ಕಾವೇರಿಗಾಗಿ ಮುಂದುವರಿದ ಹೋರಾಟ: KRS ಡ್ಯಾಂಗೆ ಮುತ್ತಿಗೆ, ವಾಟಾಳ್ ಸೇರಿ 50ಕ್ಕೂ ಹೆಚ್ಚು ಕಾರ್ಯಕರ್ತರು ವಶಕ್ಕೆ
ಕಾವೇರಿಗಾಗಿ ಕನ್ನಡಪರ ಸಂಘಟನೆಗಳಿಂದ ಹೋರಾಟ ಮುಂದುವರೆದಿದ್ದು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂಗೆ ಮುತ್ತಿಗೆ ಹಾಕಲಾಗಿದೆ. ಈ ವೇಳೆ ವಾಟಾಳ್ ನಾಗರಾಜ್ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದಿದ್ದಾರೆ.
ಮಂಡ್ಯ, ಅಕ್ಟೋಬರ್ 05: ಕಾವೇರಿಗಾಗಿ ಕನ್ನಡಪರ ಸಂಘಟನೆಗಳಿಂದ ಹೋರಾಟ ಮುಂದುವರೆದಿದ್ದು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂ (KRS dam) ಗೆ ಮುತ್ತಿಗೆ ಹಾಕಲಾಗಿದೆ. ಸಿಎಂ ಸ್ಟಾಲಿನ್ ಭಾವಚಿತ್ರ ಹರಿದು, ಕಪ್ಪುಪಟ್ಟಿ ಪ್ರದರ್ಶನ ಮಾಡಲಾಗಿದೆ. ಈ ವೇಳೆ KRS ಮುಖ್ಯದ್ವಾರದ ಬಳಿಯೇ ಬ್ಯಾರಿಕೇಡ್ ಹಾಕಿ ಜಲಾಶಯದ ಬಳಿ ಹೋರಾಟಗಾರರನ್ನು ಪೊಲೀಸರು ಅಡ್ಡಗಟ್ಟಿದ್ದಾರೆ. ವಾಟಾಳ್ ಸೇರಿ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದು ವಾಹನದಲ್ಲಿ ಪೊಲೀಸರು ಕರೆದೊಯ್ದಿದ್ದಾರೆ.
ನಮ್ಮನ್ನು ಏಕೆ ಬಿಡುವುದಿಲ್ಲ
ಈ ವೇಳೆ ಮಾತನಾಡಿರುವ ವಾಟಾಳ್ ನಾಗರಾಜ್ ಮಹಾರಾಜರ ಮನೆಯವರನ್ನು ಜಲಾಶಯದ ಒಳಗೆ ಬಿಟ್ಟಿದ್ದೀರಿ. ನಮ್ಮನ್ನು ಏಕೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ನಿಷೇಧಿತ ಪ್ರದೇಶ ಎಂದು ಪೊಲೀಸರು ಸಬೂಬು ನೀಡಿದ್ದಾರೆ. ನಮ್ಮ ಹೋರಾಟದ ಉದ್ದೇಶ ಏನು? ನಾವು KRSಗೆ ಹೋಗಲೇಬೇಕು. ಹಿರಿಯ ಅಧಿಕಾರಿಗಳನ್ನ ಕೇಳಿ ಬೇಗ ಅವಕಾಶ ಕೊಡಿಸುವಂತೆ ಪಟ್ಟು ಹಿಡಿದ್ದು, ಪೊಲೀಸರ ಜೊತೆ ವಾಟಾಳ್ ಮಾತುಕತೆ ಮಾಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಗಲಾಟೆ ಪ್ರಕರಣ; ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಕಿಡಿಕಾರಿದ ಪ್ರೀತಂ ಗೌಡ
ತಮಿಳುನಾಡಿಗೆ ಇನ್ನೂ ನೀರು ಹರಿಸುತ್ತಿದ್ದಾರೆ, ದಿಟ್ಟಕ್ರಮಕೈಗೊಳ್ಳಬೇಕು. ಸಿಎಂ ಸಿದ್ದರಾಮಯ್ಯನವರೇ ನಿಮ್ಮ ಜೀವನದಲ್ಲಿ ಇಂತಹ ಸಂದರ್ಭ ಸಿಗಲ್ಲ. ಯಾರ ಮಾತನ್ನೂ ಕೇಳದೆ ನೀರು ಹರಿಸುವುದಿಲ್ಲ ಎಂದು ಹೇಳಿದ್ದರು. ಅಧಿಕಾರ ಹೋಗುತ್ತಾ ಹೋಗಲಿ, ಸಿಎಂ ಸ್ಥಾನದಿಂದ ಇಳಿಸಲಾಗಲ್ಲ. ರಾಷ್ಟ್ರಪತಿ ಆಳ್ವಿಕೆ ತರುತ್ತಾರಾ ತರಲಿ, ಸರ್ಕಾರ ತೆಗೆದು ನೀರು ಬಿಡಲಾಗಲ್ಲ. ನಿಮಗೆ ಅದ್ಭುತ ಚಿಂತನೆಯಿದೆ, ನೀವೇ ಕೊನೆಯ ಕೊಂಡಿ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಈ ರಾಜ್ಯ ರೌಡಿಗಳ ಕೈಗೆ ಹೋಗುತ್ತದೆ. ರೌಡಿಗಳು ಚುನಾವಣೆಗೆ ಸ್ಪರ್ಧಿಸುತ್ತಾರೆ, ಅವರ ಗುರುತು ಲಾಂಗ್ ಆಗಿರುತ್ತೆ. ರೌಡಿಗಳೇ ಸಿಎಂ ಆಗುತ್ತಾರೆ, ಅಧಿಕಾರಿಗಳನ್ನು ಬಳಸಿ ಅಟ್ಟಹಾಸ ನಡೆಸುತ್ತಾರೆ. 20 ವರ್ಷಗಳ ಹಿಂದೆಯೇ ನಾನು ವಿಧಾನಸಭೆಯಲ್ಲಿ ಹೇಳಿದ್ದೆ. ಕರ್ನಾಟಕ ಉಳಿಸಿ ರೈತರಿಗೆ ಬೆಂಬಲ ನೀಡಿ, ನಾನು ಬೆಂಬಲ ಕೊಡುತ್ತೇನೆ. ಕಾವೇರಿ ವಿಚಾರದಲ್ಲಿ ಹೋರಾಟ ಮಾಡಲೇ ಬೇಕು. ನಮ್ಮ ಡ್ಯಾಮ್ಗಳಲ್ಲಿ ನೀರಿದ್ದರೆ ಇಟ್ಟುಕೊಳ್ಳಲು ಆಗಲ್ಲ, ಬಿಡಲೇ ಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ; ಭಕ್ತವತ್ಸಲ ಸಮಿತಿಯ ಮೂರು ಶಿಫಾರಸ್ಸಿಗೆ ಸಂಪುಟ ಅಸ್ತು
ಕಾವೇರಿ ಹೋರಾಟದಲ್ಲಿ ಮಾಜಿ ಸಂಸದ ಜಿ.ಮಾದೇಗೌಡರು ಜತೆಗಿದ್ದರು. ಮಂಡ್ಯದಲ್ಲಿ ಈಗ ಸುನಂದಾ ಜಯರಾಂ ಹೋರಾಟ ಮುನ್ನಡೆಸುತ್ತಿದ್ದಾರೆ. ಮಂಡ್ಯದ ರೈತರು ಪ್ರಾಮಾಣಿಕವಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಹಿಂದಿನ ರಾಜಕಾರಣಿಗಳು ಪ್ರಾಮಾಣಿಕವಾಗಿದ್ದರು. ಎಲ್ಲಿ ನೋಡಿದರೂ ಈಗ ಭ್ರಷ್ಟಾಚಾರ ತುಂಬಿದೆ ಎಂದು ಕಿಡಿಕಾರಿದ್ದಾರೆ.
ರೈತರು ಯಾವುದೇ ಹೋರಾಟ ಮಾಡಿದರೂ ನಮ್ಮ ಬೆಂಬಲವಿರುತ್ತದೆ. ನಿಮ್ಮ ಹೋರಾಟಕ್ಕೆ ಬೆಂಬಲ ನೀಡಿ ಕರ್ನಾಟಕ ಬಂದ್ ಮಾಡಲಾಗಿತ್ತು. ಕಾವೇರಿ ನಮಗೆ ಸಂಬಂಧವಿಲ್ಲ ಅನ್ನಬಾರದು, ಹೋರಾಟ ಮಾಡಬೇಕು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.