, ಹೆಲ್ತ್ ಇನ್ಸ್ಪೆಕ್ಟರ್ ಸಂಬಳ ಮಂಜೂರು ಮಾಡಲು 20 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು, ಅದನ್ನು ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಎನ್.ಎಂ.ಓಲೇಕಾರ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿದಾಗ ಸಿಕ್ಕಿಬಿದ್ದಿದ್ದಾನೆ.
ಇನ್ನು ಕಳೆದ ತಿಂಗಳು ಒಂದು ಲಕ್ಷ ಲಂಚ ಸ್ವೀಕರಿಸುವಾಗ ಬೀದರ್ ಜಿಲ್ಲೆಯ ಬಸವಕಲ್ಯಾಣ ತಹಶೀಲ್ದಾರ್ ಶಿವಾನಂದ ಬಿರಾದಾರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿತ್ತು. ಇವರು ಕೊಹಿನೂರು ನಾಡಕಚೇರಿ ಉಪ ತಹಶೀಲ್ದಾರ್ ಆಗಿದ್ದು, ಮುಚ್ಚಿಳಮ ಗ್ರಾಮದ ರೈತ ಸುಧೀರ್ ಎಂಬುವವರು ಜಮೀನು ಪಹಣಿ ಕೊಡುವಂತೆ ಕೇಳಿದ್ದರು. ಈ ಹಿನ್ನಲೆ ಉಪ ತಹಶೀಲ್ದಾರ್ 1 ಲಕ್ಷ ರೂಪಾಯಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಲೋಕಾಯುಕ್ತ DySP ಎನ್ಎಂ ಓಲೇಕಾರ್ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದ್ದು, ಲಂಚ ಸ್ವೀಕರಿಸುವಾಗ ಶಿವಾನಂದ ಅವರು ಸಿಕ್ಕಿಬಿದ್ದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ