Five Rupees Doctor: ಹೆಸರಾಂತ 5 ರೂ ವೈದ್ಯ ಶಂಕರೇಗೌಡ ಸಂಪೂರ್ಣ ಚೇತರಿಕೆ, ವಿಶ್ರಾಂತಿ ಬಳಿಕ ಉಚಿತ ಚಿಕಿತ್ಸೆ ಮುಂದುವರೆಸುವೆ ಎಂದರು
ಅದೃಷ್ಟವಶಾತ್ ಅವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಅವರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಇದೀಗ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದ್ದು, ಶಂಕರೇಗೌಡ ಅವರು ಚೇತರಿಸಿಕೊಂಡಿದ್ದಾರೆ. 6 ವಾರಗಳ ವಿಶ್ರಾಂತಿ ಅವಶ್ಯಕತೆ ಇದೆ ಎಂದು ಹೃದಯ ತಜ್ಞ ಡಾ. ವಿವೇಕ್ ಜವಳಿ ಹೇಳಿದ್ದಾರೆ.
ಬೆಂಗಳೂರು: ಹೃದಯಾಘಾತಕ್ಕೆ ಒಳಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಮಂಡ್ಯದ 5 ರೂಪಾಯಿ ವೈದ್ಯರೆಂದು ಖ್ಯಾತಿ ಹೊಂದಿರುವ ಡಾ. ಶಂಕರೇಗೌಡ ಅವರು (Five Rupees Doctor) ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಈ ಕುರಿತು ಶುಕ್ರವಾರ ಫೋರ್ಟಿಸ್ ಅಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಶಂಕರೇಗೌಡ, ಒಂದು ತಿಂಗಳ ಹಿಂದೆ ಹೃದಯದಲ್ಲಿ ರಕ್ತದ ನಾಳಗಳು ಬ್ಲಾಕ್ ಆಗಿದ್ದ ಕಾರಣ ಹೃದಯಾಘಾತ ಸಂಭವಿಸಿತು. ಕೂಡಲೇ ಮೈಸೂರಿನಲ್ಲಿರುವ ಆಸ್ಪತ್ರೆಗೆ ದಾಖಲಾದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ವರ್ಗಾವಣೆ ಮಾಡಿದರು. ಇಲ್ಲಿನ ಚಿಕಿತ್ಸಾ ವಿಧಾನದಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಡಾ. ವಿವೇಕ್ ಜವಳಿ ಅವರ ತಂಡ ವಿಶೇಷ ಕಾಳಜಿ ವಹಿಸಿ ನನಗೆ ಚಿಕಿತ್ಸೆ ನೀಡಿದರು.
ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಇಲ್ಲಿನ ವೈದ್ಯರಿಗೆ ಧನ್ಯವಾದಗಳು. ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿಯಿಂದ ಚಿಕಿತ್ಸೆ ನೀಡಿದ್ದಾರೆ. ಜೊತೆಗೆ ನನ್ನ ಆರೋಗ್ಯದ ಸುಧಾರಣೆಗೆ ಕಾಳಜಿ ವಹಿಸಿದ ಪ್ರತಿಯೊಬ್ಬರಿಗೂ ನಾನು ಋಣಿ. ಸದ್ಯ ನಾನು ಸಂಪೂರ್ಣವಾಗಿ ಗುಣವಾಗಿದ್ದು, ವೈದ್ಯರ ಸಲಹೆ ಮೇರೆಗೆ 6 ವಾರಗಳು ವಿಶ್ರಾಂತಿ ಪಡೆದು ಬಳಿಕ, ಹಿಂದಿನಂತೆ 5 ರೂಪಾಯಿ ಚಿಕಿತ್ಸೆ ಮುಂದುವರೆಸುವೆ.
42 ವರ್ಷದಿಂದ Five Rupees Doctor ಸೇವೆ: ಕಳೆದ 42 ವರ್ಷದಿಂದ ಮಂಡ್ಯದಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದು ನನಗೆ ಆತ್ಮತೃಪ್ತಿ ನೀಡಿದೆ. ಮುಂದೆಯೂ ಕೂಡ ಈ ವೃತ್ತಿ ಮುಂದುವರೆಸಿಕೊಂಡು ಹೋಗಲಿದ್ದೇನೆ. ಕೇವಲ ವೈದ್ಯನಲ್ಲದೇ ಕೃಷಿಕನಾಗಿಯೂ ನಾನು ದುಡಿದ್ದೇನೆ. 2010 ರಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆ. ರಾಜಕೀಯಕ್ಕೆ ಕಾಲಿಟ್ಟ ಮೇಲೂ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಕಸುಬು ಬಿಡಲಿಲ್ಲ ಎಂದರು. ಡಾ. ಶಂಕರೇಗೌಡ ಅವರಿಗೆ ಪತ್ನಿ (ರುಕ್ಮಿಣಿ) ಮತ್ತು ಒಬ್ಬ ಪುತ್ರಿ (ಉಜ್ವಲಾ) ಇದ್ದಾರೆ.
ಶಂಕರೇಗೌಡ ಚೇತರಿಸಿಕೊಂಡಿದ್ದಾರೆ, ವಿಶ್ರಾಂತಿಯ ಅವಶ್ಯಕತೆ ಇದೆ: ಹೃದಯ ತಜ್ಞ ಡಾ. ವಿವೇಕ್ ಜವಳಿ
ಹೃದಯ ತಜ್ಞ ಡಾ. ವಿವೇಕ್ ಜವಳಿ ಮಾತನಾಡಿ, 67 ವರ್ಷ ವಯಸ್ಸಿನ ಡಾ. ಶಂಕರೇಗೌಡ ಅವರು ಮಂಡ್ಯದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು, ಇದರಿಂದ ಅವರ ಹೃದಯವು ಹೆಚ್ಚಿನ ಹಾನಿಗೆ ಒಳಗಾಗಿತ್ತು. ಪ್ರಾರಂಭದಲ್ಲಿ ಮೈಸೂರು ಆಸ್ಪತ್ರೆಗೆ ದಾಖಲಿಸಿತ್ತಾದರೂ ಎದೆನೋವು ಹೆಚ್ಚಳವಾದ್ದರಿಂದ ಅವರನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಹಲವು ಪರೀಕ್ಷೆಗಳ ನಂತರ ಅವರಿಗೆ ಪರಿಧಮನಿಯ ಸಿಂಡ್ರೋಮ್ ಮತ್ತು ಮಯೋಕಾರ್ಡಿಯಲ್ ಇನ್‌ಫೆಕ್ಷನ್ ಆಗಿರುವುದು ಕಂಡು ಬಂತು. ಜೊತೆಗೆ, ಟ್ರಿಪಲ್ ವೆಸಲ್ ಪರಿಧಮನಿಯ ಕಾಯಿಲೆಯಿಂದಲೂ ಸಹ ಬಳಲುತ್ತಿದ್ದು, ಉಸಿರಾಟದ ತೊಂದರೆಯನ್ನು ಹೊಂದಿದ್ದರು.
ಅದೃಷ್ಟವಶಾತ್ ಅವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಅವರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಮೇ ಮಧ್ಯದಲ್ಲಿ ಒಂದು ವಾರದವರೆಗೆ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ನಂತರ ಅವರ ವಿಶ್ರಾಂತಿಗಾಗಿ ಮಂಡ್ಯಕ್ಕೆ ವಾಪಾಸ್ ಕಳುಹಿಸಲಾಗಿತ್ತು. ಅವರು ವಿಶ್ರಾಂತಿ ಪಡೆದು ಅವರ ಆರೋಗ್ಯ ಸ್ಥಿರವಾದ ಬಳಿಕ ಅವರಿಗೆ ಪರಿಧಮನಿಯ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಲು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದೆವು, ಇದೀಗ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದ್ದು, ಶಂಕರೇಗೌಡ ಅವರು ಚೇತರಿಸಿಕೊಂಡಿದ್ದಾರೆ. 6 ವಾರಗಳ ವಿಶ್ರಾಂತಿ ಅವಶ್ಯಕತೆ ಇದೆ ಎಂದು ವಿವರಿಸಿದರು.